ಒಬಾಮ ಭೇಟಿ ವೇಳೆ ಸ್ಫೋಟಕ್ಕೆ ಸಂಚು ಹೂಡಿದ್ದ ಭಟ್ಕಳದ ಐಎಂ ಉಗ್ರರಿಗೆ 10 ವರ್ಷ ಜೈಲು: ಎನ್​ಐಎ ಕೋರ್ಟ್ ತೀರ್ಪು

|

Updated on: Dec 25, 2024 | 12:52 PM

ಭಟ್ಕಳ ಮೂಲದ ಮೂವರು ಇಂಡಿಯನ್ ಮುಜಾಹಿದ್ಧೀನ್ ಉಗ್ರರಿಗೆ 2015ರಲ್ಲಿ ಅಮೆರಿಕ ಅಧ್ಯಕ್ಷ ಒಬಾಮ ಅವರ ಭಾರತ ಭೇಟಿಯ ವೇಳೆ ಬಾಂಬ್ ಸ್ಫೋಟಕ್ಕೆ ಸಂಚು ಹೂಡಿದ ಪ್ರಕರಣದಲ್ಲಿ 10 ವರ್ಷ ಸಾದಾ ಜೈಲು ಶಿಕ್ಷೆ ಪ್ರಕಟಿಸಿ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲ ತೀರ್ಪು ಪ್ರಕಟಿಸಿದೆ.

ಒಬಾಮ ಭೇಟಿ ವೇಳೆ ಸ್ಫೋಟಕ್ಕೆ ಸಂಚು ಹೂಡಿದ್ದ ಭಟ್ಕಳದ ಐಎಂ ಉಗ್ರರಿಗೆ 10  ವರ್ಷ ಜೈಲು: ಎನ್​ಐಎ ಕೋರ್ಟ್ ತೀರ್ಪು
ಎನ್​ಐಎ
Follow us on

ಬೆಂಗಳೂರು, ಡಿಸೆಂಬರ್ 25: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ಬಾಂಬ್ ಸ್ಫೋಟಕ್ಕೆ ಸಂಚು ಹೂಡಿದ್ದ ಭಟ್ಕಳ ಮೂಲದ ಮೂವರು ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರರಿಗೆ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯ 10 ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ. ಗಣರಾಜ್ಯೋತ್ಸವ ಸಮಾರಂಭದ ಅತಿಥಿಯಾಗಿ 2015ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಸ್ಫೋಟ ನಡೆಸಲು ಸಂಚು ಹೂಡಿದ್ದ ಪ್ರಕರಣದಲ್ಲಿ ಇವರನ್ನು ದೋಷಿ ಎಂದು ಕೆಲವು ದಿನಗಳ ಹಿಂದಷ್ಟೇ ಕೋರ್ಟ್​ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣ ಕಾಯ್ದಿರಿಸಿತ್ತು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಮೂವರು ಅಪರಾಧಿಗಳು ಪಾಕಿಸ್ತಾನದ ಆಣತಿಯಂತೆ ದುಷ್ಕೃತ್ಯಕ್ಕೆ ಸಂಚು ಹೂಡಿದ್ದರು.

ಎನ್​ಐಎ ವಿಶೇಷ ನ್ಯಾಯಾಲಯವು ಅಫಾಕ್‌ಗೆ 1.55 ಲಕ್ಷ ರೂಪಾಯಿ, ಸಬೂರ್ ಮತ್ತು ಹುಸೇನ್‌ಗೆ ತಲಾ 95,000 ರೂಪಾಯಿ ದಂಡ ವಿಧಿಸಿದೆ. ಐಪಿಸಿ, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೂವರಿಗೆ ಶಿಕ್ಷೆ ವಿಧಿಸಲಾಗಿದೆ.

2015ರಲ್ಲಿ ನಗರದ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಸಿಬಿ ಎಸಿಪಿ ತಮ್ಮಯ್ಯ ಎಂಕೆ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ಭಟ್ಕಳದ ರಿಯಾಜ್ ಅಹಮದ್ ಸಯೀದಿ ಮತ್ತು ಜೈನುಲ್ಲಾಬುದ್ದೀನ್ ಅವರನ್ನು ಖುಲಾಸೆಗೊಳಿಸಲಾಗಿತ್ತು. ಇತರ ಆರೋಪಿಗಳಾದ ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಅಲಿಫ್ ಮತ್ತು ಸಮೀರ್ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ: ಕಂದಕಕ್ಕೆ ಉರುಳಿದ ಸೇನಾ ವಾಹನ, ಕರ್ನಾಟಕದ 3 ಯೋಧರು ಹುತಾತ್ಮ

ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ, ಉಗ್ರರು ಸ್ಫೋಟಕಗಳನ್ನು ಸಂಗ್ರಹಿಸುತ್ತಿರುವುದು ತಿಳಿದುಬಂದಿತ್ತು. ನಂತರ ಉಗ್ರರನ್ನು ಬಂಧಿಸಿದ ಪೊಲೀಸರು ಡಿಟೋನೇಟರ್‌ಗಳು, ಜಿಲಾಟಿನ್ ಸ್ಟಿಕ್‌ಗಳು, ಪೈಪ್ ಬಾಂಬ್‌ಗಳು, ಸ್ಫೋಟಕ ವಸ್ತುಗಳು, ಸರ್ಕ್ಯೂಟ್ ಬೋರ್ಡ್‌ಗಳು, ಟೈಮರ್‌ಗಳು, ಗನ್‌ಪೌಡರ್ ಮತ್ತು ಬಾಂಬ್‌ಗಳಲ್ಲಿ ಬಳಸಲಾದ ಇತರ ವಸ್ತುಗಳು ಮತ್ತು ಯುಎಇಯ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ