ಬೆಂಗಳೂರಿನಲ್ಲಿ 20 ಲಕ್ಷ ಜನರನ್ನು ಸೇರಿಸಿ ಪಂಚಮಸಾಲಿ ಮೀಸಲಾತಿಗೆ ಹಕ್ಕೊತ್ತಾಯ: ಜಯಮೃತ್ಯುಂಜಯ ಸ್ವಾಮೀಜಿ
ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಹಕ್ಕೊತ್ತಾಯ ಮಂಡಿಸುತ್ತೇವೆ. ನಮ್ಮ ಕೂಗು ಪ್ರಧಾನಿ ನರೇಂದ್ರ ಮೋದಿಗೆ ಕೇಳಿಸುವಂತೆ ಮಾಡುತ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ ಹೋರಾಟ ಮತ್ತೆ ಕಾವೇರುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ನಗರದಲ್ಲಿ ಇಂದು (ಏಪ್ರಿಲ್ 8) ಮಾತನಾಡಿದ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ಜಯಮೃತ್ಯುಂಜಯ ಸ್ವಾಮೀಜಿ ‘ಸರ್ಕಾರವು ಸೆ.15ರೊಳಗೆ ಬೇಡಿಕೆ ಈಡೇರಿಸದಿದ್ದರೆ ಅ.15ರಿಂದ ಮತ್ತೆ ಸತ್ಯಾಗ್ರಹ ಆರಂಭಿಸುತ್ತೇವೆ. ಬೆಂಗಳೂರಿನಲ್ಲಿ 20 ಲಕ್ಷ ಜನರನ್ನ ಸೇರಿಸುತ್ತೇವೆ’ ಎಂದು ಘೋಷಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಹಕ್ಕೊತ್ತಾಯ ಮಂಡಿಸುತ್ತೇವೆ. ನಮ್ಮ ಕೂಗು ಪ್ರಧಾನಿ ನರೇಂದ್ರ ಮೋದಿಗೆ ಕೇಳಿಸುವಂತೆ ಮಾಡುತ್ತೇವೆ ಎಂದು ಹೇಳಿದರು. ಪಂಚಮಸಾಲಿ ಸಮಾಜದ ಪರ ಧ್ವನಿ ಎತ್ತುವವರನ್ನು ತುಳಿಯುವ ಕೆಲಸ ಆಗುತ್ತಿದೆ. ಶಾಸಕ ಬಸನಗೌಡ ಯತ್ನಾಳ್ ಸಮುದಾಯದ ಪರವಾಗಿ ಮಾತನಾಡಿದರು. ಅವರನ್ನು ತುಳಿಯಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಯಾರೋ ಕೆಲ ಸಣ್ಣ ರಾಜಕಾರಣಿಗಳು ಯತ್ನಾಳ್ರನ್ನು ನಿರ್ಲಕ್ಷಿಸಬಹುದು. ಆದರೆ ಬಿಜೆಪಿ ವರಿಷ್ಠರು ಯತ್ನಾಳ್ರನ್ನು ಕಡೆಗಣಿಸುವ ಕೆಲಸ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲರನ್ನೂ ಇಂಥದ್ದೇ ಕಾರಣಗಳಿಂದ ತುಳಿಯುವ ಪ್ರಯತ್ನ ಮಾಡಲಾಗಿತ್ತು. ಆದರೆ ಯತ್ನಾಳ್ ಅವರ ವಿಚಾರದಲ್ಲಿ ಹೀಗೆ ಮಾಡಲು ಆಗುವುದಿಲ್ಲ. ಎಷ್ಟೇ ತುಳಿದರೂ ಪುಟಿದೇಳುವ ಶಕ್ತಿ ಯತ್ನಾಳ್ ಅವರಿಗೆ ಇದೆ ಎಂದರು. ಹಿಂದೆ ಹಿಂದುತ್ವದ ಫೈರ್ ಬ್ರಾಂಡ್ ಆಗಿದ್ದ ಯತ್ನಾಳ್ ಈಗ ಲಿಂಗಾಯತ ಸಮುದಾಯದ ದನಿಯಾಗಿದ್ದಾರೆ ಎಂದು ತಿಳಿಸಿದರು.
ಸಮುದಾಯ ಜಾಗೃತಿಗೆ ಹೋರಾಟ: ವಿಜಯಾನಂದ ಕಾಶಪ್ಪನವರ್
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ಬೆಳಗಾವಿಯಲ್ಲಿ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. ನಾವು ಮತ್ತೆ ಸಮುದಾಯದಲ್ಲಿ ಜಾಗೃತಿ ಮಾಡುತ್ತಿದ್ದೇವೆ. ಹರಿಹರಪೀಠದ ವಚನಾನಂದಶ್ರೀ ಸೆಲೆಬ್ರಿಟಿ ಸ್ವಾಮಿಗಳು. ಅವರು ಬಂದಾಗ ಬರಮಾಡಿಕೊಂಡಿದ್ದೇವೆ, ಹೋದಾಗ ಕೈ ಬಿಟ್ಟಿದ್ದೇವೆ ಎಂದು ವಿಷಾದಿಸಿದರು.
ವಚನಾನಂದಶ್ರೀ ಬಗ್ಗೆ ನಾನು ಹೆಚ್ಚು ಹೇಳಲು ಆಗಲ್ಲ. ಗುರುಗಳು ಅಂದ ಮೇಲೆ ಸಮಾಜದ ಜೊತೆ ಇರಬೇಕು. ಯಾವಾಗ ಅವರು ಬರುತ್ತಾರೋ ಬರಲಿ ಸ್ವಾಗತಿಸ್ತೇವೆ. ನಮ್ಮಲ್ಲೇ ಕೆಲವರು ಬೇರ್ಪಡಿಸುವಂತಹವರು ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವರಾದ ಬಳಿಕ ಮುರುಗೇಶ್ ನಿರಾಣಿ ಅವರ ಧೋರಣೆ ಬದಲಾಗಿದೆ. ಅದು ನಮ್ಮ ಪಂಚಮಸಾಲಿ ಸಮಾಜಕ್ಕೂ ಗೊತ್ತಾಗಿದೆ. ಯಾವ ರೀತಿ ಅವರು ಪಾದಯಾತ್ರೆ ನಿಲ್ಲಿಸಲು ನೋಡಿದ್ರು ಎಂಬುದನ್ನು ನಾವು ಮರೆತಿಲ್ಲ. ನಿರಾಣಿ ಈಗಲೂ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಅವರಿಗೆ ಅಧಿಕಾರದ ವ್ಯಾಮೋಹ, ಹುಚ್ಚು ಹಿಡಿದಿದೆ ಎಂದು ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.