Namma Metro: ನಮ್ಮ ಮೆಟ್ರೋ ರೆಡ್ ಲೈನ್​ಗೆ ಇನ್ನೊಮ್ಮೆ ಡಿಪಿಆರ್ ಸಲ್ಲಿಕೆ; ಈ ಬಾರಿಯಾದ್ರು ಕೇಂದ್ರದಿಂದ ಸಿಗುತ್ತಾ ಗ್ರೀನ್ ಸಿಗ್ನಲ್

ಈ ಹಿಂದೆ ರಾಜ್ಯ ಸರ್ಕಾರ ಸರ್ಜಾಪುರ ಟು ಹೆಬ್ಬಾಳ ರೆಡ್ ಲೈನ್ ಯೋಜನೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿತ್ತು. ಇದೀಗ ಕೇಂದ್ರ ಸರ್ಕಾರ ಹೇಳಿದಂತೆ ಯೋಜನಾ ವೆಚ್ಚವನ್ನು ಕಡಿಮೆ ಮಾಡಿ ಮತ್ತೊಮ್ಮೆ ಡಿಪಿಆರ್ ಸಲ್ಲಿಸಿದೆ. 37 ಕಿಮೀ ಉದ್ದದ ಈ ಹಂತ-3A ಯೋಜನೆಗೆ 28 ಸ್ಟೇಷನ್‌ಗಳು ಇರಲಿವೆ. ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರದಿಂದ ಅನುಮೋದನೆಗಾಗಿ ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಯೋಜನೆ ನಾಲ್ಕು ಇಂಟರ್‌ಚೇಂಜ್ ಮಾರ್ಗಗಳನ್ನು ಸಂಪರ್ಕಿಸಲಿದೆ.

Namma Metro: ನಮ್ಮ ಮೆಟ್ರೋ ರೆಡ್ ಲೈನ್​ಗೆ ಇನ್ನೊಮ್ಮೆ ಡಿಪಿಆರ್ ಸಲ್ಲಿಕೆ; ಈ ಬಾರಿಯಾದ್ರು ಕೇಂದ್ರದಿಂದ ಸಿಗುತ್ತಾ ಗ್ರೀನ್ ಸಿಗ್ನಲ್
ಮೆಟ್ರೋ ಯೋಜನಾ ವೆಚ್ಚ ಇಳಿಸಿ ಮತ್ತೊಮ್ಮೆ ಡಿಪಿಆರ್ ಸಲ್ಲಿಸಿರುವ ಕುರಿತು ಮಾತನಾಡಿದ ಡಿಕೆ ಶಿವಕುಮಾರ್
Updated By: ಭಾವನಾ ಹೆಗಡೆ

Updated on: Oct 27, 2025 | 8:43 AM

ಬೆಂಗಳೂರು, ಅಕ್ಟೋಬರ್ 27: ಈ ಹಿಂದೆ ರಾಜ್ಯ ಸರ್ಕಾರ ಸರ್ಜಾಪುರ ಟು ಹೆಬ್ಬಾಳ ರೆಡ್ ಲೈನ್ ಯೋಜನೆಯನ್ನು (Redline Metro Project) ಕೇಂದ್ರ ಸರ್ಕಾರದ ಮುಂದಿಟ್ಟಿತ್ತು. ಆದರೆ ಯೋಜನಾ ವೆಚ್ಚ ಹೆಚ್ಚಿದೆ, ಕಡಿಮೆ ಮಾಡಿ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದ ಹಿನ್ನೆಲೆ ರಾಜ್ಯ ಸರ್ಕಾರ ಯೋಜನಾ ವೆಚ್ಚವನ್ನು ಕಡಿಮೆ ಮಾಡಿ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಯೋಜನೆಯ ಸಂಪೂರ್ಣ ಮಾಹಿತಿ ಕಳುಹಿಸಿದೆ. ಈ ಬಾರಿಯಾದರೂ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದರೆ ನಗರದಲ್ಲಿ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ.

ಯೋಜನಾ ವೆಚ್ಚ ಕಡಿಮೆ ಮಾಡಿ ಮತ್ತೊಮ್ಮೆ ಡಿಪಿಆರ್ ಸಲ್ಲಿಕೆ

ನಮ್ಮ ಮೆಟ್ರೋ ಹೆಬ್ಬಾಳ ಟು ಸರ್ಜಾಪುರ ಹಂತ 3A. ಯೋಜನೆಗೆ ಈ ಹಿಂದೆ ರಾಜ್ಯ ಸರ್ಕಾರ 28,405 ಕೋಟಿಯ ಡಿಪಿಆರ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಯೋಜನಾ ವೆಚ್ಚ ಹೆಚ್ಚಾಗಿದೆ ವೆಚ್ಚ ಕಡಿಮೆ ಎಂದು ಸೂಚನೆ ನೀಡಿತ್ತು. ಈ ಹಿನ್ನೆಲೆ ರಾಜ್ಯ ಸರ್ಕಾರ ಥರ್ಡ್ ಪಾರ್ಟಿಯಿಂದ ಮತ್ತೊಮ್ಮೆ ಹೊಸ DPR ರೆಡಿ ಮಾಡಿಸಿದ್ದು, ಇದರಲ್ಲಿ 28,405 ಕೋಟಿಯಿಂದ 25,485 ಗೆ ವೆಚ್ಚವನ್ನು ಇಳಿಸಲಾಗಿದೆ. ಅಂದರೆ 2,920 ಕೋಟಿಯಷ್ಟು ಯೋಜನಾ ವೆಚ್ಚವನ್ನು ಕಡಿಮೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಹಿಂದೆ ಒಂದು ಕಿ.ಮೀಗೆ 767 ಕೋಟಿ ವೆಚ್ಚವಾಗುತ್ತದೆ ಎಂದು ಡಿಪಿಆರ್ ಮಾಡಲಾಗಿತ್ತು. ಇದೀಗ ಒಂದು ಕಿ.ಮೀ ಗೆ 688 ಕೋಟಿ ವೆಚ್ಚವಾಗಲಿದೆ ಎಂದು ವರದಿ ನೀಡಿದೆ.

ಕೇಂದ್ರ ಸಚಿವರೊಡನೆ ನೂತನ ಮೆಟ್ರೋ ಯೋಜನೆಯ ಕುರಿತು ಮಾತನಾಡುತ್ತೇನೆ ಎಂದ ಡಿಸಿಎಂ

ಸರ್ಜಾಪುರದಿಂದ ಹೆಬ್ಬಾಳ ಮಾರ್ಗದಲ್ಲಿ ಒಟ್ಟು- 28 ಮೆಟ್ರೋ ಸ್ಟೇಷನ್ಗಳು ಬರಲಿದೆ. ಈ ಬಗ್ಗೆ ಮಾತನಾಡಿದ ಡಿಸಿಎಂ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ನಾವು ಜನರಿಗಾಗಿ ಆದಷ್ಟು ಮೆಟ್ರೋ ಜಾಸ್ತಿ ಮಾಡಲು ಡಿಪಿಆರ್ ಸಿದ್ಧ ಮಾಡುತ್ತಿದ್ದೇವೆ. ಅಕ್ಟೋಬರ್- 30 ರಂದು ಬೆಂಗಳೂರಿಗೆ ಕೇಂದ್ರ ಸಚಿವರು ಬರುತ್ತಿದ್ದಾರೆ. ಆ ವೇಳೆ ಅವರ ಮುಂದೆ ಈ ಬಗ್ಗೆ ಒತ್ತಡ ಹಾಕುತ್ತೇವೆ ಎಂದರು.

ಈಗಾಗಲೇ ಪ್ರಧಾನ ಮಂತ್ರಿಗಳಿಗೂ ಈ ಬಗ್ಗೆ ತಿಳಿಸಿದ್ದೀವಿ. ಸದ್ಯ ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ. ಕೇವಲ 13% ರಿಂದ 14% ರಷ್ಟು ಮಾತ್ರ ಹಣ ನೀಡುತ್ತಿದ್ದಾರೆ. ಉಳಿದ ಹಣ ನಮ್ಮದೇ ಆಗಿರುತ್ತದೆ. ಅದು ನಮ್ಮ ಕರ್ತವ್ಯ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದಿದ್ದಾರೆ. ಈ ಕೆಂಪು ಮೆಟ್ರೋ ಮಾರ್ಗವು ಹೆಬ್ಬಾಳದಲ್ಲಿ ನೀಲಿ ಮಾರ್ಗ,  ಕೆಆರ್‌ ವೃತ್ತದಲ್ಲಿ ‘ನೇರಳೆ ಮಾರ್ಗಕ್ಕೆ ಕನೆಕ್ಟ್ ಮಾಡಲಿದೆ. ಡೈರಿ ವೃತ್ತದಲ್ಲಿ ಗುಲಾಬಿ ಮಾರ್ಗ ಹಾಗೂ ಆಗರದಲ್ಲಿ ‘ನೀಲಿ ಮಾರ್ಗ’ವನ್ನು ಸಹ ಕನೆಕ್ಟ್ ಮಾಡಲಿದೆ. ಹೀಗಾಗಿ ಇಲ್ಲಿ ನಾಲ್ಕು ಇಂಟರ್‌ಚೇಂಜ್ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ಯಾವ್ಯಾವ ಏರಿಯಾದಲ್ಲಿ ಮೆಟ್ರೋ ಸ್ಟೇಷನ್ಗಳು ಬರಲಿವೆ

ಹೆಬ್ಬಾಳ, ಗಂಗಾನಗರ,ಪಶುವೈದ್ಯಕೀಯ ಮಹಾವಿದ್ಯಾಲಯ, ಮೇಖ್ರಿ ಸರ್ಕಲ್, ಗಾಲ್ಫ್ ಕ್ಲಬ್, ಪ್ಯಾಲೇಸ್ ಗುಟ್ಟಹಳ್ಳಿ, ಬಸವೇಶ್ವರ ವೃತ್ತ, ಕೆಆರ್ ಸರ್ಕಲ್, ಟೌನ್ ಹಾಲ್, ಶಾಂತಿನಗರ, ನಿಮ್ಹಾನ್ಸ್, ಡೈರಿ ಸರ್ಕಲ್, ಕೋರಮಂಗಲ 2ನೇ ಬ್ಲಾಕ್, ಕೋರಮಂಗಲ 3ನೇ ಬ್ಲಾಕ್, ಜಕ್ಕಸಂದ್ರ, ಅಗರ, ಇಬ್ಬಲೂರು, ಬೆಳ್ಳಂದೂರು ಗೇಟ್, ಕೈಕೊಂಡೂರು, ದೊಡ್ಡಕನ್ನಳ್ಳಿ, ಕಾರ್ಮೆಲಾರಂ, ದೊಡ್ಡಕನ್ನಳ್ಳಿ, ಅಗ್ರಹಾರ ರಸ್ತೆ ಮತ್ತು ಸರ್ಜಾಪುರ ಈ ಮಾರ್ಗಗಳಲ್ಲಿ ಮೆಟ್ರೋ ಸ್ಟೇಷನ್ಗಳು ಬರಲಿವೆ.