ಗೋವಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ: ಪಿರಿಯಾಪಟ್ಟಣದ ಮೂವರು ಯುವಕರ ಬಂಧನ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮೂವರು ಯುವಕರನ್ನು ಗೋವಾದಲ್ಲಿ ವಿದೇಶಿ ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಬೆನ್ನಲ್ಲೇ ಗೋವಾ ಪೊಲೀಸರು ಕ್ರಮಕೈಗೊಂಡಿದ್ದರು. ಸದ್ಯ ಮೂವರು ಯುವಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಮೈಸೂರು, ನವೆಂಬರ್ 15: ಗೋವಾದ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದ ವಿದೇಶಿ ಮಹಿಳಾ ಪ್ರವಾಸಿಗರಿಗೆ (Foreign Tourists) ಕಿರುಕುಳ ನೀಡಿದ ಆರೋಪದ ಮೇಲೆ ಮೈಸೂರು (Mysuru) ಜಿಲ್ಲೆಯ ಪಿರಿಯಾಪಟ್ಟಣದ ಮೂವರು ಯುವಕರನ್ನು ಗೋವಾ ಪೊಲೀಸರು ಬಂಧಿಸಿದ್ದರು. ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬೆನ್ನಲ್ಲೇ ಪೊಲೀಸರು ಕ್ರಮಕೈಗೊಂಡಿದ್ದರು. ನವೆಂಬರ್ 13ರಂದು ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿತ್ತು.
ಜಾಮೀನಿನ ಮೇಲೆ ಬಿಡುಗಡೆ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ರಾವಂದೂರು ಹೋಬಳಿಯ ಬೋಗನಹಳ್ಳಿ ನಿವಾಸಿಗಳಾದ ಬಿ.ಆರ್. ಕಾರ್ತಿಕ್ (28), ಬಿ.ಎನ್. ಸಂತೋಷ್ (33) ಮತ್ತು ಬಿ.ಎನ್. ರವಿ ಬಂಧಿತರು. ಘಟನೆ ಬಳಿಕ ಮೂವರನ್ನು ಗೋವಾದ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಬರ್ತ್‌ಡೇ ಸೆಲಬ್ರೇಷನ್ ನೆಪದಲ್ಲಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ
ವೈರಲ್ ವಿಡಿಯೋ ಪ್ರಕಾರ, ಉತ್ತರ ಗೋವಾದ ಅರಂಬೋಲ್ ಬೀಚ್‌ನಲ್ಲಿ ವಿದೇಶಿ ಮಹಿಳಾ ಪ್ರವಾಸಿಗರು ವಿಹರಿಸುತ್ತಿದ್ದರು. ಈ ಮೂವರು ಯುವಕರು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಯುವಕರು ವಿದೇಶಿ ಮಹಿಳಾ ಪ್ರವಾಸಿಗರ ಭುಜದ ಮೇಲೆ ಮತ್ತು ಸೊಂಟಕ್ಕೆ ಕೈಹಾಕಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ವೈರಲ್ ವಿಡಿಯೋ ಆಧರಿಸಿ ಪ್ರಕರಣ ದಾಖಲು
ರಾಜ್ಯಕ್ಕೆ ಭೇಟಿ ನೀಡುವ ವಿದೇಶಿಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವೈರಲ್ ವಿಡಿಯೋ ಆಧರಿಸಿ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬೆಂಗಳೂರು ಮತ್ತು ಮೈಸೂರಿನಲ್ಲಿ ಮೂವರು ಯುವಕರನ್ನು ಪತ್ತೆಹಚ್ಚಿ ಸ್ಥಳೀಯ ಪೊಲೀಸರ ಸಹಾಯದಿಂದ ಬಂಧಿಸಲಾಗಿತ್ತು.
ಇದನ್ನೂ ಓದಿ: ವಿಶೇಷ ಚೇತನ ಯುವತಿ ಅತ್ಯಾಚಾರ ಯತ್ನ: ಕಾಮುಕನಿಗೆ ಸ್ಥಳೀಯರಿಂದ ಬಿತ್ತು ಧರ್ಮದೇಟು
ಮೂವರು ಯುವಕರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 74 (ಮಹಿಳೆ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು 124(2) (ಅಸಭ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಗೋವಾದ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:59 pm, Sat, 15 November 25




