ಬೆಂಗಳೂರು: ಬ್ರಿಟನ್ನ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ರನ್ನು (Rishi Sunak) ಅವರ ಮಾವ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅಭಿನಂದಿಸಿದ್ದಾರೆ. ತಮ್ಮ ಅಳಿಯ ಉನ್ನತ ಹುದ್ದೆಗೇರಿರುವುದು ಹೆಮ್ಮೆ ತಂದಿದೆ ಎಂದು ಅವರು ಹೇಳಿದ್ದಾರೆ.
‘ಅಭಿನಂದನೆಗಳು ರಿಷಿ. ಆತನ ಬಗ್ಗೆ ನಮಗೆ ಹೆಮ್ಮೆ ಇದೆ. ಆತನಿಗೆ ಯಶಸ್ಸನ್ನು ಹಾರೈಸುತ್ತೇವೆ. ಆತ ಬ್ರಿಟನ್ನ ಜನತೆಗೆ ಅತ್ಯುತ್ತಮವಾದ ಸೇವೆ ನೀಡುವ ಬಗ್ಗೆ ನಮಗೆ ವಿಶ್ವಾಸವಿದೆ’ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ರಿಷಿ ಸುನಕ್ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಬಳಿಕ ನಾರಾಯಣ ಮೂರ್ತಿ ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿತ್ತು ಎಂದು ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿಯಾಗಿ ಅಳಿಯ ರಿಷಿ ಸುನಕ್ ಆಯ್ಕೆ: ಬೆಂಗಳೂರಿನ ಸುಧಾಮೂರ್ತಿ ನಿವಾಸದಲ್ಲಿ ಸಂಭ್ರಮಾಚರಣೆ
ಬ್ರಿಟನ್ ಅರ್ಥವ್ಯವಸ್ಥೆ ಅಧಃಪತನ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಬಳಿಕ ಪಕ್ಷದಿಂದ ರಿಷಿ ಸುನಕ್ ಮೊದಲ ಬಾರಿಗೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದರು. ಆದರೆ, ತಮ್ಮದೇ ಪಕ್ಷದ ಲಿಜ್ ಟ್ರಸ್ ಎದುರು ಸೋಲನುಭವಿಸಿದ್ದರು. ಬಳಿಕ ದೇಶದ ಅರ್ಥವ್ಯವಸ್ಥೆ ಸುಧಾರಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾದ ಕಾರಣಕ್ಕೆ ನೈತಿಕ ಹೊಣೆ ಹೊತ್ತು ಲಿಜ್ ಟ್ರಸ್ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ರಿಷಿ ಸುನಕ್ ಅವರನ್ನು ಪ್ರಧಾನಿ ಹುದ್ದೆಗೆ ಪಕ್ಷ ಆಯ್ಕೆ ಮಾಡಿದೆ.
1980ರ ಮೇ 12ರಂದು ಬ್ರಿಟನ್ನಲ್ಲಿ ರಿಷಿ ಸುನಕ್ ಜನಿಸಿದ್ದರು. ಯಶ್ವೀರ್-ಉಷಾ ದಂಪತಿ ಪುತ್ರನಾಗಿರೋ ರಿಷಿ ಸುನಕ್ ಅಜ್ಜ-ಅಜ್ಜಿ ಇಬ್ಬರೂ ಪಂಜಾಬ್ ಮೂಲದವರಾಗಿದ್ದಾರೆ. 2009ರಲ್ಲಿ ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿ ಪುತ್ರಿ ಅಕ್ಷತಾ ಮೂರ್ತಿ ಜೊತೆಗೆ ರಿಷಿ ಸುನಕ್ ವಿವಾಹವಾಗಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ