ಮೈಸೂರು: ಮೈಸೂರು ಜಿಲ್ಲೆ ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿ ಸ್ನೇಹಿತರ ಜೊತೆ ಸೇರಿ ಟ್ಯೂಷನ್ ನಾಮಫಲಕ ಬಿಚ್ಚುವ ವೇಳೆ ವಿದ್ಯುತ್ ಸ್ಪರ್ಶವಾಗಿ ಯುವಕ ಸಾವಿಗೀಡಾಗಿದ್ದಾನೆ. ತ್ಯಾಗರಾಜ ಕಾಲೋನಿಯ ಶ್ರೀನಿವಾಸ್(21) ಮೃತ ದುರ್ದೈವಿ. ವಿದ್ಯುತ್ ಶಾಕ್‌ನಿಂದ ಕುಸಿದುಬಿದ್ದು ಶ್ರೀನಿವಾಸ್ ಅಸ್ವಸ್ಥಗೊಂಡಿದ್ದ. ಸ್ನೇಹಿತರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಲ್ಲಿಗೆನಹಳ್ಳಿ ಬಳಿ ವಿದ್ಯುತ್ ಬೇಲಿ ತಗುಲಿ ಕಾಡಾನೆ ಸಾವು:
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಮಲ್ಲಿಗೆನಹಳ್ಳಿ ಬಳಿ ವಿದ್ಯುತ್ ಬೇಲಿ ತಗುಲಿ ಕಾಡಾನೆ ಅಸುನೀಗಿದೆ. ಬೆಳೆ ರಕ್ಷಣೆಗೆ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ಬೇಲಿ ತಗುಲಿ ಈ ಅನಾಹುತವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸುಮಾರು 30 ವರ್ಷ ಪ್ರಾಯದ ಗಂಡಾನೆ ಇದಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಸ್ಪರ್ಶಕ್ಕೆ ಹತ್ತಕ್ಕೂ ಹೆಚ್ಚು ಕಾಡಾನೆಗಳು ಬಲಿಯಾಗಿವೆ.
ಡಾಬಾ ಪಕ್ಕದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯ ಮೇಲೆ ಕುಳಿತು ಕಲ್ಲಿನಿಂದ ಹಲ್ಲೆ:
ಬೆಳಗಾವಿ: ಡಾಬಾವೊಂದರ ಪಕ್ಕದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯ ಮೇಲೆ ಕುಳಿತುಕೊಂಡು ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ಹೊರವಲಯದಲ್ಲಿ ನಡೆದಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮತ್ತೊ ಒಬ್ಬನಿಂದ ಹಲ್ಲೆ ಮಾಡುವುದನ್ನ ಬಿಡಿಸಲು ಸುತ್ತಮುತ್ತ ಇದ್ದವರು ಹರಸಾಹಸಪಟ್ಟಿದ್ದಾರೆ. ಮೂವರ ಗಲಾಟೆ ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ. ಗಲಾಟೆ ಮಾಡಿಕೊಂಡವರ ವಿರುದ್ಧ ದೂರು ದಾಖಲಾಗಿಲ್ಲ. ಯಾವ ವಿಚಾರಕ್ಕೆ ಗಲಾಟೆಯಾಯ್ತು ಮತ್ತು ಹೊಡೆದಾಡಿಕೊಂಡವರು ಯಾರು ಎಂಬುದನ್ನು ಪತ್ತೆ ಹಚ್ಚುವ ಗೋಜಿಗೂ ಹೋಗಿಲ್ಲ ಸ್ಥಳೀಯ ಪೊಲೀಸರು.
ರಾಜಹಂಸ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
ಮೈಸೂರಿನ ಮಿಲೇನಿಯಮ್ ಸರ್ಕಲ್ ನಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬನ್ನಿಮಂಟಪ ಬಸ್ ಡಿಪೋದಿಂದ ಗ್ರಾಮಾಂತರ ಬಸ್ ನಿಲ್ದಾಣದತ್ತ ರಾಜಹಂಸ ಬಸ್ ಹೊರಟಿತ್ತು. ಸ್ಥಳಕ್ಕೆ ಎನ್.ಆರ್. ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
Omicron Variant: ದಂಡ ಕೇಳಿದ ಮಾರ್ಷಲ್ಗೆ ಆವಾಜ್ ಹಾಕಿದ ಮಹಾಶಯ| Tv9 kannada
Published On - 7:58 am, Tue, 7 December 21