ಮೈಸೂರು, ನ.17: ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಒಂದಾದ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಗಿತ್ತು. ಈ ವೇಳೆ ನಾಡದೇವತೆ ಚಾಮುಂಡೇಶ್ವರಿ (Chamundeshwari) ದೇವಿಗೆ 2000 ರೂ. ಅರ್ಪಿಸಲಾಗಿತ್ತು. ಇದೀಗ, ಪ್ರತಿ ತಿಂಗಳು ದೇವಸ್ಥಾನಕ್ಕೆ ಯೋಜನೆಯ ಹಣ ನೀಡುವಂತೆ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ (DK Shivakumar) ಎಂಎಲ್ಸಿ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದು, ಕಾಂಗ್ರೆಸ್ ಸರ್ಕಾರ ಅಸ್ತು ಎಂದಿದೆ.
ದಿನೇಶ್ ಗೂಳಿಗೌಡ ಪತ್ರಕ್ಕೆ ಕೂಡಲೇ ಸ್ಪಂದಿಸಿದ ಡಿಸಿಎಂ ಡಿಕೆ ಶಿವಕುಮಾರ್, ಪ್ರತಿ ತಿಂಗಳು ನಾಡದೇವತೆ ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ 2 ಸಾವಿರ ಅರ್ಪಿಸಲು ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೂಚನೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮೀ ಜರಿಗೆ ಅತ್ಯಂತ ಉಪಕಾರಿಯಾಗಿದೆ. ಚುನಾವಣೆಗೂ ಪೂರ್ವ ಕಾಂಗ್ರೆಸ್ ಪಕ್ಷದ ವತಿಯಿಂದ ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿ ಪಕ್ಷದ ಐದು ಗ್ಯಾರಂಟಿ ಕಾರ್ಡ್ ಅನ್ನು ಇಟ್ಟು ದೇವಿಯ ಬಳಿ ಶಕ್ತಿ ಕೊಡು ಎಂದು ಕೋರಿಕೆಯನ್ನಿಡಲಾಗಿತ್ತು. ಆ ಸಂದರ್ಭದಲ್ಲಿ ಹರಕೆಯನ್ನು ನಾಡದೇವತೆ ಬಳಿ ಮಾಡಿಕೊಳ್ಳಲಾಗಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಈಡೇರಿಸುವ ವಾಗ್ದಾನವನ್ನು ಮಾಡಲಾಗಿತ್ತು ಎಂದು ದಿನೇಶ್ ಗೂಳಿಗೌಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ, ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಅಭೂತಪೂರ್ವ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಪರಿಣಾಮ 135 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತವನ್ನು ಪಡೆದು ಈಗ ಜನಪರ ಜನಪ್ರಿಯ ಆಡಳಿವನ್ನು ನೀಡುತ್ತಿದೆ. ಇದಕ್ಕೆ ಕಾರಣವಾಗಿರುವ ಆಶೀರ್ವಾದ ನೀಡಿ ಹರಿಸಿರುವ ಜಗನ್ಮಾತೆ ಚಾಮುಂಡೇಶ್ವರಿಗೆ ಮೈಸೂರಿನಲ್ಲಿ ಪೂಜೆ ಸಲ್ಲಿಸಿ ಆಗಸ್ಟ್ 30 ರಂದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಗ್ಯಾರಂಟಿ ಯೋಜನೆ ಬಗ್ಗೆ ಕುಮಾರಸ್ವಾಮಿ ಹಾಕಿದ್ದ ಸವಾಲು ಸ್ವೀಕರಿಸಿದ ಡಿಕೆ ಶಿವಕುಮಾರ್: ಸ್ಥಳ, ದಿನಾಂಕ ಫಿಕ್ಸ್
ಅಲ್ಲದೆ, ಅಂದು ಹರಕೆಯನ್ನು ತೀರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಾಗೂ ಶಾಸಕರ ಜೊತೆ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಮಾತ್ರವಲ್ಲದೆ ಗೃಹಲಕ್ಷ್ಮೀಯರಿಗೆ ನೀಡುವ 2 ಸಾವಿರ ರೂ.ಗಳನ್ನು ದೇವಿಗೆ ಸಲ್ಲಿಸಲಾಗಿತ್ತು ಎಂದು ಪತ್ರದಲ್ಲಿ ದಿನೇಶ್ ಅವರು ಉಲ್ಲೇಖಿಸಿದ್ದಾರೆ.
ಈಗ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ರಾಜ್ಯದ 1.2 ಕೋಟಿಗೂ ಅಧಿಕ ಕುಟುಂಬಗಳಿಗೆ ಜಮಾ ಮಾಡಲಾಗುತ್ತಿದೆ. ಆ ಹಣದಿಂದ ಸಾಕಷ್ಟು ಬಡ ಕುಟುಂಬಗಳ ಜೀವನಮಟ್ಟ ಸುಧಾರಣೆಗೊಂಡಿದೆ. ಅಲ್ಲದೆ, ನಮ್ಮ ಸರ್ಕಾರದ ಹಾಗೂ ತಮ್ಮಗಳ ಬಗ್ಗೆ ಶುಭ ಹಾರೈಕೆಯನ್ನು ಮಾಡುತ್ತಲೇ ಇದ್ದಾರೆ.
ಈಗ ಪ್ರತಿ ತಿಂಗಳು ಮನೆಯ ಯಜಮಾನಿಯರ ಖಾತೆಗೆ ನಿಖರವಾಗಿ ತಲಾ 2 ಸಾವಿರ ರೂ. ಹಣ ಜಮಾ ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ. ಅದೇ ರೀತಿ ಪ್ರತಿ ತಿಂಗಳ ಕಂತನ್ಹು ಉಜಮಾನಿಯರಿಗೆ ಪಾವತಿಸುವ ಮೊದಲು ನಾಡದೇವಿ ಚಾಮುಂಡೇಶ್ವರಿಯ ಸನ್ನಿಧಿಗೂ ಸಲ್ಲಿಸಬೇಕು. ಆ ಮೂಲಕ ಮೊದಲ ಹಣ ನಾಡದೇವತೆಗೆ ಸಲ್ಲಿಕೆಯಾಗಿ ಬಳಿಕ ಉಳಿದವರಿಗೆ ಪಾವತಿಯಾಗುವಂತೆ ವ್ಯವಸ್ಥೆ ಮಾಡಲು ದಿನೇಶ್ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ