ಮೈಸೂರು ತಾಲೂಕಿನ ವಿವಿಧ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದ್ದ ಹುಲಿಯ ಚಲನವಲನ ಸಿಸಿಕ್ಯಾಮೆರಾದಲ್ಲಿ ಸೆರೆ

|

Updated on: Dec 01, 2023 | 12:32 PM

ಮೈಸೂರು ತಾಲೂಕಿನ ಚಿಕ್ಕಕನ್ಯಾ ಮತ್ತು ದೊಡ್ಡಕನ್ಯಾ ಸುತ್ತಮುತ್ತಲಿನ ರೈತರ ಹೊಲದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಧಿಕಾರಿಗಳು ಗ್ರಾಮದಲ್ಲಿ ಮತ್ತು ಗ್ರಾಮದ ಸುತ್ತಮುತ್ತ ಕ್ಯಾಮೆರಾ ಟ್ರ್ಯಾಪ್ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.

ಮೈಸೂರು ತಾಲೂಕಿನ ವಿವಿಧ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದ್ದ ಹುಲಿಯ ಚಲನವಲನ ಸಿಸಿಕ್ಯಾಮೆರಾದಲ್ಲಿ ಸೆರೆ
ಬ್ಯಾತಳ್ಳಿ, ಕಡಕೊಳ ಗ್ರಾಮಗಳಲ್ಲಿ ಕಾಣಿಸಿಕೊಂಡ ಹುಲಿ
Follow us on

ಮೈಸೂರು ಡಿ.01: ಮೈಸೂರು (Mysore) ತಾಲೂಕಿನ ಚಿಕ್ಕಕನ್ಯಾ ಮತ್ತು ದೊಡ್ಡಕನ್ಯಾ ಸುತ್ತಮುತ್ತಲಿನ ರೈತರ ಹೊಲದಲ್ಲಿ ಹುಲಿ (Tiger) ಕಾಣಿಸಿಕೊಂಡಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಧಿಕಾರಿಗಳು ಗ್ರಾಮದಲ್ಲಿ ಮತ್ತು ಗ್ರಾಮದ ಸುತ್ತಮುತ್ತ ಕ್ಯಾಮೆರಾ ಟ್ರ್ಯಾಪ್ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಈ ಕ್ಯಾಮೆರಾಗಳಲ್ಲಿ ಹುಲಿ ಚಲನವಲನದ ಚಿತ್ರ ಮತ್ತು ದೃಶ್ಯಾವಳಿಗಳು ಸೆರೆಯಾಗಿವೆ. ರಾತ್ರಿ ವೇಳೆ ಗ್ರಾಮಸ್ಥರು ಮನೆಯಿಂದ ಹೊರಗೆ ಹೋಗದಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ 10 ಕಿ.ಮೀ ದೂರದಲ್ಲಿ ಹುಲಿ ಇರುವುದು ಅರಣ್ಯಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.

ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಮಾತನಾಡಿ, ಚಿಕ್ಕಕನ್ಯಾ ಮತ್ತು ದೊಡ್ಡಕನ್ಯಾ ಗ್ರಾಮಗಳಲ್ಲಿ ಇರಿಸಲಾಗಿದ್ದ ಕ್ಯಾಮೆರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿದೆ. ಟಿವಿಎಸ್ ಕಾರ್ಖಾನೆಯ ಸಿಸಿಟಿವಿ ದೃಶ್ಯಗಳಲ್ಲಿ ಹುಲಿ ಇರುವುದು ದೃಢಪಟ್ಟಿದೆ. ಹುಲಿಯು ಈ ಪ್ರದೇಶದಲ್ಲಿ ದನಗಳನ್ನು ಕೊಂದಿದ್ದು, ನಾವು ಬಂಡೀಪುರ ಕಾರ್ಯಾಚರಣೆಯ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಹುಲಿ ಸೆರೆಗೆ ಬೋನ್​ಗಳನ್ನು ಇಟ್ಟಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಮೈಸೂರಿನ ತಾಲೂಕಿನ ಬ್ಯಾತಳ್ಳಿ, ಕಡಕೊಳ ಸುತ್ತಮುತ್ತ ಹುಲಿಗಳು ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

ಅಲ್ಲದೆ ಟ್ರ್ಯಾಂಕ್ವಿಲೈಜರ್‌ ಡಾರ್ಟ್ (ಪ್ರಾಣಿ ಸೆರೆ ಹಿಡಿಯಲು ಬಳಸುವ ಬಂದೂಕು) ಅನ್ನು ಹೊಂದಿದ್ದೇವೆ. ಹುಲಿ ಕಾಣಿಸಿಕೊಂಡ ಸ್ಥಳದಿಂದ 10 ಕಿಲೋಮೀಟರ್ ದೂರದಲ್ಲಿದೆ. ಹುಲಿಯನ್ನು ಹಿಡಿಯುವುದು ಮತ್ತು ಮನುಷ್ಯರ ಮೇಲೆ ದಾಳಿ ಮಾಡದಂತೆ ತಡೆಯುವುದು ನಮ್ಮ ತಕ್ಷಣದ ಆದ್ಯತೆಯಾಗಿದೆ ಎಂದರು.

ಡಿಸಿಎಫ್ ಕೆ.ಎನ್.ಬಸವರಾಜ್ ಮಾತನಾಡಿ, ನಾವು ಸ್ಥಳದಲ್ಲಿ ಮೂರು ಪಂಜರಗಳನ್ನು ಇಟ್ಟಿದ್ದೇವೆ ಅನುಕೂಲಕರ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ” ಎಂದು ಅವರು ಹೇಳಿದರು.

ಹುಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಸುತ್ತಲಿನ ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಅನವಶ್ಯಕವಾಗಿ ಸಂಚರಿಸದಂತೆ ಹಾಗೂ ವದಂತಿಗಳಿಗೆ ಕಿವಿಗೊಡದಂತೆ ಸೂಚನೆ ನೀಡಲಾಗಿದೆ ಎಂದು ಡಿಸಿಎಫ್ ಕೆ.ಎನ್.ಬಸವರಾಜ್ ತಿಳಿಸಿದರು. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಮಧ್ಯೆ ಮಂಡ್ಯದಲ್ಲಿ ಗುರುವಾರ ತಡರಾತ್ರಿ ಮಳವಳ್ಳಿ ತಾಲೂಕಿನ ಬಾಚಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:09 pm, Fri, 1 December 23