ಗಂಡ ಹೆಂಡಿರ ಜಗಳ ಹತ್ಯೆ ತನಕ: ಪತಿಗೇ ಸ್ಕೆಚ್​ ಹಾಕಿದ್ದ ಪತ್ನಿ ಅರೆಸ್ಟ್​

ಕೌಟುಂಬಿಕ ಕಲಹ ಹಿನ್ನಲೆ ಸಹೋದರ ಮತ್ತು ತಂಡದ ಜೊತೆ ಸೇರಿ ಪತ್ನಿಯೇ ಪತಿಯನ್ನ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ಮೈಸೂರಲ್ಲಿ ನಡೆದಿದೆ. ದರೋಡೆ ಯತ್ನದ ವೇಳೆ ದಾಳಿ ನಡೆದಿದೆ ಎಂದು ಬಿಂಬಿಸಲು ಹೊರಟಿದ್ದ ಪತ್ನಿಯ ಕಳ್ಳಾಟ ಪೊಲೀಸರ ತನಿಖೆ ವೇಳೆ ಗೊತ್ತಾಗಿದ್ದು, ಘಟನೆ ಸಂಬಂಧ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಗಂಡ ಹೆಂಡಿರ ಜಗಳ ಹತ್ಯೆ ತನಕ: ಪತಿಗೇ ಸ್ಕೆಚ್​ ಹಾಕಿದ್ದ ಪತ್ನಿ ಅರೆಸ್ಟ್​
ಸಾಂದರ್ಭಿಕ ಚಿತ್ರ
Edited By:

Updated on: Nov 16, 2025 | 6:53 AM

ಮೈಸೂರು, ನವೆಂಬರ್​ 16: ಕೌಟುಂಬಿಕ ಕಲಹ ಹಿನ್ನಲೆ ದರೋಡೆ ನಾಟಕವಾಡಿ ಪತಿಯನ್ನೇ ಸ್ಕೆಚ್​​ ಹಾಕಿ ಪತ್ನಿ ಮುಗಿಸಿರುವ ಆಘಾತಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ. ನಂಜನಗೂಡಿನ ರಾಜೇಂದ್ರ ಮೃತ ದುರ್ದೈವಿಯಾಗಿದ್ದು, ಆರೋಪಿ ಸಂಗೀತಾ ಮತ್ತು ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನು ಮಾಡಿರುವ ತಪ್ಪನ್ನು ಸಂಗೀತಾ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ಘಟನೆ ಏನು?

ಅಕ್ಟೋಬರ್ 25ರಂದು ರಾಜೇಂದ್ರ ತನ್ನ ಪತ್ನಿ ಸಂಗೀತಾಳ ಜೊತೆ ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಬಿಳಿ ಬಣ್ಣದ ಕಾರಿನಲ್ಲಿದ್ದ ದುಷ್ಕರ್ಮಿಗಳು ಬೈಕ್​ ಅಡ್ಡಗಟ್ಟಿದ್ದರು. ಕಾರಿನಲ್ಲಿದ್ದ ವ್ಯಕ್ತಿ ಹತ್ತಿರ ಬಂದು ಮೊದಲು ಸ್ಕೂಟರ್ ಬೀಳಿಸಿದ್ದು, ರಾಜೇಂದ್ರ ಹಾಗೂ ಸಂಗೀತಾ ಕೆಳಗೆ ಬಿದ್ದಿದ್ದರು. ಈ ವೇಳೆ ಕಾರಿನಿಂದ ಕೆಳಗೆ ಇಳಿದಿದ್ದ ಮತ್ತೊಬ್ಬ ರಾಜೇಂದ್ರ ಜೊತೆ ಜಗಳ ಮಾಡಿದ್ದ. ಸಂಗೀತಾ ಕುತ್ತಿಗೆಯಲ್ಲಿದ್ದ ಚೈನ್ ಕಸಿಯಲೂ ಆರೋಪಿಗಳು ಯತ್ನಿಸಿದ್ದರು. ಅಲ್ಲದೆ, ಹರಿತವಾದ ಆಯುಧದಿಂದ ರಾಜೇಂದ್ರಗೆ ಒಬ್ಬ ತಿವಿದಿದ್ದ. ಅದೇ ವೇಳೆ ಸ್ಥಳಕ್ಕೆ ಮತ್ತೊಂದು ವಾಹನ ಬಂದ ಕಾರಣ ಆರೋಪಿಗಳು ಎಸ್ಕೇಪ್​ ಆಗಿದ್ದರು.

ಇದನ್ನೂ ಓದಿ: ಗೋವಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ, ಪಿರಿಯಾಪಟ್ಟಣದ 3 ಯುವಕರ ಬಂಧನ

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜೇಂದ್ರ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ನಂಜನಗೂಡು ಪೊಲೀಸರಿಗೆ ತನಿಖೆ ವೇಳೆ ಆಘಾತಕಾರಿ ಸತ್ಯ ಗೊತ್ತಾಗಿದೆ. ಇದು ದರೋಡೆ ಯತ್ನ ಅಲ್ಲ, ರಾಜೇಂದ್ರ ಕೊಲೆ ಮಾಡಲು ಆತನ ಪತ್ನಿ ಸಂಗೀತಾ ಹಾಕಿದ್ದ ಸ್ಕೆಚ್ ಎಂಬುದು ಬೆಳಕಿಗೆ ಬಂದಿದೆ. ತನ್ನ ಸಹೋದರ ಸಂಜಯ್ ಬಳಸಿಕೊಂಡು ಸಂಗೀತಾ ಪತಿ ಮೇಲೆ ದಾಳಿ ಮಾಡಿಸಿದ್ದು, ಈ ಕೃತ್ಯದಲ್ಲಿ ಸಂಜಯ್ ಸ್ನೇಹಿತ ವಿಘ್ನೇಶ್ ಹಾಗೂ ಒಬ್ಬ ಬಾಲಕ ಭಾಗಿಯಾಗಿದ್ದಾರೆ.

ಇನ್ನು, ಕೃತ್ಯಕ್ಕೆ ಬಳಸಿದ್ದ ಕಾರನ್ನು ಆರೋಪಿಗಳು ಬಾಡಿಗೆಗೆ ಪಡೆದಿದ್ದು, ಸಂಗೀತಾ ಸಹೋದರ ಸಂಜಯ್ ಮತ್ತು ತಂಡ ಹತ್ಯೆಗೆ ಸಂಚು ರೂಪಿಸಿತ್ತು. ಘಟನೆ ವೇಳೆ ಸಂಗೀತಾ ಸಹ ಸಾಕಷ್ಟು ನಟಿಸಿದ್ದಳು ಎಂಬುದು ಗೊತ್ತಾಗಿದೆ. ಘಟನೆ ಸಂಬಂಧ ಪೊಲೀಸರು ಸಂಗೀತಾ, ಸಂಜಯ್​​, ವಿಘ್ನೇಶ್​ ಮತ್ತು ಓರ್ವ ಬಾಲಕನನ್ನು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.