ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಕಾಡುಗೋಡಿ, ಕನ್ನಮಂಗಲದಲ್ಲಿ ಕೆಲವು ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಪೊಲೀಸರ ನಡುವೆ ಸಾಮಾಜಿಕ ಅಂತರ ಮಾಯವಾಗಿತ್ತು. ಸಿಎಂ ಕಾರಿನ ಹಿಂದೆ 17 ವಾಹನಗಳು ಹಿಂಬಾಲಿಸಿದವು.
ಸಿಎಂ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನ ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಕಾಡುಗೋಡಿಯಲ್ಲಿ ಟ್ರೀ ಪಾರ್ಕ್ ಉದ್ಘಾಟಿಸಿದರು. ಬೆಂಗಳೂರು ಮಿಷನ್-2022 ಬೆಂಗಳೂರಿಗೆ ನವ ಚೈತನ್ಯ ಕಾರ್ಯಕ್ರಮದಡಿ ಅರಣ್ಯ ಇಲಾಖೆಯ ವತಿಯಿಂದ ಸುಮಾರು 22 ಎಕರೆ ವಿಸ್ತೀರ್ಣದಲ್ಲಿ ಈ ಟ್ರೀ ಪಾರ್ಕ್ ನಿರ್ಮಿಸಲಾಗಿದೆ. ಪಾರ್ಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ತೋಟಗಾರಿಕೆ ಸಚಿವ ಆರ್.ಶಂಕರ್ ಉಪಸ್ಥಿತರಿದ್ದರು.
ಇನ್ನು ಮತ್ತೊಂದು ಕಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನ್ನಮಂಗಲದಲ್ಲಿ ಅಟಲ್ ಬಿಹಾರಿ ಸಸ್ಯ ಶಾಸ್ತ್ರೀಯ ತೋಟ ಉದ್ಘಾಟನೆ ಮಾಡಿದ್ರು. ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ವೈ ಮತ್ತು ಸಚಿವರು ರುದ್ರಾಕ್ಷಿ ಸಸಿ ನೆಟ್ರು.
ತೋಟಗಾರಿಕೆ ಇಲಾಖೆಯಿಂದ ನಿರ್ಮಿಸಲಾದ ಈ ಸಸ್ಯ ತೋಟ ಸುಮಾರು 70 ಎಕರೆ ವಿಸ್ತೀರ್ಣದಲ್ಲಿದೆ. 5.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಸಸ್ಯ ತೋಟದಲ್ಲಿ 3905 ವಿವಿಧ ಜಾತಿಯ ಮರಗಳಿವೆ. ಹಾಗೂ 2800 ಮೀಟರ್ ನಷ್ಟು ವಾಯುವಿಹಾರದ ಪಥ ನಿರ್ಮಾಣ ಮಾಡಲಾಗಿದೆ. ಜೊತೆಗೆ ಕನ್ನಮಂಗಲ ಬಳಿಕ ಬಿದರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಇರುವ ಕನ್ನಮಂಗಲ ಮುಳ್ಳು ಕೆರೆಯನ್ನೂ ಕೂಡ ಉದ್ಘಾಟನೆ ಮಾಡಲಾಗಿದೆ.
ಇದನ್ನೂ ಓದಿ: ಕೊವಿಡ್ ನಿಯಮ ಉಲ್ಲಂಘನೆ: ಮುಂದಿನ ಸೋಮವಾರದವರೆಗೆ ಪೂರ್ವ ದೆಹಲಿಯ ಮಾರುಕಟ್ಟೆ ಬಂದ್