ಮಂಡ್ಯದಲ್ಲಿ ಅಬಕಾರಿ ಇಲಾಖೆ ಲಂಚ ಪ್ರಕರಣ: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಫ್​ಐಆರ್, ಲೋಕಾ ತನಿಖೆ ಚುರುಕು

ಸಕ್ಕರೆನಾಡು ಮಂಡ್ಯದಲ್ಲಿ ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಟಾಬಯಲಾಗಿತ್ತು. ಸಿಎಲ್ 7 ಬಾರ್ ಲೈಸನ್ಸ್​​ಗೆ ಅನುಮತಿ ನೀಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಲಂಚಬಾಕ ಅಧಿಕಾರಿಗಳ ವಿರುದ್ಧ ಕೊನೆಗೂ ಲೋಕಾಯುಕ್ತ ಎಫ್​​ಐಆರ್ ದಾಖಲಿಸಿದೆ. ಇದೀಗ ಲೋಕಾಯುಕ್ತ ತನಿಖೆ ಆರಂಭವಾಗಿದೆ.

ಮಂಡ್ಯದಲ್ಲಿ ಅಬಕಾರಿ ಇಲಾಖೆ ಲಂಚ ಪ್ರಕರಣ: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಫ್​ಐಆರ್, ಲೋಕಾ ತನಿಖೆ ಚುರುಕು
ಅಬಕಾರಿ ಇಲಾಖೆ ಡಿಸಿ ರವಿಶಂಕರ್ ಹಾಗೂ‌ ಮದ್ದೂರು ಅಬಕಾರಿ ಇನ್ಸ್​ಪೆಕ್ಟರ್ ಶಿವಕುಮಾರ್ ಆರಾಧ್ಯ
Follow us
ಪ್ರಶಾಂತ್​ ಬಿ.
| Updated By: Ganapathi Sharma

Updated on: Dec 25, 2024 | 11:58 AM

ಮಂಡ್ಯ, ಡಿಸೆಂಬರ್ 25: ಮಂಡ್ಯದಲ್ಲಿ ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಕಳೆದ ತಿಂಗಳು ಬೆಳಕಿಗೆ ಬಂದಿತ್ತು. ಕಡೆಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಆರಂಭವಾಗಿದೆ. ಪ್ರಕರಣ ಸಂಬಂಧ ಮಂಡ್ಯ ಲೋಕಾಯುಕ್ತ ಅಧಿಕಾರಿಗಳು ಎಫ್​​ಐಆರ್ ದಾಖಲಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಡಿಸಿ ರವಿಶಂಕರ್ ಹಾಗೂ‌ ಮದ್ದೂರು ಅಬಕಾರಿ ಇನ್ಸ್​ಪೆಕ್ಟರ್ ಶಿವಕುಮಾರ್ ಆರಾಧ್ಯ ವಿರುದ್ಧ ಕಲಂ 7(a) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 ರ ಅಡಿ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ತನಿಖೆ ಆರಂಭಿಸಿದೆ‌.

ಮಂಡ್ಯ ಜಿಲ್ಲೆ ‌ಮದ್ದೂರು ತಾಲೂಕಿನ ಚಂದೂಪುರ ಗ್ರಾಮದ ಪುನೀತ್ ‌ಎಂಬುವವರು ಬಾರ್ ಅಂಡ್ ರೆಸ್ಟೋರೆಂಟ್​​ಗಾಗಿ ಸಿಎಲ್ -7 ಬಾರ್ ಲೈಸೆನ್ಸ್​​ಗೆ ಆನ್ ಲೈನ್ ಹಾಗೂ ಆ್ಯಪ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ದರು‌. ಆದರೆ ಭ್ರಷ್ಟ ಅಧಿಕಾರಿಗಳು ಕೆಲ ಕುಂಟು ನೆಪವೊಡ್ಡಿ ಅರ್ಜಿ ತಿರಸ್ಕರಿಸಿದ್ದರು. ಅಲ್ಲದೆ, ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವಿಡಿಯೋ, ಆಡಿಯೋ ಸಾಕ್ಷ್ಯ ಸಮೇತ ಪುನೀತ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದು ಅಬಕಾರಿ ಇಲಾಖೆಗೂ ದೊಡ್ಡ ಮುಜಗರ ತಂದಿತ್ತು. ಇಬ್ಬರು ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು‌. ಆನಂತರ ಕೆಲವು ಮಾರ್ಪಾಟುಗಳನ್ನೂ ಇಲಾಖೆ ಮಾಡಿತ್ತು.

ಸಚಿವರಿಗೂ ಎದುರಾಗುತ್ತಾ ಸಮಸ್ಯೆ?

ಲಂಚದ ಆರೋಪ ಸಂಬಂಧ ಎಫ್​ಐಆರ್​ ದಾಖಲಿಸುವ ಮುನ್ನವೇ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದರು. ಯಾಕೆಂದರೆ, ದೂರುದಾರರು ಸಲ್ಲಿಸಿರುವ ಆಡಿಯೋ ಸಂಭಾಷಣೆಯಲ್ಲಿ ಸಚಿವ ಸಲುವರಾಯಸ್ವಾಮಿ ಬಗ್ಗೆಯೂ ಪ್ರಸ್ತಾಪವಾಗಿತ್ತು. ಹೀಗಾಗಿ ದೂರಿನ ಜತೆ ಸಲ್ಲಿಕೆಯಾಗಿರುವ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯದ ಸತ್ಯಾಸತ್ಯತೆ ಅರಿಯಲು ಲೋಕಾಯುಕ್ತ ಮುಂದಾಗಿತ್ತು. ಇದೀಗ ಎಫ್​ಐಆರ್ ದಾಖಲಿಸಿದ್ದರಿಂದ ಸಚಿವರಿಗೂ ಸಮಸ್ಯೆ ಎದುರಾಗಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಲಂಚದ ಆರೋಪ ಕೇಳಿಬಂದ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದ ಜೆಡಿಎಸ್, ಇದರಲ್ಲಿ ಸಚಿವರಿಗೂ ಪಾಲು ಹೋಗುತ್ತದೆ ಎಂದು ಆರೋಪಿಸಿತ್ತು. ಅಲ್ಲದೆ, ಸಚಿವರ ಮುಂದಾಳತ್ವದಲ್ಲೇ ಈ ಕೃತ್ಯಗಳು ನಡೆಯುತ್ತಿವೆ ಎಂದು ಟೀಕಿಸಿತ್ತು.

ಇದನ್ನೂ ಓದಿ: ಮಂಡ್ಯ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಪರವಾನಗಿ ಕೊಡಿಸಲು ಲಂಚಕ್ಕೆ ಬೇಡಿಕೆ ಆರೋಪ

ರಾಜ್ಯ ಅಬಕಾರಿ ಇಲಾಖೆಯಲ್ಲಿ ಮಂಥ್ಲಿ ಮನಿ ಹೆಸರಲ್ಲಿ ವಸೂಲಿ ದಂಧೆ ಎಗ್ಗಿಲ್ಲದೆ ಜೋರಾಗಿ ನಡೆಯುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಮಂಡ್ಯದಲ್ಲಿಯೂ ಬಾರ್ ಲೈಸೆನ್ಸ್​ಗೆ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಇದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ