Karnataka Bus Strike: ನಾಳೆಯೂ ಮುಂದುವರೆಯಲಿದೆ ಬಸ್ ಮುಷ್ಕರ -ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರ ಮತ್ತು ಅಧಿಕಾರಿಗಳು ಮನೆಯಲ್ಲಿ ಕುಳಿತು ಶೇಕಡಾ 8ರಷ್ಟು ವೇತನ ಹೆಚ್ಚಳದ ಕುರಿತು ಮಾತನಾಡುತ್ತಾರೆ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು ಎಂದರು.
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರಿಯಲಿದೆ. ಸಾರಿಗೆ ನೌಕರರಿಗೆ ಇರುವಷ್ಟು ಕಡಿಮೆ ವೇತನ ಬೇರೆ ಯಾವುದೆ ನಿಗಮಗಳಲ್ಲೂ ಇಲ್ಲ. ನಿವೃತ್ತ ಸಿಬ್ಬಂದಿಯನ್ನು ಸೇವೆಗೆ ಮರಳಿ ಕರೆಯುತ್ತಿದ್ದೀರಿ. ವಯೋಮಾನ ಆಧರಿಸಿ ನೀವೇ ನಿವೃತ್ತಿ ನೀಡಿ ಕಳುಹಿಸಿದ ಸಿಬ್ಬಂದಿಗಳನ್ನು ನೀವೇ ಮರಳಿ ಸೇವೆಗೆ ಕರೆಯುವುದು ಎಷ್ಟು ಸರಿ? ನಿವೃತ್ತಿ ಆದವರು ಹೇಗೆ ಕೆಲಸ ಮಾಡುವುದಕ್ಕೆ ಸಾಧ್ಯ? ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರವನ್ನು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರ ಮತ್ತು ಅಧಿಕಾರಿಗಳು ಮನೆಯಲ್ಲಿ ಕುಳಿತು ಶೇಕಡಾ 8ರಷ್ಟು ವೇತನ ಹೆಚ್ಚಳದ ಕುರಿತು ಮಾತನಾಡುತ್ತಾರೆ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು. ಸಾರಿಗೆ ಸಿಬ್ಬಂದಿಯ ಮನೆಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ಅಂಟಿಸಿದ್ದಾರೆ. ಸರ್ಕಾರಿ ಸೇವೆ ಮಾಡಿದವರ ಬಳಿ ಮನೆ ಖಾಲಿ ಮಾಡುವಂತೆ ಹೇಳುವುದು ಸರಿಯಲ್ಲ. ನೌಕರರಿಗೆ ಅರ್ಧ ಸಂಬಳ ಕೊಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ನಮ್ಮ ಬೇಡಿಕೆ ಒಂದೇ, ಅದು ಆರನೇ ವೇತನ ಜಾರಿ ಮಾಡುವುದು. ಅದನ್ನ ಮಾಡೋದು ಬಿಟ್ಟು ಸರ್ಕಾರ ಮನೆ ಖಾಲಿ ಮಾಡಿಸುವ ಅಸ್ತ್ರ ಉಪಯೋಗಿಸುತ್ತಿದೆ ಎಂದು ಅವರು ಹರಿಹಾಯ್ದರು.
ಮುಷ್ಕರ ನಿರತ ಸಿಬ್ಬಂದಿಗೆ ಬಿಸಿ ಮುಷ್ಕರ ನಿರತ ನೌಕರರಿಗೆ ಬಿಸಿ ಮುಟ್ಟಿಸಲು ಸಜ್ಜಾದ ಅಧಿಕಾರಿಗಳು ಸಿಬ್ಬಂದಿ ವರ್ಗಕ್ಕೆ ನೀಡಲಾದ ವಸತಿ ಗೃಹಗಳನ್ನು ಖಾಲಿ ಮಾಡಿಸಲು ಮುಂದಾಗಿರುವ ಘಟನೆ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಕೆಲವೆಡೆ ನಡೆದಿದೆ.
ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ಹೂಡಿರುವುದಕ್ಕೆ ಸಿಟ್ಟಾಗಿರುವ ಅಧಿಕಾರಿಗಳು, ಪ್ರತಿಭಟನೆಯನ್ನು ಮಣಿಸುವ ಸಲುವಾಗಿ ಚಾಲಕ ಮತ್ತು ನಿರ್ವಾಹಕರ ಮನೆಯ ಮೇಲೆ ಕಣ್ಣಿಟ್ಟಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ನೋಟಿಸ್ ನೀಡುತ್ತಿರುವ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು, ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಮನೆಯ ಬಾಗಿಲಿಗೆ ತಿಳಿವಳಿಕೆ ಪತ್ರವನ್ನು ಅಂಟಿಸಲಾಗುತ್ತಿದ್ದು, ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕೆಎಸ್ಆರ್ಟಿಸಿ ವಸತಿ ಗೃಹಗಳಿಗೆ ನೋಟಿಸ್ ನೀಡಲಾಗಿದೆ.
ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ತಿಳಿವಳಿಕೆ ಪತ್ರ ಅಂಟಿಸುತ್ತಿರುವ ಸಿಬ್ಬಂದಿ, ಚಾಲಕ ಮತ್ತು ನಿರ್ವಾಹಕರಿಗೆ ಪತ್ರದ ಮೂಲಕವೇ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಕೆಲಸಕ್ಕೆ ಹಾಜರಾಗದಿದ್ದರೆ ವಸತಿ ಗೃಹ ಹಂಚಿಕೆ ರದ್ದುಗೊಳಿಸಲಾಗುತ್ತೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಆ ಮೂಲಕ ಕರ್ತವ್ಯಕ್ಕೆ ಹಾಜರಾಗದವರನ್ನು ದಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಅಧಿಕಾರಿಗಳ ಈ ಕ್ರಮಕ್ಕೆ ಸೆಡ್ಡು ಹೊಡೆದಿರುವ ನೌಕರರ ಕುಟುಂಬ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ವಿರೋಧ ಪಕ್ಷದಲ್ಲಿದ್ದಾಗ ಯಡಿಯೂರಪ್ಪ ಏನು ಹೇಳಿದ್ದರು ನೆನಪು ಮಾಡ್ಕೊಳಿ: ಸಂಸದ ಪ್ರತಾಪ್ಗೆ ಸಾರಿಗೆ ನೌಕರರಿಂದ ಟಕ್ಕರ್
ಸಾರಿಗೆ ಮುಷ್ಕರ ಮುಂದುವರೆದರೆ ಜನರೇ ಬಸ್ ಖಾಸಗೀಕರಣದ ಧ್ವನಿ ಎತ್ತುತ್ತಾರೆ -ಸಂಸದ ಪ್ರತಾಪ್ ಸಿಂಹ ಗುಡುಗು
( Will continue Bus strike to 3rd day says Kodihalli Chandrashekar in Press Meet in Bengaluru)
Published On - 5:49 pm, Thu, 8 April 21