ಮನೆಗೆ ನುಗ್ಗಿದ ದರೋಡೆಕೋರರ ಜೊತೆ ಹೋರಾಡಿದ ಚನ್ನಗಿರಿ ಮಹಿಳೆ
ದಾವಣಗೆರೆಯ ಚನ್ನಗಿರಿಯಲ್ಲಿ 2 ತಿಂಗಳ ಹಿಂದೆ ನಡೆದಿದ್ದ ದರೋಡೆಯ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಇಲ್ಲಿನ ಮಹಿಳೆಯೊಬ್ಬರು ಅಡಿಕೆ ಸುಲಿಯುವ ಕತ್ತಿ ಹಿಡಿದು ತಮ್ಮ ಮನೆಗೆ ದರೋಡೆ ಮಾಡಲು ಬಂದಿದ್ದ ಕಳ್ಳರ ಗುಂಪಿನ ಮೇಲೆ ಹಲ್ಲೆ ನಡೆಸಿ ಅವರನ್ನು ಓಡಿಸಿದ್ದಾರೆ. ಈ ಮೂಲಕ ದರೋಡೆಯಿಂದ ತಮ್ಮ ಮನೆಯನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ತಮ್ಮ ಜೀವವನ್ನೂ ಉಳಿಸಿಕೊಂಡಿದ್ದಾರೆ. ಈ ಘಟನೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ದಾವಣಗೆರೆ, ಅಕ್ಟೋಬರ್ 12: ದಾವಣಗೆರೆಯಲ್ಲಿ (Davanagere) ಮಹಿಳೆಯೊಬ್ಬರು ದಿಟ್ಟತನದಿಂದ ದರೋಡೆಕೋರರ ಜೊತೆ ಹೋರಾಡಿ ತನ್ನ ಜೀವ ಮತ್ತು ಮನೆಯನ್ನು ಕಾಪಾಡಿಕೊಂಡಿದ್ದಾರೆ. ದರೋಡೆ ಗ್ಯಾಂಗ್ ವಿರುದ್ಧ ಹೋರಾಟ ಮಾಡಿದ ದಾವಣಗೆರೆಯ ಮಹಿಳೆ ಸುಮಲತಾ ರೆಡ್ಡಿ ಆಗುವ ಅನಾಹುತ ತಪ್ಪಿಸಿದ್ದಾರೆ. ಕಪ್ಪು ಮಾಸ್ಕ್ ಧರಿಸಿ, ಅಡಿಕೆ ಸುಲಿಯುವ ಕತ್ತಿ ಹಿಡಿದು ಮನೆಗೆ ನುಗ್ಗಿದ ದರೋಡೆ ಗ್ಯಾಂಗ್ ಜೊತೆಗೆ ಭಯ ಪಡದೆ ಸುಮಲತಾ ಹೋರಾಟ ನಡೆಸಿದ್ದಾರೆ. ಈ ಘಟನೆ ನಡೆದ ಎರಡು ತಿಂಗಳ ಬಳಿಕ ಅವರು ಸತ್ಯ ಬಿಚ್ಚಿಟ್ಟಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಕ್ಯಾಂಪ್ ಈ ಘಟನೆ ನಡೆದಿದೆ. ಆಗಸ್ಟ್ 14ರಂದು ಸುಮಲತಾ ರೆಡ್ಡಿ ತನ್ನ ಅತ್ತೆಯ ಜೊತೆ ಮನೆಯಲ್ಲಿದ್ದಾಗ ಈ ದರೋಡೆ ನಡೆದಿದೆ. ಅದೇ ಗ್ರಾಮದ ಶಿವಮೂರ್ತಿ ಹಾಗೂ ರಮೇಶ್ ಎಂಬ ಇಬ್ಬರಿಂದ ಸಂಜೆ 7.40ಕ್ಕೆ ದರೋಡೆ ಪ್ಲಾನ್ ಮಾಡಲಾಗಿತ್ತು. ಮನೆಯ ಹಿಂದಿನ ಬಾಗಿಲಿನಿಂದ ಒಳಗೆ ಬಂದು ಕೊಲೆಗೆ ಯತ್ನಿಸಲಾಗಿತ್ತು.
ಇದನ್ನೂ ಓದಿ: Cyber Fraud: ದೇಶದ ವಿವಿಧೆಡೆ ಕೋಟಿ ಕೋಟಿ ದೋಚುತ್ತಿದ್ದ ಸೈಬರ್ ವಂಚಕರ ಜಾಲ ಭೇದಿಸಿದ ದಾವಣಗೆರೆ ಪೊಲೀಸ್
ಆಗ ಮನೆಗೆ ನುಗ್ಗಿದ ದರೋಡೆ ಗ್ಯಾಂಗ್ ಜೊತೆ ಹೋರಾಟ ನಡೆಸಿದ ಸುಮಲತಾ ಅವರಿಗೆ ಕತ್ತಿಯಿಂದ ಗಾಯಗಳಾಗಿತ್ತು. ಸುಮಲತಾ ಅವರ ಬೆರಳಿಗೆ ಪೆಟ್ಟಾಗಿತ್ತು. ಮನೆಯಲ್ಲಿದ್ದ ಸುಮಲತಾಳ ಅತ್ತೆ ವೀರಯಮ್ಮ ಮೇಲೂ ದಾಳಿ ನಡೆದಿತ್ತು. ಈ ವೇಳೆ 110 ಗ್ರಾಂ ಚಿನ್ನದ ಸರ ಕಿತ್ತುಕೊಂಡು ದರೋಡೆಕೋರರು ಪರಾರಿಯಾಗಿದ್ದರು.
ಇದನ್ನೂ ಓದಿ: ದಾವಣಗೆರೆ: ಬಾಯ್ಲರ್ ಸ್ಫೋಟ; 11 ವರ್ಷದ ಬಾಲಕಿ ಸಾವು, ಮೂವರಿಗೆ ಗಂಭೀರ ಗಾಯ
ಇದಾದ ಎರಡು ತಿಂಗಳ ಕಾಲ ನಿರಂತರ ತನಿಖೆ ನಡೆಸಿ ಬಸವಾ ಪಟ್ಟಣ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರು ದೋಚಿಕೊಂಡು ಹೋಗಿದ್ದ 12.28 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



