ಬೆಂಗಳೂರು, ಮೇ 16: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿರುವ (Bengaluru) ಇಸ್ರೇಲ್ ದೂತಾವಾಸ ಕಚೇರಿ (Israel Consulate) ಸ್ಫೋಟಕ್ಕೆ ಮತ್ತು ದೇಶದ ವಿವಿಧ ನಗರಗಳಲ್ಲಿರುವ ವಿದೇಶಗಳ ರಾಯಭಾರ ಕಚೇರಿಗಳಲ್ಲಿ ಸ್ಫೋಟಕ್ಕೆ ಸಂಚು ಹೂಡಿದ್ದ ಪ್ರಮುಖ ಆರೋಪಿ ನೂರುದ್ದೀನ್ ಅಲಿಯಾಸ್ ರಫಿಯನ್ನು (Nuruddin alias Rafi) ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಮೈಸೂರಿನಲ್ಲಿ ಬಂಧಿಸಿದ್ದಾರೆ. ಸ್ಫೋಟಕ್ಕೆ ಸಂಚು ಹೂಡಿದ್ದ ಆರೋಪದಲ್ಲಿ ಬಂಧಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನೂರುದ್ದೀನ್ ಬಳಿಕ ನಾಪತ್ತೆಯಾಗಿದ್ದ.
ವಿಚಾರಣೆಗೂ ಹಾಜರಾಗದೆ ನಾಪತ್ತೆಯಾದ ಕಾರಣ ಆತನನ್ನು ಚೆನ್ನೈನ ನ್ಯಾಯಾಲಯ ಘೋಷಿತ ಅಪರಾಧಿ ಎಂದು ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಆತ ಮೈಸೂರಿನ ರಾಜೀವ್ ನಗರದಲ್ಲಿ ಅಡಗಿದ್ದಾನೆ ಎಂಬ ಸುಳಿವು ಎನ್‌ಐಎ ಅಧಿಕಾರಿಗಳಿಗೆ ದೊರೆತಿತ್ತು. ಸುಳಿವು ದೊರೆತ ಬೆನ್ನಲ್ಲೇ ದಾಳಿ ನಡೆಸಿದ ಎನ್‌ಐಎ ತಂಡ ಆತನನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ.
ನೂರುದ್ದೀನ್, ಪಾಕಿಸ್ತಾನದ ಅಮಿರ್ ಜುಬೇಗ್ ಸಿದ್ದಿಕೆ ಮತ್ತು ಶ್ರೀಲಂಕಾದ ಮುಹಮ್ಮದ್ ಜೊತೆ ಸೇರಿಕೊಂಡು ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿ ಮತ್ತು ಬೆಂಗಳೂರಿನಲ್ಲಿರುವ ಇಸ್ರೇಲ್ ದೂತಾವಾಸ ಕಚೇರಿಯನ್ನು ಸ್ಪೋಟಿಸಲು 2014ರಲ್ಲಿ ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಅಗತ್ಯವಾದ ಹಣವನ್ನು ನೂರೂದ್ದೀನ್ ನಕಲಿ ನೋಟು ಚಲಾವಣೆಯ ಮೂಲಕ ನೀಡಿದ್ದ. ಈ ಪ್ರಕರಣದಲ್ಲಿ ಆತನ ಬಂಧನವಾಗಿ ಆತನ ವಿರುದ್ಧ ಬೇಹುಗಾರಿಕೆ ಪ್ರಕರಣ ದಾಖಲಿಸಲಾಗಿತ್ತು. ಆತನಿಗೆ 2023ರಲ್ಲಿ ಷರತ್ತಬದ್ಧ ಜಾಮೀನು ನೀಡಲಾಗಿತ್ತು. ಬಳಿಕ ಈತ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ಕುರಿತು ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಇದನ್ನೂ ಓದಿ: ಒಮ್ಮೆ ಟಿಕೆಟ್ ರದ್ದು, ಮತ್ತೆ ಟಿಕೆಟ್ ಕಾಯ್ದಿರಿಸಿ ವಿಮಾನ ಏರದ ಪ್ರಜ್ವಲ್: ಎಸ್ಐಟಿ ಅಧಿಕಾರಿಗಳು ಬೇಸ್ತು
ಕೆಲವೇ ದಿನಗಳ ಹಿಂದೆ, ಅಂದರೆ ಮೇ 7ರಂದು ನೂರುದ್ದೀನ್ನನ್ನು ಎನ್‌ಐಎ ವಿಶೇಷ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ