ಮೈಸೂರು: ಚಾಮುಂಡೇಶ್ವರಿ ರಥೋತ್ಸವಕ್ಕೆ ನೂತನ ಲಿಫ್ಟ್ ಲೋಕಾರ್ಪಣೆಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಲಿಫ್ಟ್ ಲೋಕಾರ್ಪಣೆಗೊಂಡಿದ್ದು, ರಥೋತ್ಸವದ ವೇಳೆ ಉತ್ಸವ ಮೂರ್ತಿ ಸಾಗಿಸಲು ಕಬ್ಬಿಣದಿಂದ ತಯಾರಿಸಿದ ಲಿಫ್ಟ್ ಸಿದ್ಧಗೊಂಡಿದೆ.
ಮಹಾರಾಜರ ಕಾಲದಲ್ಲಿ ಚಾಮುಂಡೇಶ್ವರಿ ರಥೋತ್ಸವಕ್ಕೆ ಉತ್ಸವ ಮೂರ್ತಿ ಸಾಗಿಸಲು ಮರದ ಲಿಫ್ಟ್ಅನ್ನು ಉಡುಗೊರೆಯಾಗಿ ನೀಡಲಾಗಿತ್ತು. ಅದು ದುರಸ್ಥಿಯಾದ ಕಾರಣ ಅದೇ ಮಾದರಿಯ ಕಬ್ಬಿಣದ ಲಿಫ್ಟ್ ತಯಾರಿಸಲಾಗಿದೆ. ನೂತನ ಲಿಫ್ಟ್ಅನ್ನು ರೈಲ್ವೆ ವರ್ಕ್‌ಶಾಪ್‌ನಲ್ಲೇ ನಿರ್ಮಾಣ ಮಾಡಲಾಗಿದೆ. ಒಟ್ಟು 5 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮುಗಿದಿದೆ. ಲಿಫ್ಟ್ಗೆ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿದೆ.
ಆಶ್ವೀಜ ಶುದ್ಧ ಹುಣ್ಣಿಮೆಯಂದು ಚಾಮುಂಡೇಶ್ವರಿ ರಥೋತ್ಸವ
ಪ್ರತಿ ವರ್ಷ ಆಶ್ವೀಜ ಶುದ್ಧ ಹುಣ್ಣಿಮೆಯಂದು ಚಾಮುಂಡೇಶ್ವರಿ ರಥೋತ್ಸವ ನಡೆಯುತ್ತದೆ. ರಥೋತ್ಸವದ ಎರಡು ದಿನಗಳ ನಂತರ ರಾತ್ರಿ ದೇವಾಲಯದ ಸಮೀಪದಲ್ಲೇ ಇರುವಂತಹ ಕೊಳದಲ್ಲಿ ನಡೆಯುವ ತಪೋತ್ಸವ ನೋಡಲು ದೇಶ ವಿದೇಶಗಳಿಂದ ಜನರು ಬಂದು ನೆಲೆಸಿರುತ್ತಾರೆ. ಬೆಟ್ಟ ಹತ್ತಲು ಟಾರು ರಸ್ತೆ ಇದೆ. ಆ ಮೂಲಕ ಜನರು ಬೆಟ್ಟ ಹತ್ತಬಹುದು. ಇಲ್ಲವೇ, ಸಾರಿಗೆ ವ್ಯವಸ್ಥೆಯ ಮೂಲಕ ಬೆಟ್ಟ ಹತ್ತಬಹುದು. ಅಲ್ಲಿರುವ ಮಹಾಬಲೇಶ್ವರ ದೇವಸ್ಥಾನ ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮೊದಲೇ ನಿರ್ಮಿತವಾದದ್ದು ಎಂಬ ಇತಿಹಾಸವಿದೆ.
ವಿಶ್ವದಾದ್ಯಂತ ಹೆಸರು ಪಡೆದ ಚಾಮುಂಡೇಶ್ವರಿ ರಥೋತ್ಸವ
ವಿಶ್ವದಾದ್ಯಂತ ಹೆಸರು ಪಡೆದಿರುವ ಮೈಸೂರಿನ ಚಾಮುಂಡೇಶ್ವರಿ ರಥೋತ್ಸವ ದಸರಾ ಮಹೋತ್ಸವದ ಕೊನೆಯ ಘಟ್ಟ. ಈ ಬಾರಿಯಾ ದಸರಾದಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಅಷ್ಟು ಜನರು ಸೇರಿರಲಿಲ್ಲ. ಬಹಳ ಅಚ್ಚುಕಟ್ಟಿನ ಜೊತೆ ಸಾಂಪ್ರದಾಯಿಕವಾಗಿ ದಸರಾ ನೆರವೇರಿಸಲಾಗಿದೆ. ಮೊದಲೆಲ್ಲಾ ದಸರಾ ಮುಗಿದ ನಂತರ ಬಹಳ ವಿಜೃಂಭಣೆಯಿಂದ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಬಾರಿ ಜಾತ್ರೆ ವಿಶೇಷ ಆಚರಣೆಗೆ ಕೊರೊನಾ ಅಡ್ಡಿಯಾಗಿತ್ತು.
ಇದನ್ನೂ ಓದಿ: Photos ಮೈಸೂರು ದಸರಾ ಜಂಬೂ ಸವಾರಿ 2020ರ ಒಂದು ಝಲಕ್
ಇದನ್ನೂ ಓದಿ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ.. ಸರಳ ದಸರಾ ಜಂಬೂ ಸವಾರಿಗೆ ಸಿಎಂ ಚಾಲನೆ