Political Analysis: ಮೋದಿ ಭೇಟಿಯ ರಾಜಕೀಯ ಲೆಕ್ಕಾಚಾರ; ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಲಾಭದ ನಿರೀಕ್ಷೆ
ಮೋದಿ ಭೇಟಿಯಿಂದ ಹಳೇ ಮೈಸೂರು ಭಾಗದಲ್ಲಿ ದೊಡ್ಡ ಲಾಭವಾಗಬಹುದು ಎಂದು ಬಿಜೆಪಿ ನಾಯಕರು ಲೆಕ್ಕ ಹಾಕಿದ್ದಾರೆ.
ಮೈಸೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎರಡು ದಿನಗಳ ಕರ್ನಾಟಕ ಭೇಟಿ ಮುಗಿಸಿ ದೆಹಲಿಗೆ ತೆರಳಿದ ಬೆನ್ನಿಗೆ ಅವರ ಭೇಟಿಯಿಂದ ಯಾರಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರಗಳು (Political Anaysis) ಗರಿಗೆದರಿವೆ. ಮೋದಿ ಭೇಟಿಯಿಂದ ಹಳೇ ಮೈಸೂರು (Old Mysore) ಭಾಗದಲ್ಲಿ ದೊಡ್ಡ ಲಾಭವಾಗಬಹುದು ಎಂದು ಬಿಜೆಪಿ ನಾಯಕರು ಲೆಕ್ಕ ಹಾಕಿದ್ದಾರೆ. 2023ರ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಹೈಕಮಾಂಡ್ ಎರಡು ತಿಂಗಳ ಹಿಂದೆ ರಾಜ್ಯ ನಾಯಕರಿಗೆ ಹೈಕಮಾಂಡ್ ವಿವಿಧ ಟಾಸ್ಕ್ಗಳನ್ನು ನೀಡಿತ್ತು. ಏಪ್ರಿಲ್ 1ರಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಕೋರ್ ಕಮಿಟಿ ಸಭೆಯೂ ನಡೆದಿತ್ತು.
ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಸೂಚನೆ ನೀಡಿದ್ದರು. ‘ನೀವು ಬಿಟ್ಟರೂ ನಾನು ಬಿಡುವುದಿಲ್ಲ’ ಎಂದು ಅಮಿತ್ ಶಾ ಈ ವೇಳೆ ಸೂಚ್ಯವಾಗಿ ಹೇಳಿದ್ದರು. ಪಕ್ಷದ ಸಂಘಟನೆಗೆ ತಾವೇ ಅಜೆಂಡಾ ರೂಪಿಸಲು ಮುಂದಾಗಿದ್ದರು. ಕೇಂದ್ರದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಲುಪಿಸಿ, ಫಲಾನುಭವಿಗಳಿಗೆ ಮನಗಾಣಿಸುವುದನ್ನು ಮೊದಲ ಟಾಸ್ಕ್ ಆಗಿ ಇರಿಸಿಕೊಳ್ಳಲಾಗಿತ್ತು.
ಈ ಟಾಸ್ಕ್ನ ಭಾಗವಾಗಿಯೇ ನಿನ್ನೆ (ಜೂನ್ 20) ಪ್ರಧಾನಿ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಮೈಸೂರು ಭಾಗದಲ್ಲಿ ದೇವಾಲಯ, ಮಠಕ್ಕೆ ಭೇಟಿ ನೀಡುವ ಮೂಲಕ ವಿವಿಧ ಸಮುದಾಯಗಳಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಯತ್ನಿಸಿದರು ಎಂದು ಹೇಳಲಾಗಿದೆ.
ಪ್ರಬಲ ಲಿಂಗಾಯತ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ ಬಿಜೆಪಿ ನಂತರ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಗದ್ದುಗೆ ನೀಡಿತ್ತು. ಹಿಜಾಬ್ ವಿವಾದ, ಪಠ್ಯಪುಸ್ತಕ ಪರಿಷ್ಕರಣೆ, ಮಸೀದಿಗಳಲ್ಲಿ ಆಜಾನ್ ಕೂಗಲು ಧ್ವನಿವರ್ಧಕ ಬಳಕೆಗೆ ವಿರೋಧ ಸೇರಿದಂತೆ ಹಲವು ವಿವಾದಗಳು ಒಂದಾದ ನಂತರ ಒಂದರಂತೆ ಸದ್ದು ಮಾಡಿದ್ದವು. ಈ ವಿವಾದಗಳನ್ನೂ ಕೋಮು ಧ್ರುವೀಕರಣ ಪ್ರಯತ್ನದ ಭಾಗ ಹಾಗೂ ಮುಂದಿನ ಚುನಾವಣೆಗೆ ಸಿದ್ಧತೆ ಎಂದೇ ವಿಶ್ಲೇಷಿಸಲಾಗಿತ್ತು. ಈ ವಿವಾದಗಳಿಂದ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಘನತೆಗೆ ತುಸು ಧಕ್ಕೆ ಬಂದಿದ್ದೂ ಸುಳ್ಳಲ್ಲ.
ಆದರೆ ಇದೀಗ ಚುನಾವಣೆ ಸಿದ್ಧತೆಯ ತಂತ್ರವನ್ನೇ ಬದಲಿಸಲು ಬಿಜೆಪಿ ಮುಂದಾದ ಹಾಗಿದೆ. ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಾದ ಜನ್ ಧನ್, ಕಿಸಾನ್ ಸಮ್ಮಾನ್, ಫಸಲ್ ಬಿಹಾ ಯೋಜನಾ, ಮುದ್ರಾ ಯೋಜನಾ, ಜಲ್ ಮಿಷನ್ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳು ಕರ್ನಾಟಕದಲ್ಲಿ ಉಂಟು ಮಾಡಿರುವ ಪರಿವರ್ತನೆಯನ್ನೇ ಮುಂಚೂಣಿಗೆ ತರಲು ಬಿಜೆಪಿ ನಿರ್ಧರಿಸಿದೆ. ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವ ಬದಲು, ಫಲಾನುಭವಿಗಳಿಗೆ ಪ್ರಚಾರ ಸಿಗುವ ತಂತ್ರವನ್ನು ಬಿಜೆಪಿ ಬುದ್ಧಿವಂತಿಕೆಯಿಂದ ಅನುಸರಿಸಿತು.
ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಿದ್ದು, ಕ್ಷೇತ್ರವಾರು ಸಂಘಟನೆಯನ್ನೂ ಚುರುಕುಗೊಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಜನಪ್ರಿಯ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ, ವಾಟ್ಸ್ಆ್ಯಪ್ ಗ್ರೂಪ್ಗಳನ್ನು ರಚಿಸುವ, ಸರ್ಕಾರದ ಕೊಡುಗೆಗಳನ್ನು ಜನರಿಗೆ ಮನಗಾಣಿಸಲು ಪ್ರಯತ್ನಗಳಿಗೂ ವೇಗ ಸಿಕ್ಕಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ