ಬೆಂಗಳೂರು: ‘ಕೇಂದ್ರ ಸರ್ಕಾರದಿಂದ 2000 ಮುಖಬೆಲೆಯ ನೋಟ್ ಬ್ಯಾನ್ ಆಗಲಿದೆ ಹುಷಾರ್!’- ಹೀಗೊಂದು ಎಚ್ಚರಿಕೆ ನೀಡುತ್ತಾ ಯಾರೂ ಊಹಿಸಿಕೊಳ್ಳದ ದಂದೆ ನಡೆಸುತ್ತಿದ್ದ ಜಾಲವೊಂದು ಬೆಂಗಳೂರಲ್ಲಿ ಸಿಕ್ಕಿಬಿದ್ದಿದೆ. ಅಷ್ಟಕ್ಕೂ ಏನಿದು ಜಾಲ? ಇದರ ಹಿಂದೆ ಯಾರಿದ್ದರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
2000 ರೂಪಾಯಿ ನೋಟಿಗೆ 500 ರೂಪಾಯಿ ನೀಡುವುದು ಈ ದಂಧೆ ಮಾಡುವವರ ಕೆಲಸ. ಒಂದೇ ದಿನದಲ್ಲಿ 2000 ಮುಖ ಬೆಲೆಯ ಸುಮಾರು ಮೂರು ಕೋಟಿ ಹಣವನ್ನು 500 ರೂಪಾಯಿಗೆ ಎಕ್ಸ್ಚೆಂಜ್ ಮಾಡುತ್ತಿದ್ದರು. ಇಷ್ಟೇ ಅಲ್ಲ ಇದಕ್ಕಾಗಿ ದಂಧೆಕೋರರು ಬರೋಬ್ಬರಿ 80 ಲಕ್ಷ ಕಮಿಷನ್ ಪಡೆಯುತ್ತಿದ್ದರಂತೆ! ನೋಟ್ ಬ್ಯಾನ್ ಆಗುತ್ತದೆ ಎಂದು ಬೆದರಿಸಿ ಇವರು ಹಣ ಮಾಡುತ್ತಿದ್ದರು.
ಈ ದಂಧೆ ಕುರಿಂತೆ ಪಬ್ ಮ್ಯಾನೇಜರ್ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮ್ಯಾನೇಜರ್ ಮಾಹಿತಿ ಆಧರಿಸಿ ಮಫ್ತಿಯಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಮಾಹಿತಿ ನೀಡಿದ ಪಬ್ ಮ್ಯಾನೇಜರ್ ಅವರನ್ನು ಪೊಲೀಸರು ಹಿಂಬಾಲಿಸಿದ್ದರು.
ಮೊದಲಿಗೆ ಮಾರತ್ ಹಳ್ಳಿ ಕಾಫಿಡೇನಲ್ಲಿ ಇಬ್ಬರು ಮಧ್ಯವರ್ತಿಗಳು ಪಬ್ ಮ್ಯಾನೇಜರ್ಗೆ ಸಿಕ್ಕಿದ್ದರು. ಪಬ್ ಮ್ಯಾನೇಜರ್ ಹಿಂಬದಿಯಿಂದ ಪೊಲೀಸರು ಫಾಲೋ ಮಾಡಿದ್ದರು. ಮಧ್ಯವರ್ತಿಗಳು ಪಬ್ ಮ್ಯಾನೇಜರ್ನನ್ನು ಓಲ್ಡ್ ಏರ್ಪೋಟ್, ಕೆಆರ್ ಪುರಂ ಮೂಲಕ ಎರ್ಪೋರ್ಟ್ ಕಡೆಗೆ ಕರೆದೊಯ್ದಿದ್ದರು. ಮಾರ್ಗದಲ್ಲಿ ಸಿಕ್ಕ ಮತ್ತೋರ್ವ ಮಧ್ಯವರ್ತಿ ಜೊತೆ ಇವರು ಚರ್ಚೆ ಮಾಡಿದ್ದರು. ಚರ್ಚೆ ವೇಳೆ ದಾಳಿ ಮಾಡಿ ಲೋಹಿತ್, ರವಿಕುಮಾರ್ ಹಾಗೂ ಸುದರ್ಶನ್ ಎಂಬ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ದಂಧೆಯ ಕಿಂಗ್ ಪಿನ್ ಹಿಡಿಯಲು ಪೊಲೀಸರು ಇವರನ್ನೇ ಬಳಕೆ ಮಾಡಿಕೊಂಡಿದ್ದರು.
ಮೂವರು ಮಧ್ಯವರ್ತಿಗಳನ್ನು ಕರೆದುಕೊಂಡು ಬೆಂಗಳೂರಿನ ಚಿಕ್ಕಪೇಟೆಯ ಏರಿಯಾಗೆ ಮಾರತ್ಹಳ್ಳಿ ಪೊಲೀಸರು ಬಂದಿದ್ದರು. ಈ ವೇಳೆ 10ರೂನ ಹರಿದ ನೋಟ್ಅನ್ನು ವ್ಯಕ್ತಿಯೋರ್ವ ಇವರಿಗೆ ಕೊಟ್ಟಿದ್ದ. ಬಳಿಕ ಆಟೋ ಶಿವು ಎಂಬಾತನ ಬಳಿ ಮಫ್ತಿಯಲ್ಲಿದ್ದ ಪೊಲೀಸರನ್ನು ಕರೆದೊಯ್ಯಲಾಯಿತು. ಅಲ್ಲಿಂದ ಹರಿದ 10ರೂ. ನೋಟ್ ಹಿಡಿದು ಹೊರಟ ಪೊಲೀಸರನ್ನು ಮಧ್ಯವರ್ತಿಗಳು ಚಿಕ್ಕಪೇಟೆ ಸುತ್ತಿಸಿದ್ದರು. ಮೂರು ಕಾರುಗಳನ್ನು ಕೂಡ ಬದಲಾಯಿಸಿದ್ದರು. ಅಂತಿಮವಾಗಿ ಚಿಕ್ಕಪೇಟೆಯ ಒಂದು ಮನೆಗೆ ಮಧ್ಯವರ್ತಿಗಳು ಇವರನ್ನು ಕರೆದೊಯ್ದಿದ್ದರು.
ಈವೇಳೆ ಅಕ್ಷಯ್, ಕಮಲೇಶ್, ಅರವಿಂದ್ ಎಂಬ ವ್ಯಕ್ತಿಗಳನ್ನು ಪೊಲೀಸರು ಭೇಟಿ ಮಾಡಿದ್ದರು. ಹಣ ಕೊಟ್ಟು ಎಕ್ಸ್ ಚೇಂಜ್ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಇವರು ಪೊಲೀಸರೆಂದು ಅನುಮಾನಗೊಂಡು ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿತ್ತು. ಕೂಡಲೇ ಕಾರ್ಯಪ್ರವೃತ್ತರಾಗಿ ನಾಲ್ಕು ಜನರನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಮಧ್ಯವರ್ತಿಗಳಾದ ರವಿಕುಮಾರ್, ಆಟೋಶಿವ, ಸುದರ್ಶನ್ ಹಾಗೂ ಅರವಿಂದ್ನನ್ನು ಬಂಧನ ಮಾಡಲಾಗಿದೆ. ಈ ವೇಳೆ ಅಕ್ಷಯ್, ಕಮಲೇಶ್ ಹಾಗೂ ಲೊಹಿತ್ ಎಸ್ಕೇಪ್ ಆಗಿದ್ದಾರೆ.
ಇವರ ಮೊಬೈಲ್ನಲ್ಲಿ ಕಂತೆ ಕಂತೆ ನೋಟುಗಳ ವಿಡಿಯೋ ಪತ್ತೆ ಆಗಿದೆ. ಪ್ರತಿ ವಿಡಿಯೋದಲ್ಲೂ 2000 ಸಾವಿರ ಮುಖಬೆಲೆಯ ಕೋಟಿ ಕೋಟಿ ಹಣ ಇತ್ತು. ವಿಡಿಯೋ ಜೊತೆಗೆ ಕೋಡ್ ಕೂಡ ಕಳುಹಿಸಲಾಗುತ್ತಿತ್ತು. ಕೊಡ್ ಸಮೇತ ವಿಡಿಯೋ ಬಂದ ಬಳಿಕ ವ್ಯವಹಾರ ಮಾಡುತ್ತಿದ್ದರು ಎನ್ನುವ ವಿಚಾರ ಸದ್ಯ ಬಯಲಾಗಿದೆ.
Published On - 7:52 am, Sat, 2 January 21