ನಕಲಿ ಫುಡ್ ಆ್ಯಪ್ಗಳ ಮೂಲಕ ಗ್ರಾಹಕರ ಖಾತೆಗೆ ಕನ್ನ: ಬೆಳಕಿಗೆ ಬಂದ ಆನ್ಲೈನ್ ವಂಚನೆಯ ಮತ್ತೊಂದು ಮುಖ
ಆ್ಯಪ್ನ ಲಿಂಕ್ ಒಂದನ್ನು ಕಳಿಸಿ, ಇನ್ಸ್ಟಾಲ್ ಮಾಡಿಕೊಂಡು ಅದರ ಸೂಚನೆ ಅನುಸರಿಸಿ ಎಂದಿದ್ದರು. ಆ್ಯಪ್ ಇನ್ಸ್ಟಾಲ್ ಆದ ತಕ್ಷಣ ಹಂತಹಂತವಾಗಿ ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತಗೊಂಡಿತ್ತು.
ಬೆಂಗಳೂರು: ಪ್ರತಿಷ್ಠಿತ ಫುಡ್ ಆ್ಯಪ್ಗಳ ಹೆಸರಿನಲ್ಲಿ ಹಲವು ನಕಲಿ ಫುಡ್ ಆ್ಯಪ್ಗಳು ನಗರದಲ್ಲಿ ಸಕ್ರಿಯವಾಗಿದ್ದು ಗ್ರಾಹಕರ ಖಾತೆಗಳಿಗೆ ಕನ್ನ ಹಾಕಿ ವಂಚನೆ ಮಾಡುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಜಾಲತಾಣಗಳಲ್ಲಿ ಆಹಾರಗಳ ಜಾಹೀರಾತುಗಳೊಂದಿಗೆ ಜೊಮ್ಯಾಟೋ, ಸ್ವಿಗಿ, ಖಾಂಧಾನಿ, ರಾಜಧಾನಿ ಫುಡ್, ರುಚಿ ಸಾಗರ್ ಹೆಸರಲ್ಲಿ ನಕಲಿ ಌಪ್ಗಳನ್ನು ಸೈಬರ್ ಕಳ್ಳರು ಸೃಷ್ಟಿಸಿದ್ದು ಗ್ರಾಹಕರಿಂದ ಸೂಕ್ಷ್ಮ ಮಾಹಿತಿ ಸಂಗ್ರಹಿಸಿ, ಮೋಸ ಮಾಡುತ್ತಿದ್ದಾರೆ. ಇಂಥದ್ದೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಇಮ್ರಾನ್ ಮತ್ತು ದೀಪಿಕಾ ಎಂಬುವವರು ನಕಲಿ ಆ್ಯಪ್ಗಳಿಂದ ಒಟ್ಟು ₹ 2.23 ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬಂಧ ಬೆಂಗಳೂರು ಪೂರ್ವ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಸ್ಕಾಂ, ಬ್ಯಾಂಕ್ ಕಾಲ್ಸೆಂಟರ್ ಮತ್ತು ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ನಗರದಲ್ಲಿ ಇಷ್ಟು ದಿನ ಸೈಬರ್ ವಂಚನೆಗಳು ನಡೆಯುತ್ತಿದ್ದವು. ಆದರೆ ಈಗ ಆಹಾರದ ವಿಚಾರದಲ್ಲಿ ವಂಚಕರು ತಮ್ಮ ಕೈಚಳಕ ತೋರಲು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಂಚಕರು ಆಹಾರದ ಜಾಹೀರಾತು ನೀಡುತ್ತಾರೆ. ಈ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿ, ಅಲ್ಲಿರುವ ಸೂಚನೆಗಳನ್ನು ಅನುಸರಿಸಿದರೆ ನಿಮ್ಮ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ. ಇವು ಜೊಮೆಟೊ ಅಥವಾ ಸ್ವಿಗಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿದು ಗ್ರಾಹಕರು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಹಂತಹಂತವಾಗಿ ಹಣ ಮಾಯವಾಗುತ್ತಿದೆ ಎಂದು ಮೋಸಹೋದ ಗ್ರಾಹಕರು ಅಲವತ್ತುಕೊಂಡಿದ್ದಾರೆ.
ಲಿಂಕ್ ಕ್ಲಿಕ್ ಮಾಡಿ ₹ 2 ಲಕ್ಷ ಕಳೆದುಕೊಂಡರು
ಖಾಂದಾನಿ ರಾಜಧಾನಿ ರೆಸ್ಟೊರೆಂಟ್ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ಪ್ರಕಟವಾಗಿದ್ದ ಜಾಹೀರಾತು ನೋಡಿದ್ದ ಇಮ್ರಾನ್ ಉಲ್ಲಾ ಬೇಗ್ ಆಹಾರ ತರಿಸಿಕೊಳ್ಳಲೆಂದು 62917 42717 ಸಂಖ್ಯೆಗೆ ಕರೆ ಮಾಡಿದ್ದರು. ಈ ವೇಳೆ ಕರೆ ಸ್ವೀಕರಿಸಿದ ವ್ಯಕ್ತಿಯೊಬ್ಬರು, ‘ನಿಮ್ಮ ಆರ್ಡರ್ ಡೆಲಿವರಿಗೆ ₹ 250 ನೀಡಿ ಕನ್ಫರ್ಮ್ ಮಾಡಿಕೊಳ್ಳಿ’ ಎಂದು ಹೇಳಿದ್ದರು. ಇಮ್ರಾನ್ ಅವರು ಹಣ ಪಾವತಿಸಿದರೂ ಅವರು ಹಣ ಬಂದಿಲ್ಲ ಎಂದು ಆ್ಯಪ್ನ ಲಿಂಕ್ ಒಂದನ್ನು ಕಳಿಸಿ, ಇನ್ಸ್ಟಾಲ್ ಮಾಡಿಕೊಂಡು ಅದರ ಸೂಚನೆ ಅನುಸರಿಸಿ ಎಂದಿದ್ದರು. ಆ್ಯಪ್ ಇನ್ಸ್ಟಾಲ್ ಆದ ತಕ್ಷಣ ಹಂತಹಂತವಾಗಿ ಅವರು ಐಸಿಐಸಿಐ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಮೂಲಕ ₹ 2,23,858 ಹಣ ಪಾವತಿಯಾಗಿತ್ತು. ಕಂಗಾಲಾದ ಇಮ್ರಾನ್ ಉಲ್ಲಾ ಬೇಗ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ವಂಚಕರ ಮಾತು ನಂಬಿದ್ದಕ್ಕೆ 61 ಸಾವಿರ ಕಳವು
ಇದೇ ಮಾದರಿಯಲ್ಲಿ ಫೇಸ್ಬುಕ್ ಜಾಹೀರಾತು ನಂಬಿ ಆಹಾರದ ಆರ್ಡರ್ ಮಾಡಲು ಯತ್ನಿಸಿದ ಮತ್ತೋರ್ವ ಗ್ರಾಹಕರಾದ ಬಿ.ದೀಪಿಕಾ ಸಹ ₹ 61 ಸಾವಿರ ಕಳೆದುಕೊಂಡಿದ್ದಾರೆ. ಖಾಂದಾನಿ ರಾಜಧಾನಿ ರೆಸ್ಟೊರೆಂಟ್ ಮೂಲಕ ಆಹಾರ ತರಿಸಿಕೊಳ್ಳಲು ಯತ್ನಿಸಿದ ಅವರು, 62917 42717 ಸಂಖ್ಯೆಗೆ ಕರೆ ಮಾಡಿದ್ದರು. ಅತ್ತಲಿಂದ ಬಂದ ಲಿಂಕ್ ಕ್ಲಿಕ್ ಮಾಡಿ, ರುಚಿ ಸಾಗರ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡಿದ್ದರು. ನಂತರ ಅವರ ಕ್ರೆಡಿಟ್ ಕಾರ್ಡ್ನಿಂದ ಹಂತಹಂತವಾಗಿ ₹ 61,000 ಕಡಿತವಾಯಿತು ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ.
ಸೈಬರ್ ವಂಚನೆ ಪ್ರಕರಣ ಮುಚ್ಚಿ ಹಾಕುತ್ತಿರುವ ಪೊಲೀಸರು: ಹೈಕೋರ್ಟ್ ವಿಷಾದ
ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಪೊಲೀಸರು ಸಮರ್ಪಕ ತನಿಖೆ ನಡೆಸುತ್ತಿಲ್ಲ ಎಂದು ದೂರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ಪೊಲೀಸರು ಸೈಬರ್ ವಂಚನೆಗ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುವ ಮೂಲಕ ಸತ್ಯಾಂಶ ಬಯಲಿಗೆಳೆಯಬೇಕು. ಅದರ ಬದಲಿಗೆ ಅಂಥ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ’ ಆತಂಕ ವ್ಯಕ್ತಪಡಿಸಿತು.
‘ಡಿಜಿಟಲ್ ಪಾವತಿ ವಂಚನೆ ಪ್ರಕರಣಗಳಲ್ಲಿ ಹಣ ಕಳೆದುಕೊಂಡವರಿಗೆ ಪುನಃ ಹಣ ಕೊಡಿಸಲು ಪೊಲೀಸರೇ ಕಾನೂನುಬಾಹಿರ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಫೋನ್ ಪೇ ಪ್ರೈ.ಲಿ ಕಂಪನಿಯ ನಿರ್ದೇಶಕ ರಾಹುಲ್ ಚಾರಿ ಅವರ ಖಾತೆಯಿಂದ ಹಣ ಕಡಿತ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಪುನಃ ಯಾವ ಖಾತೆಯಿಂದ ಹಣ ಕಡಿತ ಮಾಡಲಾಗಿದೆಯೋ ಅದೇ ಖಾತೆಗೆ ವರ್ಗಾಯಿಸಬೇಕು’ ಎಂದು ಹೈಕೋರ್ಟ್ ನಿರ್ದೇಶನ ನೀಡಿತು.
Published On - 9:34 am, Mon, 14 November 22