ಬಾಗಲಕೋಟೆ: ಜಿಲ್ಲೆಯ ಘಟಪ್ರಭಾ ನದಿಯ ಹಿನ್ನೀರು ಪ್ರದೇಶಕ್ಕೆ ಕಾಲಿಟ್ಟರೆ ಸಾಕು ಬರಿ ಜಾಲಿಕಂಟಿಗಳೇ ಸ್ವಾಗತ ಮಾಡುತ್ತವೆ. ನಗರದ ಸೌಂದರ್ಯಕ್ಕೆ ಹಿನ್ನೀರು ಪ್ರದೇಶದಲ್ಲಿ ಬೆಳೆದ ಜಾಲಿಕಂಟಿಗಳೇ ಸದ್ಯ ಅಡ್ಡಿಯುಂಟು ಮಾಡಿವೆ. ಈ ಕಾರಣದಿಂದಾಗಿ ನದಿಯ ದಡದ ಅಂದವನ್ನು ಹೆಚ್ಚಿಸಲು ಅರಣ್ಯ ಇಲಾಖೆ ಮತ್ತು ಪಟ್ಟಣದ ಅಭಿವೃದ್ಧಿ ಪ್ರಾಧಿಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಬಾಗಲಕೋಟೆ ನಗರಕ್ಕೆ ಹೊಂದಿಕೊಂಡಿರುವ ಘಟಪ್ರಭಾ ನದಿ ಹಿನ್ನೀರನ್ನು ಆಲಮಟ್ಟಿ ಜಲಾಶಯದ ಎತ್ತರಕ್ಕನುಗುಣವಾಗಿ ಸ್ಥಳಾಂತರವಾಗಿತ್ತು. ಆದರೆ ಇದು ಮಾರಕವಾಗಿದ್ದು, ಹಿನ್ನೀರು ಪ್ರದೇಶದಲ್ಲಿ ಕೊಳಚೆ ನೀರಿನ ಮೂಲಕ ಕೆಲವರು ತರಕಾರಿ ಬೆಳೆದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದಾರೆ ಎನ್ನುವ ವಿಚಾರ ಕೆಲವು ದಿನಗಳ ಹಿಂದೆಯಷ್ಟೇ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದನ್ನು ಕೂಲಂಕಶವಾಗಿ ವಿಚಾರಿಸಿದ ನಂತರದಲ್ಲಿ ಇದೀಗ ಬಾಗಲಕೋಟೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರದೇಶದಲ್ಲಿ ಸುಂದರ ಅರಣ್ಯ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದಾರೆ.
ಹಿನ್ನೀರು ಪ್ರದೇಶದಲ್ಲಿ ತಂಪಾದ ವಾತಾವರಣ ಇದ್ದು, ಗಿಡಗಳು ತುಂಬಾ ಚೆನ್ನಾಗಿ ಬೆಳೆಯುತ್ತವೆ.ಆದ್ದರಿಂದ ಈ ಭಾಗದಲ್ಲಿ ಗಿಡ ಬೆಳೆಸಲು ನಿರ್ಧರಿಸಿದ್ದು, ಜೂನ್ ತಿಂಗಳ ಪರಿಸರ ದಿನಾಚರಣೆಯಂದು ಈ ಮಹತ್ವದ ಕಾರ್ಯ ಆರಂಭಿಸಲಿದ್ದು, ನಗರದ ಸುತ್ತಲೂ ಅರಣ್ಯ ಸೌಂದರ್ಯ ಸೃಷ್ಟಿ ಮಾಡಲು ಮುಂದಾಗಿದ್ದೇವೆ ಎಂದು ಬೆಳಗಾವಿ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ವಿ ಪಾಟಿಲ್ ಹೇಳಿದ್ದಾರೆ.
ಬಾಗಲಕೋಟೆ ಸುತ್ತಮುತ್ತಲೂ ಘಟಪ್ರಭಾ ನದಿಯ ಆಲಮಟ್ಟಿ ಜಲಾಶಯದ ಹಿನ್ನೀರು ಸಾಕಷ್ಟು ಪ್ರಮಾಣದಲ್ಲಿ ಆವರಿಸಿದೆ.ಇದೆ ಜಾಗದಲ್ಲಿ ಕೆಲ ರೈತರು ಕೃಷಿ ಕೂಡ ಮಾಡುತ್ತಾರೆ.ಆದರೆ ಸಾಕಷ್ಟು ಪ್ರದೇಶ ಪ್ರಯೋಜನಕ್ಕೆ ಬಾರದೆ ಹಾಗೆ ಉಳಿದಿತ್ತು. ಇಂತಹ ಪ್ರದೇಶದಲ್ಲಿ ಸುಂದರ ಅರಣ್ಯ ನಿರ್ಮಿಸುವ ಯೋಜನೆಯನ್ನು ಬಾಗಲಕೋಟೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದು, ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಾಗಲಕೋಟೆಯಿಂದ ಗದ್ದನಕೇರಿ ಕ್ರಾಸ್ವರೆಗೂ ಆಲಮಟ್ಟಿ ಹಿನ್ನೀರು ವ್ಯಾಪ್ತಿಯಲ್ಲಿ ಒಟ್ಟು 400ಕ್ಕೂ ಹೆಚ್ಚು ಪ್ರದೇಶದಲ್ಲಿ ಗಿಡ ಬೆಳೆಸೋಕೆ ಪ್ಲಾನ್ ಸಿದ್ಧವಾಗಿದ್ದು, ಈಗಾಗಲೇ ಅರಣ್ಯ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ ಗಮನಕ್ಕೆ ತರಲಾಗಿದ್ದು, ಸಮ್ಮತಿ ಸೂಚಿಸಿದ್ದಾರಂತೆ. ಇನ್ನು ಇದಲ್ಲದೇ ಬಾಗಲಕೋಟೆ ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ವೀರಣ್ಣ ಚರಂತಿಮಠ ಈ ಬಗ್ಗೆ ಆಸಕ್ತಿ ತೋರಿದ್ದು, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಜಾಲಿಕಂಟಿ ತೆರವುಗೊಳಿಸಿ ಕೊಡುತ್ತೇವೆ. ಅರಣ್ಯ ಇಲಾಖೆ ಹಾಗೂ ಬಿಟಿಡಿಎ ಜಂಟಿ ಸರ್ವೆ ಮಾಡಿ ಇಲ್ಲಿ ಸುಂದರ ಅರಣ್ಯ ನಿರ್ಮಿಸಲಾಗುವುದು ಇದರಿಂದ ಬಾಗಲಕೋಟೆ ನಗರದ ಚಿತ್ರಣ ಬದಲಾಗಲಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಮುಳುಗಡೆ ಪ್ರದೇಶ ಎಂದು ನಿರ್ಲಕ್ಷ್ಯಕ್ಕೆ ಒಳಗಾದ ಪ್ರದೇಶ ಇನ್ನು ಸುಂದರ ತಾಣವಾಗಲಿದೆ. ಯೋಜನೆ ಪ್ರಕಾರ ಎಲ್ಲ ಕೆಲಸ ನಡೆದರೆ ಬಾಗಲಕೋಟೆ ನಗರಕ್ಕೆ ಮತ್ತಷ್ಟು ಕಳೆ ಬರುವುದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ:
ದೇಹ ಸೇರುತ್ತಿದೆ ವಿಷ; ಬಾಗಲಕೋಟೆಯಲ್ಲಿ ಚರಂಡಿ ನೀರಲ್ಲಿ ತರಕಾರಿ ಬೆಳೆಯುತ್ತಿರುವ ಬೆಳೆಗಾರರ ವಿರುದ್ಧ ಸ್ಥಳೀಯರ ಆಕ್ರೋಶ
ಬಾಗಲಕೋಟೆ ರೈತರಲ್ಲಿ ಆತಂಕ; ಕೊರೊನಾ ಎರಡನೇ ಅಲೆಗೆ ತತ್ತರಿಸಿದ ಟೊಮ್ಯಾಟೊ ಬೆಳೆಗಾರ
(New plan by Bagalkot Forest Department and Town Development Authority to build beautiful forest by using backwater)