ಬೆಂಗಳೂರು/ಮಂಡ್ಯ, (ಸೆಪ್ಟೆಂಬರ್ 20): ನಾಗಮಂಗಲ ಗಲಭೆಗೆ ಸಂಬಂಧಪಟ್ಟಂತೆ ಬಿಜೆಪಿಯಿಂದ ರಚನೆಯಾಗಿದ್ದ ಸತ್ಯ ಶೋಧನಾ ಸಮಿತಿ ಇಂದು ಪಕ್ಷಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ನೇತೃತ್ವದ ಸತ್ಯ ಶೋಧನಾ ಸಮಿತಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವರದಿ ಹಸ್ತಾಂತರಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಸಂತ್ರಸ್ಥರನ್ನು ಭೇಟಿ ಮಾಡಿ ಸಮಿತಿ ತನ್ನ ವರದಿಯನ್ನು ತಯಾರಿಸಿದೆ.
ಒಂದು ಪಕ್ಷಕ್ಕೆ ಸಲ್ಲಿಕೆಯಾಗಿರುವ ವರದಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ಇಲಾಖೆಗೆ ಕೂಡಾ ಸಲ್ಲಿಕೆ ಮಾಡಲು ಬಿಜೆಪಿ ಯೋಜಿಸಿದೆ. ಕೇಂದ್ರ ಗೃಹ ಸಚಿವರಿಗೂ ವರದಿ ಸಲ್ಲಿಸಿ, ಘಟನೆಗೆ ಕೇರಳ ಮೂಲದ ಲಿಂಕ್ ಬಗ್ಗೆಯೂ ಉಲ್ಲೇಖಿಸಿ ಎನ್ ಐಎ ತನಿಖೆಗೆ ಒತ್ತಡ ಹಾಕುವುದು ಬಿಜೆಪಿಯ ಚಿಂತನೆಯಾಗಿದೆ.
ಇದನ್ನೂ ಓದಿ: ಮಂಡ್ಯ ನಾಗಮಂಗಲ ಗಲಭೆ ಪ್ರಕರಣ: ಮತ್ತೊಬ್ಬ ಅಧಿಕಾರಿಯ ತಲೆದಂಡ
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಕೋಮುಗಲಭೆ ಸಂಭವಿಸಿತ್ತು. ಈ ಗಲಭೆಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿ ಮತ್ತು ಪೆಟ್ರೋಲ್ ಬಾಂಬ್ನಿಂದ ಹಲವು ಅಂಗಡಿಗಳು, ಸರಕುಗಳು ಸುಟ್ಟು ಭಸ್ಮವಾಗಿವೆ. ಗಲಭೆಯಿಂದಾಗಿ ನಾಗಮಂಗಲದಲ್ಲಿ ಅಪಾರ ಮೌಲ್ಯದ ಆಸ್ತಿ-ಪಾಸ್ತಿ ನಾಶವಾಗಿದೆ. ಗಲಭೆಯಿಂದ ಒಟ್ಟು 2.66 ಕೋಟಿ ಮೌಲ್ಯದ ಆಸ್ತಿ ನಾಶವಾಗಿದೆ.
ನಾಗಮಂಗಲ ಪಟ್ಟಣದಾದ್ಯಂತ 26 ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. 1 ಕೋಟಿ 47 ಲಕ್ಷ ಮೌಲ್ಯದ ಕಟ್ಟಡಗಳು ಸುಟ್ಟು ಭಸ್ಮವಾಗಿವೆ. 1 ಕೋಟಿ 18 ಲಕ್ಷ ಮೌಲ್ಯದ ಸರಕು ಬೆಂಕಿ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿದೆ. ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡುವ ಭರವಸೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:44 pm, Fri, 20 September 24