ಗಣಿನಾಡು ಬಳ್ಳಾರಿಯಲ್ಲಿ ಈಗಾಗಲೇ 40 ಡಿಗ್ರಿಗೂ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಬಿರು ಬಿಸಿಲಿನಿಂದಾಗಿ ಭೂಮಿ ಕಾದ ಕಬ್ಬಿಣವಾಗಿದೆ. ಹೀಗಾಗಿಯೇ ಬಿಸಿಲಿನ ಎಫೆಕ್ಟ್ ನವಜಾತ ಶಿಶುಗಳ ಮೇಲೆ ಹಾಗೂ ಚಿಕ್ಕಚಿಕ್ಕ ಮಕ್ಕಳ ಮೇಲೆ ಆಗುತ್ತಿದೆ. ಪೋಷಕರು ಸಾಕಷ್ಟು ಮುಂಜಾಗ್ರತೆ ವಹಿಸಿದ್ರೂ ಬಿಸಿಲಿನಿಂದ ಶಿಶುಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬಳ್ಳಾರಿಯಲ್ಲಿ ಭಾರಿ ಬಿಸಿಲಿನ ಪರಿಣಾಮ ನವಜಾತ ಶಿಶುಗಳು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾಹಿತಿ ಪ್ರಕಾರ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ನಿತ್ಯ 6ರಿಂದ 7 ಶಿಶುಗಳು ಬಿಸಿಲಿನ ಸಮಸ್ಯೆಯಿಂದ ಚಿಕಿತ್ಸೆಗೋಸ್ಕರ ದಾಖಲಾಗುತ್ತಿದ್ದಾರಂತೆ. ವಿಮ್ಸ್ನ ನವಜಾತ ಶಿಶುಗಳ ಸ್ಪೇಷಲ್ ಕೇರ್ ಘಟಕದಲ್ಲಿ ನವಜಾತ ಶಿಶುಗಳಿಗೆ ಸಮರ್ಪಕ ಚಿಕಿತ್ಸೆ ನೀಡಲಾಗುತ್ತಿದೆ. 20 ದಿನದಲ್ಲಿ 70 ಕ್ಕೂ ಹೆಚ್ಚು ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಲಾಗಿದೆ. ಬಿಸಿಲಿನ ಪ್ರಮಾಣ ಜಾಸ್ತಿಯಾಗಿದ್ದರಿಂದ ಇನ್ನಷ್ಟು ಶಿಶುಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನು ಮಕ್ಕಳಲ್ಲಿ ಈ ರೀತಿ ಸಮಸ್ಯೆ ಎದುರಾಗಿರುವುದು ಬಳ್ಳಾರಿ ಜಿಲ್ಲೆಯ ಪೋಷಕರಲ್ಲಿ ಆತಂಕ ಮೂಡಿಸಿದೆ. ಬಿಸಿಲು ಮತ್ತಷ್ಟು ಹೆಚ್ಚಾದರೆ ಪರಿಸ್ಥಿತಿ ಏನಪ್ಪಾ ಅನ್ನೋ ಭಯವೂ ಪೋಷಕರನ್ನ ಕಾಡುತ್ತಿದೆ. ಮಕ್ಕಳು ಮಾತ್ರವಲ್ಲ ವೃದ್ಧರಿಗೂ ಬಿಸಿಲಿನಿಂದ ನಾನಾ ಸಮಸ್ಯೆ ಎದುರಾಗುತ್ತಿವೆ. ಒಟ್ನಲ್ಲಿ ಬೇಸಿಗೆ ಮುಗಿಯುವ ತನಕ ಜನರು ಒಂದಷ್ಟು ಅಲರ್ಟ್ ಆಗಿದ್ರೆ ಒಳ್ಳೆಯದು. ಇಲ್ಲವಾದ್ರೆ ಮತ್ತಷ್ಟು ಸಮಸ್ಯೆ ಎದುರಾಗುವ ಅಪಾಯ ಇದೆ.
ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾಗಿಯೇ ಹುಟ್ಟಿದ ಶಿಶು; ಅಮ್ಮ ಪಡೆದ ವ್ಯಾಕ್ಸಿನ್ನಿಂದ ಶಕ್ತಿ ಪಡೆದ ಅಮೆರಿಕದ ಮೊದಲ ಮಗು ಇದು..
(Newly Born Babies Facing Dehydration Problems Due to Heavy Summer in Bellary)