Bharat Jodo Yatra: ಬದನವಾಳು ಗ್ರಾಮೋದ್ಯೋಗ ಕೇಂದ್ರದ ಮಹಿಳೆಯರೊಂದಿಗೆ ರಾಹುಲ್ ಗಾಂಧಿ ಸಂವಾದ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 02, 2022 | 11:51 AM

ರಾಹುಲ್ ಗಾಂಧಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಿನ ಮಾಹಿತಿ ನೀಡಿದರು. ‘ಇವರು ಹೆಚ್ಚು ಕೆಲಸ ಮಾಡುತ್ತಾರೆ. ಆದರೆ ಸಂಬಳ ಕಡಿಮೆ’ ಎಂದರು.

Bharat Jodo Yatra: ಬದನವಾಳು ಗ್ರಾಮೋದ್ಯೋಗ ಕೇಂದ್ರದ ಮಹಿಳೆಯರೊಂದಿಗೆ ರಾಹುಲ್ ಗಾಂಧಿ ಸಂವಾದ
Follow us on

ಮೈಸೂರು: ಭಾರತ್ ಜೋಡೋ (Bharat Jodo Padayatra) ಪಾದಯಾತ್ರೆಯ ಭಾಗವಾಗಿ ಕರ್ನಾಟಕದಲ್ಲಿ ಸಂಚರಿಸುತ್ತಿರುವ ರಾಹುಲ್ ಗಾಂಧಿ (Rahul Gandhi) ಗಾಂಧಿ ಜಯಂತಿ ಪ್ರಯುಕ್ತ ಭಾನುವಾರ (ಅ.2) ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮದಲ್ಲಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಜೊತೆಗೆ ಸಂವಾದ ನಡೆಸಿದರು. ‘ನೇಯ್ಗೆ ಮಾಡುವ ದಾರವನ್ನು ಯಾರು ಮಾಡ್ತಾರೆ? ದಾರ ಕೈಯಲ್ಲಿ ಮಾಡ್ತೀರಾ ಅಥವಾ ಯಂತ್ರದಲ್ಲಿ ಮಾಡ್ತೀರಾ ಎಂದು ಪ್ರಶ್ನಿಸಿದರು. ‘ದಾರವನ್ನು ನಾವೇ ತಯಾರು ಮಾಡಿಕೊಳ್ಳುತ್ತೇವೆ. ಕೈಯಿಂದಲೇ ದಾರವನ್ನು ಸಿದ್ಧಪಡಿಸಿಕೊಳ್ಳುತ್ತೇವೆ. ಪ್ರತಿದಿನ ಬೆಇಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕೆಲಸ ಮಾಡುತ್ತೇವೆ’ ಎಂದು ಮಹಿಳೆಯರು ರಾಹುಲ್ ಗಾಂಧಿಗೆ ಪ್ರತಿಕ್ರಿಯಿಸಿದರು.

‘ಈ ದಾರದಲ್ಲಿ ಎಷ್ಟು ಮೀಟರ್ ಬಟ್ಟೆ ಬರುತ್ತದೆ? ಅಷ್ಟು ಮೀಟರ್ ಬಟ್ಟೆ ಬರಲು ಎಷ್ಟು ದಿನ ಆಗುತ್ತದೆ? ನಿಮಗೆ ಎಷ್ಟು ದಿನ ಬೇಕು? ನಿಮಗೆ ಸಂಬಳ ಎಷ್ಟು ಸಿಗುತ್ತದೆ’ ಎಂದು ಕೇಳಿದರು. ರಾಹುಲ್ ಅವರು ಪ್ರಶ್ನಿಸಿದ ದಾರವನ್ನು ತೋರಿಸಿದ ಮಹಿಳೆಯರು ಇದರಿಂದ 120 ಮೀಟರ್ ಬಟ್ಟೆ ಬರುತ್ತದೆ. 120 ಮೀಟರ್ ಬಟ್ಟೆ ಆಗಲು ಒಂದು ತಿಂಗಳು ಬೇಕು. ದಿನಕ್ಕೆ 125 ರೂಪಾಯಿ ಸಂಬಳ ಕೊಡುತ್ತಾರೆ’ ಎಂದರು.

ಈ ವೇಳೆ ರಾಹುಲ್ ಗಾಂಧಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಿನ ಮಾಹಿತಿ ನೀಡಿದರು. ‘ಇವರು ಹೆಚ್ಚು ಕೆಲಸ ಮಾಡುತ್ತಾರೆ. ಆದರೆ ಸಂಬಳ ಕಡಿಮೆ. ಸರ್ಕಾರವು ಸರಿಯಾಗಿ ಹತ್ತಿ ಪೂರೈಕೆ ಮಾಡುತ್ತಿಲ್ಲ’ ಎಂದು ಹೇಳಿದರು. ‘ಇದೊಂದೇ ಕೆಲಸ ಮಾಡುತ್ತೀರಾ? ಬೇರೆ ಏನಾದರೂ ಮಾಡುತ್ತಿರಾ? ನೇಯ್ಗೆ ಕೆಲಸದಲ್ಲಿ ಏನಾದರೂ ಸಮಸ್ಯೆ ಆಗುತ್ತಿದ್ದಿಯೇ’ ಎಂದು ರಾಹುಲ್ ಗಾಂಧಿ ಮಹಿಳೆಯರರನ್ನು ಕೇಳಿದರು.

‘ಮನೆಗೆಲಸ ಮಾಡಿಕೊಂಡು ಬಂದು ಇಲ್ಲಿಯೂ ಕೆಲಸ ಮಾಡುತ್ತೇವೆ. ಸಮಸ್ಯೆ ಏನಿಲ್ಲ, ರಟ್ಟೆ ನೋವು, ಬೆನ್ನು ನೋವು ಬರುತ್ತೆ. ಆದರೆ ಕೆಲಸ ಮಾಡಬೇಕಲ್ಲವೇ’ ಎಂದು ಮಹಿಳೆಯರು ಉತ್ತರಿಸಿದರು.

ಗಾಂಧಿ ಭೇಟಿಯ ನೆನಪು

ಬದನವಾಳು ಗ್ರಾಮಕ್ಕೆ 1927ರಲ್ಲಿ ಗಾಂಧೀಜಿ ಭೇಟಿ ಕೊಟ್ಟು ಖಾದಿ ಉದ್ಯಮ ಸ್ಥಾಪನೆ ಮಾಡಿದ್ದರು. ಗಾಂಧಿ ಸ್ಮರಣಾರ್ಥವಾಗಿ ಬದನವಾಳು ಗ್ರಾಮದಲ್ಲಿ ಪ್ರತಿವರ್ಷ ಗಾಂಧಿ ಜಯಂತಿ ವಿಶೇಷವಾಗಿ ನಡೆಯುತ್ತದೆ. ಈ ಬಾರಿ ಸಂಗೀತಾ ಕಟ್ಟಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಾಹುಲ್ ಗಾಂಧಿ ಅವರು ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೆವಾಲಾ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ‘ವೈಷ್ಣವ ಜನ ತೋ ತೇನೆ ಕಹಿಯೇ’ ಹಾಡು ಮೊಳಗಿತು.

ಬಿಗಿ ಭದ್ರತೆ

ಭಾರತ್ ಜೋಡೊ ಯಾತ್ರೆ ಹಿನ್ನಲೆಯಲ್ಲಿ ಬದನವಾಳು ಗ್ರಾಮದಲ್ಲಿ ಬಿಗಿ ಭದ್ರತೆ ಇದೆ. ಗಲ್ಲಿಗಲ್ಲಿಯಲ್ಲಿಯೂ ಖಾಕಿ ಸರ್ಪಗಾವಲು ಹಾಕಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ಸ್ಥಳ ಪರಿಶೀಲನೆ ನಡೆಯಿತು. ಗಾಂಧಿ ಜಯಂತಿ ಸಮಾರಂಭದಲ್ಲಿ ರಾಹುಲ್ ಗಾಂಧಿ ಪಕ್ಕ ಚಕ್ಳಳಮಕ್ಕಳ ಹಾಕಿ ಕೂರಲು ಸಿದ್ದರಾಮಯ್ಯ ಪರದಾಡಿದರು. ಸಿದ್ದರಾಮಯ್ಯ ಕಷ್ಟ ನೋಡಿದ ರಾಹುಲ್, ‘ಪರವಾಗಿಲ್ಲ ನಿಮಗೆ ಹೇಗೆ ಕುಳಿತುಕೊಳ್ಳಲು ಆಗುತ್ತದೋ ಹಾಗೆ ಕುಳಿತುಕೊಳ್ಳಿ’ ಎಂದು ರಾಹುಲ್ ಸಲಹೆ ಮಾಡಿದರು.

ಹಿರಿಯ ರಂಗಯ್ಯಗೆ ರಾಹುಲ್ ಗಾಂಧಿ ಗೌರವ

ಬದನವಾಳು ಗ್ರಾಮದ ಗಾಂಧಿ ಜಯಂತಿ ಆಚರಣೆ ವೇಳೆ ಗ್ರಾಮದ ಹಿರಿಯರಾದ ರಂಗಯ್ಯ ಸಹ ಭಾಗಿಯಾಗಿದ್ದರು. ರಾಹುಲ್ ಗಾಂಧಿ ಜೊತೆ ಕುಳಿತು ಗಾಂಧಿ ಭಜನೆ ನಡೆಸಿದುರ. ಕಾರ್ಯಕ್ರಮ ಮುಗಿದ 96 ವರ್ಷದ ರಂಗಯ್ಯ ಅವರನ್ನು ರಾಹುಲ್ ಗಾಂಧಿ ಕೈಹಿಡಿದು ಮೇಲೆತ್ತಿದರು. ಬಳಿಕ ಗಾಂಧಿ ಪುತ್ಥಳಿ ಎದುರ ಕುರ್ಚಿ ಹಾಕಿ ಕೂರಿಸಿದರು.

ಸೋನಿಯಾ ಗಾಂಧಿ ಭಾಗಿ ಸಾಧ್ಯತೆ

ಕರ್ನಾಟಕದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸೋನಿಯಾ ಗಾಂಧಿ ಕರ್ನಾಟಕಕ್ಕೆ ಬರುವ ಸಾದ್ಯತೆಯಿದೆ. ಸೋನಿಯಾ ಜೊತೆಗೆ ಪುತ್ರಿ ಪ್ರಿಯಾಂಕಾ ಗಾಂಧಿ ಸಹ ಕರ್ನಾಟಕಕ್ಕೆ ಬರುವ ಸಾಧ್ಯತೆಯಿದೆ. ನಾಳೆ ಮೈಸೂರಿನಿಂದ ಪಾದಯಾತ್ರೆ ಸಾಗಲಿದ್ದು, ನಾಳೆಯೇ ಪ್ರಿಯಾಂಕ ಗಾಂಧಿ ಹಾಗೂ ಸೋನಿಯಾ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ಮೂಲಗಳು ಹೇಳಿವೆ.

Published On - 11:50 am, Sun, 2 October 22