Night Curfew: ಕರ್ನಾಟಕದ ಯಾವ್ಯಾವ ನಗರಗಳಲ್ಲಿ ಕೊರೊನಾ ಕರ್ಫ್ಯೂ? ಇಲ್ಲಿದೆ ಸಂಪೂರ್ಣ ಮಾಹಿತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 08, 2021 | 9:38 PM

Night Curfew In Karnataka: ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಭೆ ನಡೆದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

Night Curfew: ಕರ್ನಾಟಕದ ಯಾವ್ಯಾವ ನಗರಗಳಲ್ಲಿ ಕೊರೊನಾ ಕರ್ಫ್ಯೂ? ಇಲ್ಲಿದೆ ಸಂಪೂರ್ಣ ಮಾಹಿತಿ
ಬಿ.ಎಸ್.ಯಡಿಯೂರಪ್ಪ
Follow us on

ಬೆಂಗಳೂರು: ರಾಜ್ಯದ ಕೆಲ ನಗರಗಳಲ್ಲಿ ಇದೇ ಶನಿವಾರ (ಏಪ್ರಿಲ್ 10) ರಾತ್ರಿಯಿಂದ ಮುಂದಿನ 10ಗಳ ಅವಧಿಗೆ ಕೊರೊನಾ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಭೆ ನಡೆದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಏಪ್ರಿಲ್ 10ರಿಂದ 20ರವರೆಗೆ ನೈಟ್​ ಕೊರೊನಾ ಕರ್ಫ್ಯೂ ಜಾರಿಯಲ್ಲಿರಲಿದೆ.

ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಕಲಬುರಗಿ, ಬೀದರ್, ತುಮಕೂರು, ಉಡುಪಿ ನಗರ, ಮಣಿಪಾಲ ನಗರಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದೆ.

ಈ ಜಿಲ್ಲೆಗಳ ಜನರಿಗೆ ನಾನು ಮನವಿ ಮಾಡುತ್ತಿದ್ದೇನೆ. ನಾವು ಈಗ ಲಾಕ್​ಡೌನ್ ಮಾಡ್ತಿಲ್ಲ, ಆದರೆ ಪರಿಸ್ಥಿತಿ ಕೈಮೀರಿದರೆ ಅದನ್ನೂ ಮಾಡಬೇಕಾಗುತ್ತದೆ. ಈಗ ಪ್ರಾಯೋಗಿಕವಾಗಿ 10 ಕಡೆ ಕೊರೊನಾ ಕರ್ಫ್ಯೂ ಜಾರಿ ಮಾಡ್ತಿದ್ದೇವೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ನಿರ್ಬಂಧ ಹೆಚ್ಚಿಸಬೇಕಾಗುತ್ತದೆ. ಜನರು ಸಹಕರಿಸಿದರೆ ಬಹುಶಃ ಅಂಥ ಪರಿಸ್ಥಿತಿ ಬರುವುದಿಲ್ಲ ಎಂದು ಆಶಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಕೊಟ್ಟ ಸಲಹೆಯನ್ನು ನಾವು ಅನುಷ್ಠಾನಕ್ಕೆ ತರುತ್ತಿದ್ದೇವೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲೆಂದು ಜಾರಿ ಮಾಡಿರುವ ನಿರ್ಬಂಧಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಹಾಕದವರಿಗೆ ಈಗ ₹ 250 ದಂಡ ವಿಧಿಸುತ್ತಿದ್ದೇವೆ. ಕೊರೊನಾ ನಿಯಂತ್ರಣಕ್ಕೆ ರೂಪಿಸಿರುವ ಕ್ರಮಗಳನ್ನು ಬಿಗಿಯಾಗಿ ಜಾರಿ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.

ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಎಲ್ಲ ಅಗತ್ಯ ಸೇವೆಗಳು ಇರುತ್ತವೆ. ಬಸ್​ಗಳ ಓಡಾಟಕ್ಕೂ ನಿರ್ಬಂಧ ಇರುವುದಿಲ್ಲ. ಆದರೆ ಜನರು ಓಡಾಡಬಾರದು. ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದರ ಬಗ್ಗೆ ಎಚ್ಚರವಹಿಸಬೇಕು. ದೊಡ್ಡ ಪ್ರಮಾಣದಲ್ಲಿ ಸಭೆ-ಸಮಾರಂಭ ಮಾಡಬಾರದು ಎಂದು ಸಲಹೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಮಾತನಾಡುವಾಗ ಕರ್ನಾಟಕದ ಪರಿಸ್ಥಿತಿಯನ್ನು ಸವಿಸ್ತಾರವಾಗಿ ವಿವರಿಸಿದೆ. ಇಲ್ಲಿನ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಟ್ಟೆ. ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಉತ್ತಮ ಸ್ಥಿತಿಯಲ್ಲಿದೆ ಎಂದರು.

ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿ, ಜನರಿಗೆ ಕೊರೊನಾ ಪಿಡುಗು ಇನ್ನೂ ಹೋಗಿಲ್ಲ ಎನ್ನುವುದನ್ನು ನೆನಪಿಸುವ ಉದ್ದೇಶದಿಂದ ಕೊರೊನಾ ಕರ್ಫ್ಯೂ ಜಾರಿ ಮಾಡುತ್ತಿದ್ದೇವೆ. ಕೊರೊನಾ ರಾತ್ರಿಹೊತ್ತು ಮಾತ್ರ ಬರುತ್ತಾ? ಹಗಲು ಬರಲ್ವಾ ಎಂದು ಕೆಲವರು ಕೇಳುತ್ತಿರುತ್ತಾರೆ. ‘ಇದು ಜನರಿಗೆ ಎಚ್ಚರಿಕೆ ನೀಡುವ ಪ್ರಯತ್ನ’ ಎಂದು ಅಂಥವರಿಗೆ ಉತ್ತರಿಸುತ್ತೇನೆ. ರಾತ್ರಿ 10ರ ನಂತರ ಅನಗತ್ಯ ಓಡಾಟ ನಿರ್ಬಂಧಿಸುವುದು ನಮ್ಮ ಉದ್ದೇಶ. ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ. ಅಗತ್ಯ ಸೇವೆಗಳು ಎಂದಿನಂತೆ ಇರುತ್ತವೆ ಎಂದು ಹೇಳಿದರು.

(Night curfew in Bangalore and other major cities of Karnataka announced by CM BS Yediyurappa)

ಇದನ್ನೂ ಓದಿ: PM Narendra Modi Speech: ದೇಶದಲ್ಲಿ ಲಾಕ್​ಡೌನ್​ ಇಲ್ಲ; ಮೋದಿ ಸ್ಪಷ್ಟನೆ

ಇದನ್ನೂ ಓದಿ: ಕರ್ನಾಟಕದಲ್ಲಿ 6570 ಮಂದಿಗೆ ಕೊರೊನಾ ದೃಢ, 36 ಸಾವು

Published On - 9:22 pm, Thu, 8 April 21