ತಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಗಂಡನೊಂದಿಗೆ ಪತ್ನಿ ಜಗಳ: ಮನನೊಂದು ತಾಯಿ-ಮಗ ಆತ್ಮಹತ್ಯೆ
ತಾಯಿ-ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ನಗರದಲ್ಲಿ ತಾಯಿ-ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಯಿ ಭಾಗ್ಯಮ್ಮ(57), ಪುತ್ರ ಶ್ರೀನಿವಾಸ್(33) ಮೃತ ದುರ್ದೈವಿಗಳು. ವಯಸ್ಸಾದ ಹಿನ್ನೆಲೆ ಶ್ರೀನಿವಾಸ್ ಕೆಲವು ದಿನಗಳ ಹಿಂದೆ ತಾಯಿಯನ್ನ ಊರಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಆದರೆ ಇದೇ ವಿಚಾರವಾಗಿ ಶ್ರೀನಿವಾಸ್ ಪತ್ನಿ ಸಂಧ್ಯಾ ತನ್ನ ಗಂಡನೊಂದಿಗೆ ನಿತ್ಯ ಜಗಳ ಮಾಡುತ್ತಿದ್ದಳು. ಇಂದು ಬೆಳಗ್ಗೆಯೂ ಇದೇ ವಿಚಾರಕ್ಕೆ ದಂಪತಿ ಜಗಳವಾಡಿದ್ದಾರೆ. ಬಳಿಕ ಮನನೊಂದು ಶ್ರೀನಿವಾಸ್ ತನ್ನ ತಾಯಿಯೊಂದಿಗೆ ತಾವು ವಾಸವಾಗಿದ್ದ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ಮೃತ ಶ್ರೀನಿವಾಸ್ ಸಂಧ್ಯಾ ಎಂಬುವವರೊಂದಿಗೆ ಮದುವೆಯಾಗಿ 8 ವರ್ಷವಾಗಿದ್ದು, ದಂಪತಿಗೆ ಆರು ವರ್ಷದ ಮಗು ಕೂಡ ಇದೆ.
ಗೋವಿನಜೋಳ ಮಷಿನ್ ಚಕ್ರಕ್ಕೆ ಸಿಲುಕಿ ಮಹಿಳೆ ಸಾವು
ಬಾಗಲಕೋಟೆ: ಗೋವಿನಜೋಳ ಮಷಿನ್ ಚಕ್ರಕ್ಕೆ ಸಿಲುಕಿ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಬಾಗಲಕೋಟೆ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಗ್ರಾಮದಲ್ಲಿ ನಡೆದಿದೆ. ಕೂಲಿ ಕೆಲಸಕ್ಕೆ ಬಂದಿದ್ದ ರೇಣುಕಾ ಮಾದರ (45) ಮೃತ ದುರ್ದೈವಿ. ಗೋವಿನಜೋಳ ಮಷಿನ್ ಚಕ್ರಕ್ಕೆ ಸೀರೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
1 ವರ್ಷದಿಂದ ತಲೆಮರೆಸಿಕೊಂಡಿದ್ದ ಕಳ್ಳನ ಬಂಧನ: 1 ಕೆಜಿ 714 ಗ್ರಾಂ ಚಿನ್ನಾಭರಣ ಜಪ್ತಿ
ಹಾಸನ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಕತರ್ನಾಕ್ ಕಳ್ಳನನ್ನು ಸೆರೆ ಹಿಡಿದು 1 ಕೆಜಿ 714 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆ ಮೂಲಕ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಕೇಸ್ನ್ನು ಹಾಸನ ಪೊಲೀಸರು ಭೇದಿಸಿದ್ದಾರೆ. ಮೊಹಮ್ಮದ್ ಖಾಲಿದ್ ಬಂಧಿತ ಆರೋಪಿ. 2021ರ ಸೆ. 7ರಂದು ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕಳ್ಳತನ ನಡೆದಿತ್ತು. ಚಿಕ್ಕಮಗಳೂರು ಜಿಲ್ಲೆಯ ದಾಸಯ್ಯನಗುತ್ತಿ ಗ್ರಾಮದ ಮೊಹಮ್ಮದ್ ಸಿನಿಮೀಯ ರೀತಿಯಲ್ಲಿ ಮನೆ ದರೋಡೆ ಮಾಡಿದ್ದ. ಮದುವೆಗೆಂದು ಬ್ಯಾಂಕ್ ಲಾಕರ್ನಿಂದ 2 ಕೆಜಿ ಚಿನ್ನ, ಕೆಜಿಗಟ್ಟಲೆ ಬೆಳ್ಳಿ ಆಭರಣವನ್ನು ರಘು ಎನ್ನುವವರು ಮನೆಗೆ ತಂದಿದ್ದರು. ಯಾರೂ ಇಲ್ಲದ ವೇಳೆ ಮನೆ ಬಾಗಿಲು ಮುರಿದು ಕಳ್ಳತನ ಮಾಡಲಾಗಿತ್ತು. ಹಾಸನದ ಪೆನ್ಶೆನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಬೆಂಗಳೂರಿನ ಮೂವರು ದುರ್ಮರಣ
ಬೆಂಗಳೂರು: ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಬೆಂಗಳೂರಿನ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಬಳಿಯ ಬೆಂಗಳೂರು-ಪೂತಲಪಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬೆಂಗಳೂರಿನ ಬಸವಣ್ಣನಗರದ ನಿವಾಸಿ ಅಶೋಕ್ ಬಾಬು(31), 28 ವರ್ಷದ ಪತ್ನಿ, 2 ವರ್ಷದ ಮಗು ಸಾವನ್ನಪ್ಪಿದೆ. ಮೂವರು kA53 mh 1858 ರ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚಿತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಾಲುಜಾರಿ ಹೊಂಡಕ್ಕೆ ಬಿದ್ದು ಬಾಲಕಿ ಮತ್ತು ಯುವತಿ ಸಾವು
ಕಲಬುರಗಿ: ಕಾಲುಜಾರಿ ಹೊಂಡಕ್ಕೆ ಬಿದ್ದು ಬಾಲಕಿ ಮತ್ತು ಯುವತಿ ಸಾವನ್ನಪ್ಪಿರುವ ಘಟನೆ ಶಹಬಾದ್ ತಾಲೂಕಿನ ರಾಮಘಡ್ ಕಾಲೋನಿಯ ಬಳಿ ನಡೆದಿದೆ. ಮಾಣಿಕಮ್ಮ ದಾಸರ್(20) ಹಾಗೂ ಕೀರ್ತಿಕಾ(12) ಮೃತ ದುರ್ದೈವಿಗಳು. ಬಾಲಕಿ ಮತ್ತು ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:01 pm, Sun, 13 November 22