ಮೈಸೂರು: ಸಂತ್ರಸ್ತೆ ಹಾಗೂ ಆಕೆಯ ತಾಯಿ 10 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲದ ಹಣವನ್ನು ತೀರಿಸಲಾಗದೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಸ್ಯಾಂಟ್ರೋ ರವಿ (Santro Ravi) ಪರ ವಕೀಲ ಹರೀಶ್ ಪ್ರಭು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತೆ ಕೆ.ಆರ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಅವರನ್ನು ಮದುವೆ ಆದ ಬಗ್ಗೆ ದಾಖಲೆ ಒದಗಿಸಿಲ್ಲ. ಪ್ರಕರಣದ ದಾಖಲಿಸಿದ ನಂತರವೂ ಪ್ರಕರಣವನ್ನು ವಾಪಸ್ ಪಡೆಯಲು ಹಣದ ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದರೂ ಜಾತಿ ನಿಂದನೆ ಪ್ರಕರಣ ಹಾಕುವುದಾಗಿ ಬೆದರಿಸಿದ್ದರು. ಈ ಬಗ್ಗೆ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎನ್‌ಸಿಆರ್ ಪಡೆಯಲಾಗಿದೆ ಎಂದರು.
ಹಣಕಾಸಿನ ಬಗ್ಗೆ ಮಾತನಾಡಿದ ವಕೀಲರು, ಹಣಕಾಸಿನ ವ್ಯಾಜ್ಯವನ್ನು ವಿಜೃಂಭಿಸಿ ಹೇಳಲಾಗಿದ್ದಲ್ಲದೆ, ಅದನ್ನು ಬೇರೆ ರೀತಿಯಾಗಿ ಬಿಂಬಿಸಲಾಗಿದೆ. ಸ್ಟೇಟಸ್ ಹಾಕಿಕೊಂಡಿರುವುದನ್ನೇ ದೊಡ್ಡ ರೀತಿಯಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ವಕೀಲ ಹರೀಶ್ ಹೇಳಿದರು. ಅಲ್ಲದೆ, ಮಹಿಳೆಯು ಮಂಜುನಾಥ್ ಅವರನ್ನು ಮದುವೆ ಆಗಿದ್ದರೆ ಇದುವರೆಗೂ ಯಾಕೆ ಸಾಕ್ಷ್ಯಾಧಾರ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ನಲ್ಲಿ ಸ್ಯಾಂಟ್ರೋ ರವಿ ಬಂಧನ: ಖಾಕಿ ಸ್ಪೆಷಲ್ ಟೀಂ ಕಾರ್ಯಾಚರಣೆ ಹೇಗಿತ್ತು ಗೊತ್ತಾ?
ಸದ್ಯ ಸ್ಯಾಂಟ್ರೋ ರವಿ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಕೀಲ ಹರೀಶ್, ಕೌಟುಂಬಿಕ ಕಲಹ ಪ್ರಕರಣವನ್ನು ಸಿಐಡಿ ತನಿಖೆ ಮಾಡುವ ಸಾಧ್ಯತೆ ಇಲ್ಲ. ವರ್ಗಾವಣೆ ಸೇರಿದಂತೆ ಬೇರಾವುದೇ ಎಫ್‌ಐಆರ್ ದಾಖಲಾಗಿಲ್ಲ. ಹೀಗಾಗಿ ಯಾವ ಕಾರಣಕ್ಕೆ ಸಿಐಡಿಗೆ ವಹಿಸಲು ಮುಂದಾಗಿದ್ದಾರೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ವಹಿಸಲು ಮುಂದಾದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ ಸಂತ್ರಸ್ತೆ, ನಾನು ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ. ಸ್ಯಾಂಟ್ರೋ ರವಿ ವಕೀಲರ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಸ್ಯಾಂಟ್ರೋ ರವಿ ಜೊತೆ ಮದುವೆಯಾಗಿರುವುದಕ್ಕೆ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇನೆ. ಮದುವೆ ವೆಡ್ಡಿಂಗ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ನೀಡಿದ್ದೇನೆ ಎಂದರು.
ಸುಳ್ಳು ಚೆಕ್ ಬೌನ್ಸ್ ಕೇಸ್ ನನ್ನ ಮೇಲೆ ದಾಖಲಿಸಿದ್ದಾರೆ. ಪ್ರಕರಣ ದಾಖಲಾದಾಗ ನಾನು ಪರಪ್ಪನ ಅಗ್ರಹಾರಲ್ಲಿದ್ದೆ. ಜೈಲಿನಲ್ಲಿ ನಾನು ಹೇಗೆ ಮೊಬೈಲ್ ಬಳಸಲು ಸಾಧ್ಯ? ಈ ಬಗ್ಗೆಯೂ ನಾನು ದಾಖಲಾತಿಗಳನ್ನ ನೀಡಿದ್ದೇನೆ. ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಮೈಸೂರಿನಲ್ಲಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವರ್ಗಾವಣೆ, ಸರ್ಕಾರದಿಂದ ನಿರ್ದೇಶನ
ಮೈಸೂರು ಪೊಲೀಸರು ನಡೆಸುತ್ತಿದ್ದ ಸ್ಯಾಂಟ್ರೋ ರವಿ ಪ್ರಕಣವನ್ನು ಸಿಡಿಐ ಹೆಗಲಿಗೆ ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಡಿಜಿ ಮತ್ತು ಐಜಿಪಿ ಆದೇಶದಂತೆ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಸಿಐಡಿಗೆ ಅಧಿಕೃತವಾಗಿ ಸ್ಯಾಂಟ್ರೊ ರವಿ ಪ್ರಕರಣ ವರ್ಗಾವಣೆ ಅಗಲಿದೆ. ಸ್ಯಾಂಟ್ರೊ ರವಿ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರದಿಂದ ಸಿಐಡಿ ಪೊಲೀಸರಿಗೆ ನಿರ್ದೇಶನ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಸ್ಯಾಂಟ್ರೋ ರವಿಯನ್ನು ಪೊಲೀಸ್ ಕಸ್ಟಡಿಗೆ ನೀಡದೆ. ಜನವರಿ 25ರವರೆಗೆ ನ್ಯಾಯಾಂಗ ಬಂಧನದಲ್ಲಿಡಬೇಕು ಎಂದು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ಈ ನಡುವೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಸರ್ಕಾರಿ ಪರ ವಕೀಲರು ಮನವಿ ಸಲ್ಲಿಸಿದ್ದರು. ಆದರೆ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸುವುದು ಸರ್ಕಾರದ ಕೆಲಸ ನಾವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ ಎಂದು ಕೋರ್ಟ ಹೇಳಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Mon, 16 January 23