ಕತ್ತಲಾಗ್ತಿದ್ದಂತೆ ಈ ಗ್ರಾಮದ ಮಹಿಳೆಯರಿಗೆ ಆವರಿಸುತ್ತೆ ಆತಂಕ; ಮನೆ ಬಾಗಿಲು ಬಡಿಯುವ ಕಿಡಿಗೇಡಿಗಳು
ಗ್ರಾಮ ಅಂದ ಮೇಲೆ ಅಲ್ಲಿ ರಾತ್ರಿ ಹಗಲು ಜನ ಒಡಾಡುವುದು ಸಹಜ. ಆದ್ರೆ, ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಇದೊಂದು ಗ್ರಾಮದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ರಾತ್ರಿ ಆದರೆ ಸಾಕು ಗ್ರಾಮಕ್ಕೆ ಬರುತ್ತಿರುವ ಪುಂಡರು ಮನೆ ಬಾಗಿಲುಗಳನ್ನ ಬಡಿದು ಎಸ್ಕೇಪ್ ಆಗುತ್ತಿದ್ದು, ಕತ್ತಲಾದರೆ ಸಾಕು ಮಹಿಳೆಯರು ಮನೆಯಿಂದ ಹೊರಗಡೆ ಬರಲು ಹೆದುರುವಂತಾಗಿದೆ. ಅದು ಯಾಕೆ ಅಂತೀರಾ? ಈ ಸ್ಟೋರಿ ಓದಿ.
ಬೆಂಗಳೂರು ಗ್ರಾಮಾಂತರ, ಸೆ.20: ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲೂಕಿನ ನರಗನಹಳ್ಳಿ ಎನ್ನುವ ಈ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಪುಂಡರ ಹಾವಳಿ ಹೆಚ್ಚಾಗಿದೆ. ದಿನಪೂರ್ತಿ ಹೊಲದಲ್ಲಿ ಕೆಲಸ, ಜಾನುವಾರುಗಳ ಆರೈಕೆ ಎಂದು ಕೆಲಸ ಮಾಡಿ ಮನೆಗೆ ಬರುವ ಜನರು ನಿದ್ದೆಗೆ ಜಾರುತ್ತಿದ್ದಂತೆ ಮನೆ ಬಳಿಗೆ ಬರುವ ಪುಂಡರು, ಬಾಗಿಲುಗಳನ್ನ ಬಡೆದು ಪರಾರಿ ಆಗುತ್ತಿದ್ದಾರಂತೆ. ಇದೇ ರೀತಿ ಕಳೆದ ಮೂರು ದಿನಗಳ ಹಿಂದೆ ಮಹಿಳೆಯೊಬ್ಬರು ತಡರಾತ್ರಿ ಶೌಚಕ್ಕೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಕಿಡಿಗೇಡಿಗಳು, ಆಕೆಯ ಬಾಯಿ ಮುಚ್ಚಿ, ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದು, ಸರಗಳ್ಳತನಕ್ಕೆ ಯತ್ನಿಸಿದ್ದಾರೆ. ಆದ್ರೆ, ಮಹಿಳೆ ಸರಗಳ್ಳತನ ಮಾಡಲು ಬಿಡದಿದಕ್ಕೆ ಹಲ್ಲೆ ನಡೆಸಿ, ನಂತರ ಆಕೆಯ ಬಟ್ಟೆಗಳನ್ನ ಹರಿದು ಪ್ರಜ್ಞೆ ತಪ್ಪಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ನಿರ್ಜನ ಪ್ರದೇಶದಲ್ಲಿ ಪ್ರಜ್ಞಾಹೀನವಾಗಿ ಬಿದ್ದಿದ್ದ ಮಹಿಳೆಯನ್ನ ಕುಟುಂಬಸ್ಥರು ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ನಂತರ ಕಿಡಿಗೇಡಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಗ್ರಾಮದಲ್ಲಿ ರಾತ್ರಿ ವೇಳೆ ಬೀದಿ ದೀಪಗಳಿಲ್ಲದ ಕಾರಣ ಅಪರಿಚಿತರು ಯಾರು ಎನ್ನುವುದು ಗೊತ್ತಾಗಿಲ್ಲ. ಈ ಹಿನ್ನಲೆ ಗ್ರಾಮಸ್ಥರೆಲ್ಲರೂ ರಾತ್ರಿ ವೇಳೆ ಬಾಗಿಲು ಬಡಿಯುವ ಖದೀಮರ ಹೆಡೆಮುರಿಕಟ್ಟಲು ಮುಂದಾಗಿದ್ದಾರೆ. ಹೀಗಾಗಿ ಕಳೆದ ರಾತ್ರಿ ಗ್ರಾಮಕ್ಕೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಬಾಗಿಲು ಬಡಿಯುತ್ತಿದ್ದಂತೆ ಹಿಡಿಯಲು ಮುಂದಾಗಿದ್ದು, ಅವರು ಬೈಕ್ ಗ್ರಾಮದಲ್ಲೆ ಬಿಟ್ಟು ಎಸ್ಕೇಪ್ ಆಗಿದ್ದಾರೆ.ಬಳಿಕ ಗ್ರಾಮಸ್ಥರು ಬೈಕ್ ಸಮೇತ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರಲ್ಲೊಂದು ಅಮಾನುಷ ಘಟನೆ: 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಹತ್ಯೆ
ಒಟ್ಟಾರೆ ರಾತ್ರಿಯಾಗುತ್ತಿದ್ದಂತೆ ಗ್ರಾಮಕ್ಕೆ ಎಂಟ್ರಿಕೊಡುವ ಕಿಡಿಗೇಡಿಗಳು ಮಾಡುತ್ತಿರುವ ಪುಂಡಾಟಿಕೆಗೆ ಮಹಿಳೆಯರು ಸೇರಿದಂತೆ ಪುರುಷರು ಸಹ ಬೆಚ್ಚಿ ಬಿದ್ದಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಗ್ರಾಮಸ್ಥರು ದೂರು ನೀಡಿದ್ದು, ಪೊಲೀಸರು ಪುಂಡರ ಹೆಡೆಮುರಿಕಟ್ಟುವ ಮೂಲಕ ಗ್ರಾಮಸ್ಥರ ಆತಂಕ ದೂರ ಮಾಡುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ