ಮೈಸೂರು: ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ. ಒಂದು ವೇಳೆ ನಿರ್ಮಿಸಿದರೆ ಒಡೆದು ಹಾಕುವುದು ನಿಶ್ಚಿತ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ.13ರಂದು ಮೈಸೂರಿನ ರಂಗಾಯಣದಲ್ಲಿ ಟಿಪ್ಪು ನಿಜ ಕನಸುಗಳು ನಾಟಕದ ವೇಳೆ ಸಂಸದ ಪ್ರತಾಪ್ ಸಿಂಹ ಮಾಡಿದ್ದ ಭಾಷಣ ವೈರಲ್ ಆಗಿದೆ. ಈ ಬೆನ್ನಲ್ಲೇ ರಾತ್ರೋ ರಾತ್ರಿ ಬಸ್ ಶೆಲ್ಟರ್ ಮಾದರಿ ಬದಲಾಗಿದೆ.
ಬಸ್ ನಿಲ್ದಾಣಗಳ ಮೇಲೆ ಗುಂಬಜ್ ಇರುವುದನ್ನ ಗಮನಿಸಿದ್ದೇನೆ. ಅಂತಹ ಗುಂಬಜ್ ಇರುವ ಬಸ್ ನಿಲ್ದಾಣ ತೆರವಿಗೆ ಹೇಳಿದ್ದೇನೆ. ಮಧ್ಯದಲ್ಲಿ ದೊಡ್ಡ ಗುಂಬಜ್ ಹಾಗೂ ಅಕ್ಕ ಪಕ್ಕ ಚಿಕ್ಕ ಗುಂಬಜ್ ಗಳಿದ್ರೆ ಅದು ಮಸೀದಿನೇ. ಕೆಆರ್ ಐಡಿಎಲ್ ಇಂಜಿನಿಯರ್ ಗಳಿಗೆ 3-4 ದಿನದಲ್ಲಿ ಗುಂಬಜ್ ತೆರವುಗೊಳಿಸಲು ಸೂಚಿಸಿದ್ದೇನೆ. ಇಲ್ಲವಾದ್ರೆ ಜೆಸಿಬಿ ತಂದು ನಾನೇ ಒಡೆದು ಹಾಕುತ್ತೇನೆ ಎಂದು ಪ್ರತಾಪ್ ಸಿಂಹ ಭಾಷಣ ಮಾಡಿದ್ದಾರೆ.
ಇದನ್ನೂ ಓದಿ: ನಕಲಿ ಫುಡ್ ಆ್ಯಪ್ಗಳ ಮೂಲಕ ಗ್ರಾಹಕರ ಖಾತೆಗೆ ಕನ್ನ: ಬೆಳಕಿಗೆ ಬಂದ ಆನ್ಲೈನ್ ವಂಚನೆಯ ಮತ್ತೊಂದು ಮುಖ
ಇನ್ನು ಇದೇ ಭಾಷಣದಲ್ಲಿ ಜಾಫರ್ ಷರೀಪ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಎಸ್ ನಿಜಲಿಂಗಪ್ಪನವರ ಕಾರ್ ಡ್ರೈವರ್ ಆಗಿದ್ದ ಜಾಫರ್ ಶರೀಫ್, ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಿಸಿದ್ರು. ಕಳ್ಳ ಕಿವಿ ಇಟ್ಟುಕೊಂಡು ಇಂದಿರಾಗಾಂಧಿ ಬಳಿ ಹೋಗಿ ಮಾಹಿತಿ ಕೊಟ್ಟು ಲೋಕಸಭಾ ಚುನಾವಣಾಗೆ ಟಿಕೆಟ್ ಗಿಟಿಸಿಕೊಂಡು ಗೆದ್ದು ರೈಲ್ವೆ ಸಚಿವರಾಗಿದ್ದವರು. 1980 ರಲ್ಲಿ ಟಿಪ್ಪು ಎಕ್ಸ್‌ಪ್ರೆಸ್ ಪ್ರಾರಂಭ ಮಾಡುತ್ತಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ರೈಲ್ವೆ ಇಲಾಖೆಯಲ್ಲಿ ರೈಲಿನ ಹೆಸರು ಬದಲಾಯಿಸಿದ್ದೇನೆ. ನಾಲ್ಕು ವರ್ಷ ಸತತ ಪ್ರಯತ್ನ ಮಾಡಿ ಹೆಸರು ಬದಲಾವಣೆ ಮಾಡಿದ್ದೇನೆ. ಮೈಸೂರಿನ ಪ್ರತಿಯೊಂದು ಸಂಕೇತವೂ ಮಹಾರಾಜರ ಕೊಡುಗೆ. ರೈಲ್ವೆ ಸ್ಟೇಷನ್ ಗೆ ಚಾಮರಾಜ ಒಡೆಯರ್ ಹೆಸರು ಇಡುತ್ತೇವೆ ಹೊರತು ಟಿಪ್ಪುವಿನ ಯಾವ ಗುರುತುಗಳು ಸಿಗದ ಹಾಗೇ ಮಾಡುತ್ತೇವೆ ಎಂದು ಭಾಷಣದಲ್ಲಿ ಗುಡುಗಿದ್ದಾರೆ.
ಗುಂಬಜ್ ಮಾದರಿ ಬಸ್ ಶೆಲ್ಟರ್ ಒಡೆದು ಹಾಕುವ ಎಚ್ಚರಿಕೆ ನೀಡಿದ್ದ ಸಂಸದ ಪ್ರತಾಪಸಿಂಹ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಬಸ್ ಶೆಲ್ಟರ್ ಬದಲಾಗಿದೆ. ಇದೀಗ ಬಸ್ ಶೆಲ್ಟರ್ ಗುಂಬಜ್ ಮೇಲೆ ಕಳಶ ಪ್ರತಿಷ್ಠಾಪನೆ ಮಾಡಲಾಗಿದೆ. ಶಾಸಕ ಎಸ್ಎ ರಾಮದಾಸ್ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣದ ಶೆಲ್ಟರ್ನಲ್ಲಿ ಮೂರು ಗುಂಬಜ್‌ಗಳ ಮೇಲೆ ಕಳಸ ಮಾದರಿಯ ಆಕೃತಿ ನಿರ್ಮಾಣ ಮಾಡಲಾಗಿದೆ.