ಮೈಸೂರು: ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದು ಕನ್ನಡಪರ ಹೋರಾಟಗಾರ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು. ಮುಂಬರುವ ಪರಿಷತ್ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಲು ನಡೆಯುವ ಚುನಾವಣೆಯಲ್ಲಿ ನಾನು ಕಣಕ್ಕಿಳಿಯುತ್ತೇನೆ. ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳೇ ಮತದಾರರಾಗಿರುತ್ತಾರೆ. ಎರಡು ಮತ ಚಲಾವಣೆಗೆ ಅವಕಾಶವಿದೆ. ನನಗೊಂದು ಮತ ಕೊಡಿ ಉಳಿದೊಂದು ಮತವನ್ನು ಬೇರೆ ಯಾರಿಗೆ ಬೇಕಾದರೂ ಚಲಾಯಿಸಿ. ನನ್ನಂಥವನು ಸದನದಲ್ಲಿ ಇರಬೇಕು ಎಂದು ಹೇಳಿದರು.
ಹಿಂದಿ ಹೇರಿಕೆಗೆ ವಾಟಾಳ್ ನಾಗರಾಜ್ ವಿರೋಧ
ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡಬಾರದು. ಇಂಥ ಪ್ರಯತ್ನಗಳ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷ ತೀವ್ರ ಹೋರಾಟ ಮಾಡಲಿದೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು. ಚಾಮರಾಜನಗರದಲ್ಲಿ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ಯಾಂಕ್‌ಗಳಲ್ಲಿ ಚೆಕ್‌ಗಳು ಹಿಂದಿಯಲ್ಲಿವೆ. ಹಿಂದಿಯಷ್ಟೇ ರಾಷ್ಟ್ರಭಾಷೆ ಅಲ್ಲ, ಕನ್ನಡವೂ ರಾಷ್ಟ್ರಭಾಷೆ. ರಾಜ್ಯದಲ್ಲಿರುವ ಅನ್ಯಭಾಷಿಕರು ಗಂಭೀರವಾಗಿ ಕನ್ನಡವನ್ನು ಕಲಿಯಬೇಕು. ಇಲ್ಲವಾದರೆ ಅವರು ರಾಜ್ಯ ಬಿಟ್ಟು ಹೋಗಬಹುದು ಎಂದರು.
ಕೊರೊನದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಬಳಕೆ ವಸ್ತುಗಳ ದರ ಗಗನಕ್ಕೇರಿದೆ. ಬೆಲೆ ಏರಿಕೆಯ ಬಗ್ಗೆ ಯಾರು ಮಾತನಾಡುತ್ತಿಲ್ಲ. ವಿಧಾನಸಭೆಯಲ್ಲಿ ವಿರೋಧ ಪಕ್ಷವೂ ಬೆಲೆಏರಿಕೆಯನ್ನು ಸಮರ್ಪಕವಾಗಿ ವಿರೋಧಿಸಲಿಲ್ಲ. ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ; ಧೈರ್ಯ ಇದ್ರೆ ರೋಹಿಣಿರನ್ನು ಮತ್ತೆ ಡಿಸಿ ಮಾಡಿ ಎಂದ ವಾಟಾಳ್ ನಾಗರಾಜ್
ಇದನ್ನೂ ಓದಿ: ಬೂಟು ಏಟು ತಿಂದ ದಿನವನ್ನೇ ಜನ್ಮದಿನ ಎಂದು ಆಚರಣೆ ಮಾಡಿಕೊಳ್ಳುತ್ತಾರೆ ವಾಟಾಳ್ ನಾಗರಾಜ್!