Weather Today: ರಾಜ್ಯದೆಲ್ಲೆಡೆ ಹೆಚ್ಚಿದ ವರುಣಾರ್ಭಟ; ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್
Karnataka Weather: ರಾಜ್ಯದಲ್ಲಿಂದು ವರುಣನ ಆರ್ಭಟ ಹೆಚ್ಚಿರಲಿದ್ದು, ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲೂ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ನೆರೆಯ ರಾಜ್ಯದಲ್ಲಿ ವರುಣಾರ್ಭಟ ಮುಂದುವರೆದಿದ್ದು, ಭಾರಿ ಗಾಳಿಯೊಂದಿಗೆ ಮೊಂಟಾ ಚಂಡಮಾರುತ ಅಪ್ಪಳಿಸುತ್ತಿದೆ. ಮೀನುಗಾರಿಕೆಗೂ ನಿಷೇಧ ಹೇರಿದ ಸ್ಥಳೀಯ ಅಧಿಕಾರಿಗಳು, ಎಚ್ಚರವಹಿಸುವಂತೆ ಕರಾವಳಿ ಪ್ರದೇಶದ ಜನರಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 27: ಕರ್ನಾಟದಲ್ಲಿ ವರುಣಾರ್ಭಟ (Weather Forecast) ಹೆಚ್ಚಿರಲಿದ್ದು, ಹವಾಮಾನ ಇಲಾಖೆ ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಉಳಿದೆಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಮಳೆ?
ಉತ್ತರ ಒಳನಾಡು ಪ್ರದೇಶಗಳಾದ ಹಾವೇರಿ, ಧಾರವಾಡ, 30-40 ಕೀಮೀ ಗಾಳಿಯ ವೇಗದೊಂದಿಗೆ ಗುಡುಗು ಸಹಿತ ಮಳೆಯಾಗಲಿದ್ದು, ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲಿ 30-40 ಕೀಮೀ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಿರಲಿದೆ.
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿಯೂ ಸಹ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ , ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ. ಬಳ್ಳಾರಿ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಲ್ಲಿಯೂ ಮಳೆ
ಬೆಂಗಳೂರಿನಲ್ಲಿ ಇಂದು ಶೇ. 55 ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಮೋಡ ಕವಿದ ವಾತಾವರಣವಿರಲಿದೆ. ನಗರದ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನೆರೆ ರಾಜ್ಯಗಳಲ್ಲಿ ಹೆಚ್ಚಿದ ವರುಣಾರ್ಭಟ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದಕ್ಕೆ ಮೊಂಟಾ ಸೈಕ್ಲೋನ್ ಅಂತಾ ನಾಮಕರಣ ಮಾಡಿದ್ದು, ಆಂಧ್ರದ ಮಚಲಿಪಟ್ಟಣಂ, ಕಳಿಂಗಪಟ್ಟಣ ನಡುವಿನ ಕಾಕಿನಾಡ ಸಮುದ್ರ ತೀರದಲ್ಲಿ 90ನಿಂದ 110 ಕಿಲೋ ಮೀಟರ್ ವೇಗದಲ್ಲಿ ಕರಾವಳಿ ಅಪ್ಪಳಿಸಲಿದೆ. ಭಾರೀ ಗಾಳಿಯೊಂದಿಗೆ ಮೊಂಟಾ ಚಂಡಮಾರುತ ಆರ್ಭಟಿಸಲಿದೆ.
ಒಡಿಶಾ, ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ಭಾರೀ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲೂ ಮಳೆ ಆಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ NDRF, SDRF, ರಕ್ಷಣಾ ಸಿಬ್ಬಂದಿ ನಿಯೋಜಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಈಗಾಗಲೇ ಸಮುದ್ರಕ್ಕೆ ತೆರಳಿರೋ ಬೋಟ್ಗಳ ಸಮೇತ ತೀರಕ್ಕೆ ವಾಪಸ್ಸಾಗುವಂತೆ ಸೂಚಿಸಲಾಗುತ್ತಿದೆ.
ಲಕ್ಷದ್ವೀಪದ ಸಮೀಪ ವಾಯುಭಾರ ಕುಸಿತದಿಂದ ಆತಂಕ
ಲಕ್ಷದ್ವೀಪದ ಸಮೀಪ ವಾಯುಭಾರ ಕುಸಿತ ವಾಗಿದ್ದು, ಸಮುದ್ರದಲ್ಲಿ ಬಿರುಗಾಳಿ ಬೀಸುತ್ತಿದೆ. ಗಾಳಿಯ ಒತ್ತಡ ಹೆಚ್ಚಿರುವುದರಿಂದ ತಮಿಳುನಾಡು ಬೋಟ್ಗಳು ಸೇರಿದಂತೆ ನಾಡ ದೋಣಿಗಳು ವಾಪಸ್ ಆಗುತ್ತಿವೆ. ಉಡುಪಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ಗಳು 2-3 ದಿನಗಳ ಹಿಂದೆಯೇ ಸುರಕ್ಷಿತವಾಗಿ ಮಲ್ಪೆ ಬಂದರು ಪ್ರವೇಶಿಸಿವೆ. ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಿಲಾಗಿದ್ದು, ಚಂಡಮಾರುತದ ಭೀತಿ ಹೆಚ್ಚಿರುವುದರಿಂದ ಮೀನುಗಾರರಿಗೆ ಆರ್ಥಿಕ ಹೊಡೆತ ಬೀಳಲಿದೆ ಎಂದು ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




