ಹುಣಸೂರು ಡಬಲ್ ಮರ್ಡರ್ ಕೇಸ್: ಜೈಲಿಂದ ಆರೋಪ ಮುಕ್ತನಾಗಿ ಹೊರಬಂದ ರೌಡಿಶೀಟರ್​ ಚಂದು ಭೀಕರ ಹತ್ಯೆ, ಹಂತಕರು ಯಾರು?

ಎರಡು ಹತ್ಯೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಚಂದ್ರು ಜೈಲು ಸೇರಿ ಇತ್ತೀಚೆಗೆ ದೋಷಮುಕ್ತನಾಗಿ ಹೊರಬಂದಿದ್ದ. ಬಂದ ಬಳಿಕ ಫಾಸ್ಟ್ ಫುಡ್ ನಡೆಸುತ್ತಿದ್ದ ತನ್ನ ಹೆಂಡತಿಗೆ ಸಹಾಯ ಮಾಡ್ತ ಯಾವುದೇ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗದೇ ತಾನಾಯ್ತು ತನ್ನ ಕುಟುಂಬವಾಯ್ತು ಅಂತಾ ಜೀವನ ಸಾಗಿಸುತ್ತಿದ್ದ, ಆದ್ರೆ...

ಹುಣಸೂರು ಡಬಲ್ ಮರ್ಡರ್ ಕೇಸ್: ಜೈಲಿಂದ ಆರೋಪ ಮುಕ್ತನಾಗಿ ಹೊರಬಂದ ರೌಡಿಶೀಟರ್​ ಚಂದು ಭೀಕರ ಹತ್ಯೆ, ಹಂತಕರು ಯಾರು?
ಜೈಲಿಂದ ಆರೋಪ ಮುಕ್ತನಾಗಿ ಹೊರಬಂದ ರೌಡಿಶೀಟರ್​ ಚಂದು ಭೀಕರ ಹತ್ಯೆ
Follow us
|

Updated on:May 20, 2023 | 1:02 PM

ಆತ ರೌಡಿ ಶೀಟರ್ ಡಬಲ್‌ ಮರ್ಡರ್​​ ಕೇಸಿನಲ್ಲಿ ಜೈಲು ಸೇರಿದ್ದ. ಆದರೆ ಆರೋಪ ಸಾಬೀತಾಗದ ಕಾರಣ ಕೆಲ ತಿಂಗಳ ಹಿಂದೆಯಷ್ಟೇ ಜೈಲಿನಿಂದ ಹೊರಬಂದಿದ್ದ. ಹಳೆಯದೆಲ್ಲವನ್ನೂ ಮರೆತು ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಹೊಸ ಜೀವನ ಆರಂಭಿಸಿದ್ದ. ಆದ್ರೆ ಬದಲಾಗಿದ್ದು ಈತ ಮಾತ್ರ… ಈತನ ವಿರೋಧಿಗಲು ಅಲ್ಲ. ಎಲ್ಲಾ ಬಿಟ್ಟವನನ್ನು… ಬಿಡದವರು ಮಾತ್ರ ವಿರೋಧಿಗಳು. ಕೊನೆಗೂ ಅವರು ಕೊಚ್ಚಿ ಕೊಲೆ‌ ಮಾಡಿದ್ದಾರೆ. ಕಣ್ಣೀರು ಹಾಕ್ತಾ ಇರೋ ಮಕ್ಕಳು. ಆತಂಕದಲ್ಲಿ ನಿಂತ ಜನರು. ರಸ್ತೆ ತುಂಬೆಲ್ಲಾ ಚೆಲ್ಲಾಡಿದ ರಕ್ತ. ಮಹಜರು ಮಾಡುತ್ತಿರುವ ಪೊಲೀಸರು. ಮೈಸೂರಿನ ಹೃದಯ ಭಾಗವಾದ ಒಂಟಿಕೊಪ್ಪಲಿನಲ್ಲಿ ಕಂಡು ಬಂದ ದೃಶ್ಯವಿದು. ಇದಕ್ಕೆ ಕಾರಣ ಒಂಟಿಕೊಪ್ಪಲಿನಲ್ಲಿ ನಡೆದ ಭೀಕರ ಕೊಲೆ. ಅಂದ್ಹಾಗೆ ಇಲ್ಲಿ ಈ ರೀತಿ ಭೀಕರವಾಗಿ ಕೊಲೆಯಾದವನು ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚಂದು.

ಚಂದು ಕೊಲೆ 2016ರಲ್ಲಿ ನಡೆದ ಪಡುವಾರಹಳ್ಳಿ ದೇವು ಮರ್ಡರ್ ಗೆ ಪ್ರತಿಕಾರವಾಗಿ ನಡೆದಿದೆ ಎನ್ನಲಾಗುತ್ತಿದೆ. ಚಂದು ಕೆಲ ತಿಂಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ. ಹುಣಸೂರಿನಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸ್ ನಲ್ಲಿ ಖುಲಾಸೆಯಾಗಿ ಬಂದಿದ್ದ. ಚಂದ ಹುಣಸೂರು ಜೋಡಿ ಕೊಲೆ ಮಾತ್ರವಲ್ಲ ಪಡುವಾರಹಳ್ಳಿ ದೇವು ಹತ್ಯೆ ಪ್ರಕರಣದಲ್ಲೂ ದೋಷಮುಕ್ತನಾಗಿ ಜೈಲಿನಿಂದ ಹೊರಬಂದಿದ್ದ.

ಜೈಲಿನಿಂದ ಬಂದವನು ಯಾವುದಕ್ಕೂ ತಲೆಹಾಕದೆ ತಾನಾಯ್ತು ತನ್ನ ಮನೆಯಾಯ್ತು ಅಂತಾ ಅರಾಮಾಗಿ ಇದ್ದ. ಚಂದ್ರು ಒಂಟಿಕೊಪ್ಪಲಿನ ತನ್ನ ಮನೆ ಬಳಿ ಟೈಲರ್ ಅಂಗಡಿ ಮುಂಭಾಗ ಸಂಜೆ 5 ಗಂಟೆ ವೇಳೆಗೆ ಮಾತನಾಡುತ್ತ ಕುಳಿತಿದ್ದ ವೇಳೆ ದ್ವಿಚಕ್ರ ವಾಹನಗಳಲ್ಲಿ ಬಂದ ಹಂತಕ ತಂಡ ಲಾಂಗು ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದೆ. ಕೂಡಲೇ ಸಂಬಂಧಿಕರು ಹಲ್ಲೆಗೊಳಗಾದ ಚಂದ್ರುವನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾರೆ.ಆದ್ರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಚಂದ್ರು ಸಾವನ್ನಪ್ಪಿದ್ದಾನೆ‌. ಇನ್ನೂ ವಿಚಾರ ತಿಳಿದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿ ಮುತ್ತುರಾಜ್ ಸಿಬ್ಬಂದಿ ಜೊತೆ ಸ್ಥಳ ಪರಿಶೀಲನೆ ನಡೆಸಿದರು.

ಇನ್ನು 2008 ರ ಮೇ 15 ರಂದು ಹುಣಸೂರಿನ ಎಪಿಎಂಸಿ ಬಳಿಯ ತೋಟದ ಮನೆಯಲ್ಲಿ ಇಬ್ಬರ ಹತ್ಯೆಯಾಗಿತ್ತು. ಹಾಗೆಯೇ 2016 ರಲ್ಲಿ ಮೇ 5 ರಂದು ಪಡುವಾರಹಳ್ಳಿ ದೇವು ಹತ್ಯೆಯಾಗಿತ್ತು. ಈ ಎರಡೂ ಪ್ರಕರಣದ ಆರೋಪಿಯಾಗಿದ್ದ ಚಂದ್ರು ಪಾಲಿಕೆ ಮಾಜಿ ಸದಸ್ಯ ಅವ್ವ ಮಾದೇಶ್ ಜೊತೆಗೆ ಜೈಲು ಸೇರಿ ಇತ್ತೀಚೆಗೆ ದೋಷಮುಕ್ತನಾಗಿ ಹೊರಬಂದಿದ್ದ. ಬಂದ ಬಳಿಕ ಫಾಸ್ಟ್ ಫುಡ್ ನಡೆಸುತ್ತಿದ್ದ ತನ್ನ ಹೆಂಡತಿಗೆ ಸಹಾಯ ಮಾಡ್ತ ಸಣ್ಣ ಪುಟ್ಟ ಫೈನಾನ್ಸ್ ಮಾಡ್ಕೊಂಡು ಅರಾಮಾಗಿಯೇ ಇದ್ದ. ಯಾವುದೇ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗದೇ ತಾನಾಯ್ತು ತನ್ನ ಕುಟುಂಬವಾಯ್ತು ಅಂತಾ ಜೀವನ ಸಾಗಿಸುತ್ತಿದ್ದ ಆದ್ರೆ ಐನಾತಿಗಳು ಹಾಕಿದ ಸ್ಕೇಚ್ ಗೆ ಜೀವ ಬಿಟ್ಟಿದ್ದಾನೆ.

ಒಟ್ಟಿನಲ್ಲಿ, ಹುಣಸೂರು ಡಬ್ಬಲ್ ಮರ್ಡರ್, ಪಡುವಾರಹಳ್ಳಿ ದೇವು ಹತ್ಯೆ ಮೇ ತಿಂಗಳಲ್ಲೇ ಆಗಿತ್ತು. ಇದೀಗ ಚಂದ್ರು ಮರ್ಡರ್ ಸಹಾ ಮೇ ತಿಂಗಳಿನಲ್ಲಿಯೇ ನಡೆದಿದೆ. ಇದೆಲ್ಲವನ್ನೂ ಗಮನಿಸಿದ್ರೆ ಪಡುವಾರಹಳ್ಳಿ ದೇವು ಮರ್ಡರ್ ಗೆ ಪ್ರತಿಕಾರವಾಗಿ ಚಂದ್ರು ಹತ್ಯೆ ನಡೆದಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಸದ್ಯ ವಿವಿ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಾತಕಿಗಳ ಪತ್ತೆಗೆ ಜಾಲ ಬೀಸಿದ್ದಾರೆ‌ ಹಂತಕರ ಬಂಧನದ ಬಳಿಕವೇ ಚಂದ್ರು ಹತ್ಯೆಗೆ ನಿಖರ ಕಾರಣ ಗೊತ್ತಾಗಲಿದೆ. ಇದೆಲ್ಲಾ‌ ಏನೇ ಇರಲಿ. ಕೆಲ ವರ್ಷಗಳಿಂದ ಶಾಂತವಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಲಾಂಗು ಮಚ್ವುಗಳು ಝಳಪಿಸಿದ್ದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ.

ವರದಿ: ರಾಮ್, ಟಿವಿ 9, ಮೈಸೂರು 

Published On - 1:02 pm, Sat, 20 May 23