AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದ್ದಕ್ಕಿದ್ದಂತೆ ಮಹಿಳೆ ನಾಪತ್ತೆ: ಅಪವಾದಕ್ಕೆ ತಲೆಕೊಟ್ಟ ರೈತ ಆತ್ಮಹತ್ಯೆಗೆ ಶರಣು

ಮಹಿಳೆಯನ್ನು ರಾಘವೇಂದ್ರನೇ ಬಚ್ಚಿಟ್ಟಿದ್ದಾನೆ ಅಂತ ಮಹಿಳೆಯ ಪೋಷಕರು ಮೈಸೂರಿನ ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವಿಷಯವಾಗಿ ಬಿಳಿಕೆರೆ ಪೊಲೀಸರು ರಾಘವೇಂದ್ರನನ್ನು ಕರೆದು ವಿಚಾರಣೆ ನಡೆಸಿ ವಾಪಸ್ಸು ಕಳಿಸಿದ್ದರು.

ಇದ್ದಕ್ಕಿದ್ದಂತೆ ಮಹಿಳೆ ನಾಪತ್ತೆ: ಅಪವಾದಕ್ಕೆ ತಲೆಕೊಟ್ಟ ರೈತ ಆತ್ಮಹತ್ಯೆಗೆ ಶರಣು
ಅಪವಾದಕ್ಕೆ ತಲೆಕೊಟ್ಟ ರೈತ ಆತ್ಮಹತ್ಯೆಗೆ ಶರಣು
TV9 Web
| Updated By: ಸಾಧು ಶ್ರೀನಾಥ್​|

Updated on: Jan 30, 2023 | 6:42 PM

Share

ಆತ ಪ್ರಗತಿಪರ ರೈತ (progressive farmer) ತಾನಾಯ್ತು ತನ್ನ ಕೃಷಿಯಾಯ್ತು ಅಂತಾ ಇದ್ದ. ನೂರಾರು ಮಹಿಳೆಯರು‌ ಮತ್ತು ಯುವಕರಿಗೆ ಆತ ಕೆಲಸ ಕೊಟ್ಟಿದ್ದ. ಆದ್ರೆ ಆತನ ಮೇಲೆ ಬಂದ ಅಪವಾದ ಆತನ ಪ್ರಾಣವನ್ನೇ ತೆಗೆದಿದೆ. ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ. ಶವದ ಟೀ ಶರ್ಟ್ ಮೇಲೆ 143 ಎಂದಿದೆ. ಪ್ರಾಣಬಿಟ್ಟಿರುವ ಆತನ ಹೆಸರು ರಾಘವೇಂದ್ರ ಅಂತಾ. ಮೈಸೂರು (mysore) ಜಿಲ್ಲೆ ಹುಣಸೂರು (hunsur) ತಾಲೂಕು ಅಗ್ರಹಾರ ಕೊಪ್ಪಲು ಗ್ರಾಮದ ನಿವಾಸಿ. ರಾಘವೇಂದ್ರ ಒಬ್ಬ ಪ್ರಗತಿಪರ ರೈತ. ಕೃಷಿಯಲ್ಲಿ ಯಶಸ್ವಿಯಾಗಿದ್ದ. ಅಷ್ಟೇ ಅಲ್ಲ ನೂರಾರು ಯುವಕರು, ಮಹಿಳೆಯರಿಗೆ ಕೆಲಸ ಕೊಟ್ಟಿದ್ದ. ಹೀಗೆ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದ ರಾಘವೇಂದ್ರ ಈಗ ನೆನಪು ಮಾತ್ರ. ನಿನ್ನೆ ಭಾನುವಾರ ಆತ ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (suicide) ಶರಣಾಗಿದ್ದಾನೆ.

ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ಪಕ್ಕದ ಊರಿನ ಒಬ್ಬ ಮಹಿಳೆ. ಹೌದು ಆಕೆ ಪಕ್ಕದ ಕಟ್ಟೆಮಳಲವಾಡಿ ಗ್ರಾಮದ ಮಹಿಳೆ. ಆ ಮಹಿಳೆ ರಾಘವೇಂದ್ರ ಜಮೀನಿಗೆ ಕೆಲಸಕ್ಕೆ ಬರುತ್ತಿದ್ದರು. ಹೀಗೆ ಪರಿಚಯವಾಗಿದ್ದ ಮಹಿಳೆ ಜೊತೆ ರಾಘವೇಂದ್ರ ಸ್ವಲ್ಪ ಆತ್ಮೀಯವಾಗಿ ಇದ್ದರು. ಹೀಗಿರುವಾಗ ಕೆಲ ದಿನಗಳ ಹಿಂದೆ ಮಹಿಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ.

ಮಹಿಳೆಯನ್ನು ರಾಘವೇಂದ್ರನೇ ಬಚ್ಚಿಟ್ಟಿದ್ದಾನೆ ಅಂತ ಮಹಿಳೆಯ ಪೋಷಕರು ಮೈಸೂರಿನ ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವಿಷಯವಾಗಿ ಬಿಳಿಕೆರೆ ಪೊಲೀಸರು ರಾಘವೇಂದ್ರನನ್ನು ಕರೆದು ವಿಚಾರಣೆ ನಡೆಸಿ ವಾಪಸ್ಸು ಕಳಿಸಿದ್ದರು. ಅಷ್ಟೇ ಅಲ್ಲ ರಾಘವೇಂದ್ರ ಅಣ್ಣನನ್ನು ವಿಚಾರಣೆ ನಡೆಸಿದ್ದರು. ನಾಳೆ ಆ ಮಹಿಳೆ ಕರೆದುಕೊಂಡು ಬರದಿದ್ದರೆ ನಿಮ್ಮ ಅಣ್ಣನನ್ನು ಠಾಣೆಯಲ್ಲಿ ಕೂರಿಸುವುದಾಗಿ ಪೊಲೀಸರು ಹೇಳಿದ್ದರಂತೆ. ಇದರಿಂದ ಮನನೊಂದ ರಾಘವೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಒಂದು ಕಡೆ ಪೊಲೀಸರು, ಮತ್ತೊಂದು ಕಡೆ ಮಹಿಳೆ ನಾಪತ್ತೆಯಾದ ವಿಚಾರಕ್ಕೆ ಗ್ರಾಮಸ್ಥರು ಸಹ ರಾಘವೇಂದ್ರ ವಿರುದ್ಧ ಮಾತನಾಡುತ್ತಿದ್ದರು. ಈ ಎಲ್ಲಾ ಬೆಳವಣಿಗೆಯಿಂದಲೇ ಮನನೊಂದು ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡ ಅಂತ ಹೇಳಲಾಗುತ್ತಿದೆ. ಸದ್ಯಕ್ಕೆ ಮಹಿಳೆ ಇನ್ನೂ ಪತ್ತೆಯಾಗಿಲ್ಲ. ಬಿಳಿಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರವಷ್ಟೇ ಇದರ ಸತ್ಯಾಸತ್ಯತೆ ಗೊತ್ತಾಗಲಿದೆ. ಇದೆಲ್ಲಾ ಏನೇ ಇರಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಈ ರೀತಿ ಆತ್ಮಹತ್ಯೆಗೆ ಶರಣಾಗಿದ್ದು ಮಾತ್ರ ದುರಂತವೇ ಸರಿ.

ವರದಿ: ರಾಮ್, ಟಿವಿ 9, ಮೈಸೂರು