ಕಲಬುರಗಿ: ಸಾಮಾನ್ಯವಾಗಿ ರಾಜ್ಯದ ಪ್ರತಿಯೊಂದು ಬಸ್ ನಿಲ್ದಾಣದಲ್ಲಿ ಮಹಿಳಾ ಶೌಚಾಲಯಗಳಿವೆ. ಆದರೆ ಕೆಲವೆಡೆ ಶೌಚಾಲಯ ಇದ್ದರು ಕೂಡಾ ಇಲ್ಲದಂತಿವೆ. ಸ್ವಚ್ಚತೆ ಕೊರತೆ, ಸೌಲಭ್ಯಗಳ ಕೊರತೆಯಿಂದ ಮಹಿಳಾ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿರುವ ಮಹಿಳಾ ಶೌಚಾಲಯ, ಸ್ನಾನಗೃಹಗಳನ್ನು ಬಳಸುವುದಿಲ್ಲ. ಜತೆಗೆ ಪುಟ್ಟ ಮಕ್ಕಳಿಗೆ ಹಾಲುಣಿಸಲು ಬೇಕಾದ ವ್ಯವಸ್ಥೆ ಕೂಡಾ ಸರಿಯಾಗಿ ಇರುವುದಿಲ್ಲ. ಹೀಗಾಗಿ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ, ಮಹಿಳೆಯರಿಗೆ ಬಸ್ನಲ್ಲಿಯೇ ಶೌಚಾಲಯ, ಸ್ನಾನಗೃಹ, ಹಾಲುಣಿಸಲು ಸೌಲಭ್ಯ, ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ ಮಾಡಿದ್ದಾರೆ.
ಮಹಿಳಾ ಬಸ್ ಆಗಿ ಪರಿವರ್ತನೆಯಾದ ಹಳೆಯ ಬಸ್
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ, ಯಾದಗಿರಿ ವರ್ಕ್ಶಾಪ್ನಲ್ಲಿ ಮಹಿಳೆಯರಿಗಾಗಿಯೇ ವಿನೂತನ ಬಸ್ ನ್ನು ಸಿದ್ಧಗೊಳಿಸಲಾಗಿದೆ. ಹಾಗಂತ ಹೊಸ ಬಸ್ ಅನ್ನು ಅದಕ್ಕಾಗಿ ಖರೀದಿ ಮಾಡಿಲ್ಲ. ಬದಲಾಗಿ ಸಂಸ್ಥೆಯಲ್ಲಿ ನಿರುಪಯುಕ್ತವಾಗಿದ್ದ ಬಸ್ ಅನ್ನು ಮಹಿಳಾ ಶೌಚಾಲಯದ ಬಸ್ ಆಗಿ ಪರಿವರ್ತನೆ ಮಾಡಿದ್ದಾರೆ. ಸಾವಿರಾರು ಕಿಲೋ ಮೀಟರ್ ಓಡಿದ ನಂತರ, ಕೆಲ ಬಸ್ಗಳನ್ನು ಓಡಿಸಲು ಆಗುವುದಿಲ್ಲಾ. ಅಂತಹ ಬಸ್ವೊಂದನ್ನು ಪಡೆದು, ಅದನ್ನು ಬದಲಾಯಿಸಿ ಮಹಿಳಾ ಬಸ್ ಅನ್ನು ಸಿದ್ಧಗೊಳಿಸಿದ್ದಾರೆ. ಬಸ್ನಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸರಿಸುಮಾರು ಎರಡು ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಸಂಸ್ಥೆಯ ವರ್ಕ್ಶಾಪ್ ಸಿಬ್ಬಂದಿ ನಿರಂತರ ಶ್ರಮ ವಹಿಸಿ, ನಿರುಪಯುಕ್ತ ಬಸ್ ಅನ್ನು ಉಪಯುಕ್ತವನ್ನಾಗಿ ಮಾಡಿದ್ದಾರೆ.
ಈ ಬಸ್ನ ವಿಶೇಷತೆ ಏನು?
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಈ ಬಸ್ ಮಹಿಳಾ ಪ್ರಯಾಣಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿಫೈ ಮಾಡಲಾಗಿದೆ. ಅಂದರೆ ಬಸ್ ನಿಲ್ದಾಣದಲ್ಲಿ ಈಗಿರುವ ಶೌಚಗೃಹಗಳನ್ನು ಬಳಕೆ ಮಾಡಲು ಅನೇಕರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಛ ಮತ್ತು ಸುಂದರವಾದ ಮಹಿಳಾ ಶೌಚಾಲಾಯ, ಸ್ನಾನಗೃಹ, ಹಾಲುಣಿಸುವ ಕೋಣೆಯನ್ನು ಬಸ್ನಲ್ಲಿ ಸಿದ್ಧಮಾಡಲಾಗಿದೆ. ಒಂದು ಬಸ್ನಲ್ಲಿ ಎರಡು ದೇಶಿಯ ಶೌಚಾಲಯ, ಒಂದು ವಿದೇಶಿ ಶೌಚಾಲಯ, ಕೈ ತೊಳೆಯುವ ಕೋಣೆ, ಸ್ನಾನಗೃಹ ಕೋಣೆ, ಜತೆಗೆ ಪುಟ್ಟ ಮಕ್ಕಳಿಗೆ ಹಾಲುಣಿಸಲು ಕೋಣೆಯೊಂದನ್ನು ಮಾಡಲಾಗಿದೆ. ವಿಶೇಷವೆಂದರೆ ಸ್ನಾನಗೃಹದಲ್ಲಿ ಗೀಜರ್ ಕೂಡಿಸಿದ್ದು, ಬಿಸಿನೀರು ಕೂಡಾ ಬರಲಿದೆ. ಅಂದರೆ ಮಹಿಳಾ ಪ್ರಯಾಣಿಕರು ಶೌಚ, ಸ್ನಾನ ಮಾಡಿ, ಬಟ್ಟೆ ಬದಲಾಯಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಜತೆಗೆ ಸ್ಯಾನಿಟರಿ ನ್ಯಾಪಕಿನ್ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ. ಬಸ್ನ ಮೇಲೆ ಸೋಲಾರ್ ವ್ಯವಸ್ಥೆ ಇದ್ದು, ವಿದ್ಯುತ್ ಪೂರಕೆಯಾಗುತ್ತದೆ. ಹೀಗಾಗಿ ಪ್ರತಿಯೊಂದು ಕೋಣೆಗೂ ಫ್ಯಾನ್ ಕೂಡಾ ಹಾಕಲಾಗಿದೆ. ಬಸ್ನ ಮೇಲ್ಭಾಗದಲ್ಲಿ ನೀರಿನ ಟ್ಯಾಂಕ್ ಕೂರಿಸಿದ್ದು, ಅಲ್ಲಿಂದ ಶೌಚಗೃಹಕ್ಕೆ, ಸ್ನಾನ ಗೃಹಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಬಸ್ ನಿಲ್ದಾಣಕ್ಕೆ ಮಾತ್ರ ಈ ಬಸ್ ಸೀಮಿತ
ಮಹಿಳಾ ಶೌಚಾಲಯ, ಸ್ನಾನಗೃಹ ಇರುವ ಈ ಬಸ್ ಬೇರಡೆ ಹೋಗುವುದಿಲ್ಲಾ. ಬದಲಾಗಿ ಬಸ್ ನಿಲ್ದಾಣದಲ್ಲಿಯೇ ನಿಲ್ಲಲಿದೆ. ಹೆಚ್ಚಿನ ಜನದಟ್ಟಣೆ ಇರುವ ಕಲಬುರಗಿಯಲ್ಲಿ ಇಂದಿನಿಂದ (ಜುಲೈ 7) ಈ ಬಸ್ ಬಳಕೆಗೆ ಮುಕ್ತವಾಗಲಿದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಬಸ್ಗೆ ಇಂದು ಚಾಲನೆ ನೀಡಲಿದ್ದಾರೆ. ಈ ಸೌಲಭ್ಯಗಳನ್ನು ಪಡೆಯಬೇಕಾದರೆ ಐದರಿಂದ ಹತ್ತು ರೂಪಾಯಿ ಹಣ ನಿಗದಿ ಮಾಡಲು ಸಂಸ್ಥೆಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಏಕೆಂದರೆ ಬಸ್ಗೆ ಒಬ್ಬರು ಮಹಿಳಾ ಸಿಬ್ಬಂಧಿಯನ್ನು ನಿಯೋಜಿಸಬೇಕು. ಸ್ವಚ್ಚತೆ ಕಾಪಾಡಿಕೊಳ್ಳಬೇಕಾದರೆ ಕೆಲಸಗಾರರ ಅವಶ್ಯಕತೆ ಇದೆ. ಹೀಗಾಗಿ ಪ್ರತಿ ಪ್ರಯಾಣಿಕರಿಗೆ ಐದು ರೂಪಾಯಿ ಪಡೆದು ಈ ಸೌಲಭ್ಯವನ್ನು ಬಳಸಿಕೊಳ್ಳಲು ಮಹಿಳಾ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಸಂಸ್ಥೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಮಹಿಳಾ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಗುಜರಿ ಬಸ್ ಅನ್ನು ಮಾಡಿಫೈ ಮಾಡಿ ಮಹಿಳಾ ಶೌಚಾಲಯವನ್ನಾಗಿ ಬದಲಾವಣೆ ಮಾಡಲಾಗಿದೆ. ಉತ್ತಮ ಪ್ರತಿಕ್ರಿಯೆ ಬಂದರೆ ಸಂಸ್ಥೆಯ ಎಲ್ಲಾ ಬಸ್ ನಿಲ್ದಾಣದಲ್ಲಿ ಇಂತಹ ಒಂದೊಂದು ಬಸ್ಗಳನ್ನು ನಿಲ್ಲಿಸಲಾಗುವುದು. ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಅದರಲ್ಲಿ ಇದು ಕೂಡಾ ಒಂದು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ್ಯ ರಾಜಕುಮಾರ್ ಪಾಟೀಲ್ ತೇಲ್ಕೂರ್ ತಿಳಿಸಿದರು.
ಪ್ರಯಾಣಿಕರ ಸುರಕ್ಷತೆಗಾಗಿ ಸಾರಿಗೆ ಬಸ್ಗಳಿಗೆ ಎಐ ಟೆಕ್ನಾಲಜಿ ಅಳವಡಿಕೆ: ಡಿಸಿಎಂ ಸವದಿ