Nandini Curd Price: ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರ ಪರಿಷ್ಕರಣೆ ಇಲ್ಲ: ಕೆಎಂಎಫ್​ ಸ್ಪಷ್ಟನೆ

KMF Clarification on Nandini curd price hike; ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿದಂತೆಯೇ ಮುಂದಿನ ದಿನಗಳಲ್ಲಿ ನಂದಿನಿ ಮೊಸರು, ಮಜ್ಜಿಗೆ ಹಾಗೂ ಲಸ್ಸಿಯ ಬೆಲೆಯನ್ನೂ ಏರಿಕೆ ಮಾಡಲಾಗುತ್ತದೆ ಎಂಬ ವರದಿಗಳ ಬಗ್ಗೆ ಕೆಎಂಎಫ್ ಸ್ಪಷ್ಟನೆ ನೀಡಿದೆ. ಈ ಬಗ್ಗೆ ‘ಟಿವಿ9 ಕನ್ನಡ ಡಿಜಿಟಲ್’ ಜತೆ ಮಾತನಾಡಿದ ಕೆಎಂಎಫ್ ಮಾರುಕಟ್ಟೆ ಅಧಿಕಾರಿ ರಘುನಂದನ್ ನೀಡಿದ ಮಾಹಿತಿ ಇಲ್ಲಿದೆ.

Nandini Curd Price: ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರ ಪರಿಷ್ಕರಣೆ ಇಲ್ಲ: ಕೆಎಂಎಫ್​ ಸ್ಪಷ್ಟನೆ
ಮೊಸರು, ಮಜ್ಜಿಗೆ, ಲಸ್ಸಿ ದರ ಪರಿಷ್ಕರಣೆ ಇಲ್ಲ: ಕೆಎಂಎಫ್​ ಸ್ಪಷ್ಟನೆ

Updated on: Jul 16, 2024 | 12:11 PM

ಬೆಂಗಳೂರು, ಜುಲೈ 16: ನಂದಿನಿ ಹಾಲಿನ ಪ್ಯಾಕೆಟ್​​ಗಳಲ್ಲಿ ಪ್ರಮಾಣ ತುಸು ಹೆಚ್ಚಿಸಿ ದರ ಪರಿಷ್ಕರಣೆ ಮಾಡಿದ್ದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಇದೀಗ ನಂದಿನಿ ಮೊಸರು, ಮಜ್ಜಿಗೆ ಹಾಗೂ ಲಸ್ಸಿಯ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಕೆಲವೆಡೆ ವರದಿಯಾಗಿದೆ. ಆದರೆ ಇದು ಸುಳ್ಳು ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ. ದರ ಪರಿಷ್ಕರಣೆ ಪ್ರಸ್ತಾವ ಇಲ್ಲ. ಅಂಥ ವದಂತಿಗಳನ್ನು ನಂಬಬಾರದು ಎಂದು ಸಾರ್ವಜನಿಕರಲ್ಲಿ ಕೆಎಂಎಫ್ ವಿನಂತಿ ಮಾಡಿದೆ.

ದರ ಪರಿಷ್ಕರಣೆ ಸಂಬಧಿತ ವದಂತಿಗಳ ಬಗ್ಗೆ ಕೆಎಂಎಫ್ ಮಾರುಕಟ್ಟೆ ಅಧಿಕಾರಿ ರಘುನಂದನ್ ‘ಟಿವಿ9 ಕನ್ನಡ ಡಿಜಿಟಲ್​​’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೊಸರು, ಮಜ್ಜಿಗೆ ಅಥವಾ ಲಸ್ಸಿಯ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವ ಇಲ್ಲ. ವಿನಾ ಕಾರಣ ಸಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಡಲಾಗುತ್ತಿದೆ. ಅಂಥ ವದಂತಿಗಳು, ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.

ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಹಾಲಿನ ಬೆಲೆ ಏರಿಕೆ ನಿರ್ಧಾರ

ಕೆಲವೇ ದಿನಗಳ ಹಿಂದಷ್ಟೇ ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್​​​ಗೆ 50 ಎಂಎಲ್ ಹೆಚ್ಚುವರಿಯಾಗಿ ಸೇರಿಸಿ ಎರಡು ರೂಪಾಯಿ ಏರಿಕೆ ಮಾಡಿತ್ತು ಕೆಎಂಎಫ್. ಪರಿಷ್ಕೃತ ದರ ಜೂನ್ 26 ರಿಂದ ಜಾರಿಗೆ ಬಂದಿತ್ತು. ನಂದಿನಿ ಹಾಲಿನ ದರ ಏರಿಕೆ ವಿಚಾರ ರಾಜ್ಯದಲ್ಲಿ ತೀವ್ರ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು.

ಬೆಲೆ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಆ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ‘ಹಾಲಿನ ಬೆಲೆ ಏರಿಕೆ ಮಾಡಿಲ್ಲ. ಹೆಚ್ಚುರಿ ಹಾಲು ನೀಡಿ ಅದಕ್ಕೆ ದರ ಪಡೆಯಲಾಗುತ್ತಿದೆ. ರೈತರಿಂದ ಖರೀದಿಸಿದ ಹೆಚ್ಚಿನ ಹಾಲಿನ ಮಾರಾಟಕ್ಕಾಗಿ ಈ ರೀತಿ ಮಾಡಲಾಗುತ್ತದೆ’ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಕಡಿಮೆ: ಕೆಎಂಎಫ್​ ಎಂಡಿ ಸ್ಪಷ್ಟನೆ

ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿರುವ ಕೆಎಂಎಫ್​​ ಸದ್ಯದಲ್ಲೇ ನಂದಿನಿ ಮೊಸರು, ಮಜ್ಜಿಗೆ ಹಾಗೂ ಲಸ್ಸಿಯ ದರ ಪರಿಷ್ಕರಣೆ ಮಾಡಲು ಚಿಂತನೆ ನಡೆಸಿದೆ. ವಿಧಾನಮಂಡಲದ ಮುಂಗಾರು ಅಧಿವೇಶನ ಮುಕ್ತಾಯವಾದ ಬೆನ್ನಲ್ಲೇ ದರ ಏರಿಕೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳೂ ವರದಿ ಮಾಡಿವೆ. ಇದರ ಬೆನ್ನಲ್ಲೇ ಕೆಎಂಎಫ್ ಸ್ಪಷ್ಟನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Tue, 16 July 24