ಮೊದಲ ಪ್ರೇಮಿಯ ಜೊತೆ ಸೇರಿ ತನ್ನದೇ ಮನೆಯ ತಿಜೋರಿ ಚೋರಿ ಮಾಡಿದ ವಿವಾಹಿತೆ! ಕಡೂರಿನಲ್ಲಿ ದೃಶ್ಯಂ ಸೀಕ್ವೆಲ್
ತಾನು ಅಮಾಯಕಿಯಂತೆ ಎಲ್ಲರ ಎದುರು ತೋರಿಸಿಕೊಂಡಿದ್ದಳು.. ಅಷ್ಟಕ್ಕೂ ಮನೆಯವರೇ ಯಾಕೆ ಕದಿಯುತ್ತಾರೆ ಅನ್ನೋ ಸನ್ನಿವೇಶ ಮೂಡೋ ಹಾಗೆ ನಾಟಕ ಮಾಡುತ್ತಿದ್ದಳು.
ಚಿಕ್ಕಮಗಳೂರು: ಮನೆಗೆ ಯಾರೋ ಅನಾಮಿಕರು, ಮೂರನೇ ವ್ಯಕ್ತಿಗಳು ಅಥವಾ ಕಳ್ಳತನವನ್ನೇ ಚಾಳಿ ಮಾಡಿಕೊಳ್ಳುವ ವ್ಯಕ್ತಿಗಳು ಕನ್ನ ಹಾಕೋದನ್ನ ಕೇಳಿದ್ದೀರಿ. ಆದ್ರೆ ಮನೆಯವರೇ ತನ್ನ ಮನೆಗೆ ಕನ್ನ ಹಾಕೋದನ್ನ ಕೇಳಿರುವುದು ತುಂಬಾ ಅಪರೂಪ ಅನ್ಸುತ್ತೆ. ಆದರೆ ಅಂತದೊಂದು ವಿಚಿತ್ರ, ವಿಭಿನ್ನ ಪ್ರಕರಣಕ್ಕೆ ಕಾಫಿನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ. ತನ್ನ ಮನೆಗೆ ಕನ್ನ ಹಾಕಿ ಪ್ರಿಯಕರನ ಜೊತೆ ಹೋಗಿದ್ದ ಚಾಲಾಕಿ ಚೋರಿ ಕೊನೆಗೂ ಅಂದರ್ ಆಗಿದ್ದಾಳೆ. ತನ್ನ ಮನೆಗೆ ಯಾರೋ ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದಾರೆ ಅನ್ನೋ ಕಥೆ ಕಟ್ಟಿದ್ದ ಖತರ್ನಾಕ್ ಮಹಿಳೆ ಕೊನೆಗೂ ಪ್ರಿಯಕರನ ಜೊತೆ ಜೈಲುಪಾಲಾಗಿದ್ದಾಳೆ.
ಕಳ್ಳತನ ನಡೆದಿದ್ದು ಯಾವಾಗ, ಎಲ್ಲಿ.? ಅಷ್ಟಕ್ಕೂ ಇಂತದೊಂದು ಕಳ್ಳತನ ಪ್ರಕರಣ ನಡೆದಿದ್ದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೊಡ್ಡಬೋಕಿಕೆರೆ ಗ್ರಾಮದಲ್ಲಿ. ಕಳೆದ ಜೂನ್ 25ರಂದು ರಾಜೇಶ್, ತನ್ನ ಪತ್ನಿ ಶಕುಂತಲಮಣಿ ಹಾಗೂ ತಾಯಿ ಶಾರದಮ್ಮರನ್ನ ಕರೆದುಕೊಂಡು ಮನೆಗೆ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋಗಿರುತ್ತಾರೆ. ಮಧ್ಯೆದಲ್ಲಿ ಮನೆಗೆ ಬರುವ ರಾಜೇಶ್ ಪತ್ನಿ ಶಕುಂತಲಮಣಿ, ಮನೆಗೆ ಯಾರೋ ಕನ್ನ ಹಾಕಿದ್ದಾರೆ ಅನ್ನೋ ವಿಚಾರವನ್ನ ತನ್ನ ಗಂಡ ಹಾಗೂ ಅತ್ತೆಗೆ ತಿಳಿಸುತ್ತಾಳೆ. ಮನೆಯ ಬೀರುವಿನಲ್ಲಿದ್ದ 20 ಗ್ರಾಂ ಚಿನ್ನದ ಬ್ರೇಸ್ ಲೇಟ್, 23 ಗ್ರಾಂ ತೂಕದ ಚಿನ್ನದ ಸರ, 6 ಗ್ರಾಂ ತೂಕದ ಚಿನ್ನದ ಓಲೆ, 25 ಗ್ರಾಂ ತೂಕದ ಮೂರು ಚಿನ್ನದ ಉಂಗುರದ ಜೊತೆಗೆ 25 ಸಾವಿರ ನಗದು ಕೂಡ ಕಳ್ಳತನವಾಗಿರುತ್ತದೆ. ಈ ಬಗ್ಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಷ್ಟಕ್ಕೂ ಕಳ್ಳತನ ಮಾಡಿದ್ಯಾರು? ಆದ್ರೆ ಹಾಡಹಗಲೇ ರಾಜೇಶ್ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದು ಯಾರು ಅನ್ನೋ ವಿಚಾರ ಪೊಲೀಸರಿಗೆ ತಿಳಿಯಲು ಸಾಕಷ್ಟು ಸಮಯ ಹಿಡಿಯಲಿಲ್ಲ. ಯಾರೋ ಮೂರನೇ ವ್ಯಕ್ತಿಗಳು ಮನೆಗೆ ನುಗ್ಗಿ ಕಳ್ಳತನ ಮಾಡಿರಲಿಲ್ಲ. ಚಿನ್ನಾಭರಣ, ನಗದು ದೋಚಿದೆಲ್ಲಾ ರಾಜೇಶ್ ಪತ್ನಿ ಶಕುಂತಲಮಣಿ ಅನ್ನೋ ವಿಚಾರ ಪೊಲೀಸರಿಗೆ ಮೇಲ್ನೋಟಕ್ಕೆ ಅದಾಗಲೇ ತಿಳಿದಿತ್ತು. ಆ ದಿನ ಜಮೀನಿಗೆ ಹೋದವಳು ಮಧ್ಯೆದಲ್ಲಿ ಟೀ ತರ್ತೀನಿ ಅಂತಾ ಮನೆಗೆ ಬಂದಿದ್ದ ಶಕುಂತಲಮಣಿ, ತನ್ನ ಮನೆಯ ಚಿನ್ನಾಭರಣ, ನಗದನ್ನ ಬೇರೆಡೆ ಕದ್ದಿಟ್ಟು ಯಾರೋ ಕಳ್ಳತನ ಮಾಡಿದ್ದಾರೆ ಅನ್ನೋ ಕಥೆಯನ್ನ ಹೆಣೆದಿದ್ದಳು.
ತಾನು ಅಮಾಯಕಿಯಂತೆ ಎಲ್ಲರ ಎದುರು ತೋರಿಸಿಕೊಂಡಿದ್ದಳು.. ಅಷ್ಟಕ್ಕೂ ಮನೆಯವರೇ ಯಾಕೆ ಕದಿಯುತ್ತಾರೆ ಅನ್ನೋ ಸನ್ನಿವೇಶ ಮೂಡೋ ಹಾಗೆ ನಾಟಕ ಮಾಡುತ್ತಿದ್ದಳು. ಆದ್ರೆ ಈ ಬಗ್ಗೆ ಸೂಕ್ತ ದಾಖಲೆ ಕಲೆ ಹಾಕಲು ಖಾಕಿ ಟೀಂ ಮುಂದಾಗಿತ್ತು. ಯಾವಾಗ ಪೊಲೀಸರಿಗೆ ತನ್ನ ಮೇಲೆ ಅನುಮಾನ ಬಂತು ಅಂತಾ ಗೊತ್ತಾಯ್ತೋ ಜೂನ್ 30ಕ್ಕೆ ಗಂಡನ ಮನೆಯಿಂದ ಎರಡು ವರ್ಷದ ಮಗುವನ್ನ ಬಿಟ್ಟು ಶಕುಂತಲಮಣಿ ಜೂಟ್ ಹೇಳಿದ್ಳು.
ಚಾಲಾಕಿ ಚೋರಿ-ಪ್ರಿಯಕರನ ಮಧ್ಯೆ ನಡೆದಿತ್ತು ಬರೋಬ್ಬರಿ 4 ಸಾವಿರ ಮೆಸೇಜ್ಗಳು..! ತನ್ನ ಮನೆಯಲ್ಲೇ ಕನ್ನ ಹಾಕುವ ವಿಚಾರಕ್ಕೆ ಕುರಿತಂತೆ ಶಕುಂತಲಮಣಿ ಹಾಗೂ ಆಕೆಯ ಪ್ರಿಯಕರನ ನಡುವೆ ಬರೋಬ್ಬರಿ 4 ಸಾವಿರ ಮೆಸೇಜ್ಗಳು ಪರಸ್ಪರ ಇಬ್ಬರ ನಡುವೆ ವಿನಿಮಯ ಆಗಿತ್ತು. ಹೇಗೆ ಕಳ್ಳತನ ಮಾಡಬೇಕು? ಬೇರೆ ಯಾರೋ ಮಾಡಿದ್ದಾರೆ ಅನ್ನೋ ರೀತಿ ಯಾವ ರೀತಿ ನಂಬಿಸಬೇಕು? ಎಲ್ಲವೂ ಆ ಮೆಸೇಜ್ಗಳಲ್ಲಿ ಚರ್ಚೆ ಆಗಿತ್ತು. ಅದರಂತೆ ತನ್ನ ಪ್ಲ್ಯಾನ್ ಜಾರಿಗೊಳಿಸಿ ಚಾಲಾಕಿ ಚೋರಿ ದೃಶ್ಯಂ ಸಿನಿಮಾ ಮಾದರಿಯಲ್ಲಿ ಕಥೆ ಕಟ್ಟಿದ್ದಳು. ಯಾರೋ ಮನೆಗೆ ನುಗ್ಗಿ ಗಾಡ್ರೇಜ್, ಬೀರು ಎಲ್ಲಾ ಮುರಿದು ಚಿನ್ನಾಭರಣ, ಹಣ ದೋಚಿದ್ದಾರೆ ಅಂತಾ ಎಲ್ಲರನ್ನೂ ನಂಬಿಸೋ ಪ್ರಯತ್ನ ಮಾಡಿದ್ದಳು.
“ಚಿಕ್ಕಮಗಳೂರಿನಿಂದ” ಓಡಿ ಹಳೆ ಪ್ರಿಯಕರನ ಜೊತೆ “ಬಳ್ಳಾರಿ”ಯಲ್ಲಿ ಲಾಕ್! ಇನ್ನೇನು ಆಕೆಯನ್ನ ಲಾಕ್ ಮಾಡ್ಬೇಕು ಅನ್ನುವಷ್ಟರಲ್ಲಿ ಶಕುಂತಲಮಣಿ ಮನೆಯಿಂದ ಜೂನ್ 30ರಂದು ಎಸ್ಕೇಪ್ ಆಗಿದ್ದಳು. ಹೀಗೆ ಇಲ್ಲಿಂದ ಪರಾರಿಯಾದವಳು ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ತೆರಳಿ ಪ್ರಿಯಕರ ಭರತ್ ಕುಮಾರ್ ಎಂಬಾತನ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಹೊಸಪೇಟೆಯಲ್ಲಿ ಆಕೆ ತನ್ನ ಪ್ರಿಯಕರನ ಜೊತೆ ಇರುವ ಸುಳಿವನ್ನ ಅರಿತ ಬೀರೂರು ಪಿಎಸ್ಐ ವಿಶ್ವನಾಥ್ ನೇತೃತ್ವದ ತಂಡ, ಜೂನ್ 5ರಂದು ಇಬ್ಬರನ್ನ ಅರೆಸ್ಟ್ ಮಾಡಿಕೊಂಡು ಚಿಕ್ಕಮಗಳೂರಿಗೆ ವಾಪಸ್ಸಾಗಿದ್ದಾರೆ. ಅಷ್ಟಕ್ಕೂ ಈ ಕೃತ್ಯದ ಸೂತ್ರಧಾರ ಭರತ್ ಕುಮಾರ್, ಆತನ ನಿರ್ದೇಶನದಂತೆ ಈ ಶಕುಂತಲಮಣಿ ಗಂಡನ ಮನೆಯಿಂದ ಚಿನ್ನಾಭರಣ, ನಗದು ದೋಚಿ ಎಸ್ಕೇಪ್ ಆಗಿದ್ದಳು. ಈ ಹಿನ್ನೆಲೆಯಲ್ಲಿ ಭರತ್ ಕುಮಾರ್ ಹಾಗೂ ಶಕುಂತಲಮಣಿಯನ್ನ ಬೀರೂರು ಪೊಲೀಸರು ಬಂಧಿಸಿ ಸದ್ಯ ಜೈಲಿಗಟ್ಟಿದ್ದಾರೆ..
ಚಾಲಾಕಿ ಚೋರಿ ಶಕುಂತಲಮಣಿ ಸಾಮಾನ್ಯದವಳಲ್ಲ! 4 ವರ್ಷದ ಹಿಂದೆ ಕಡೂರು ತಾಲೂಕಿನ ದೊಡ್ಡಬೋಕಿಕೆರೆ ಗ್ರಾಮದ ರಾಜೇಶ್ ಎಂಬುವವರನ್ನ ಮದುವೆಯಾಗಿದ್ದ 28 ವರ್ಷದ ಶಕುಂತಲಮಣಿ ಸಾಮಾನ್ಯದವಳಲ್ಲ. ಇದಕ್ಕೂ ಮುಂಚೆ ಶಕುಂತಲಮಣಿಗೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರದ ವ್ಯಕ್ತಿಯೊಬ್ಬರ ಜೊತೆ ವಿವಾಹವಾಗಿತ್ತು. ಆದರೆ ಆ ವ್ಯಕ್ತಿಯಿಂದ ವಿಚ್ಛೇದನ ಪಡೆದುಕೊಂಡ ಖತರ್ನಾಕ್ ಚೋರಿ ಶಕುಂತಲಮಣಿ, ಆ ಬಳಿಕ ರಾಜೇಶ್ ರನ್ನ ವರಿಸಿದ್ದಳು. ಎರಡನೇ ಮದ್ವೆಯಾದ್ರೂ ತನ್ನ ಚಾಳಿ ಬಿಡದ ಈಕೆ ತನ್ನ ಹಳೇ ಲವ್ವರ್ ಭರತ್ ಕುಮಾರ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದಳು. ಈ ಸಂಪರ್ಕ ಎಲ್ಲಿವರೆಗೂ ಬಂತು ಅಂದ್ರೆ ಕೊನೆಗೆ ತನ್ನ ಗಂಡನ ಮನೆಯಲ್ಲೇ ಕನ್ನ ಹಾಕುವವರೆಗೂ ಅನ್ನೋದು ಮಾತ್ರ ನಿಜಕ್ಕೂ ವಿಪರ್ಯಾಸ. ಅದು ಕೂಡ ತನ್ನ ಎರಡು ವರ್ಷದ ಮಗುವನ್ನ ಬಿಟ್ಟು ಪ್ರಿಯಕರನ ಜೊತೆ ಚಿನ್ನಾಭರಣ, ನಗದು ಎಲ್ಲವನ್ನೂ ಕದ್ದು ಪರಾರಿಯಾಗ್ತಾಳೆ ಅಂದ್ರೆ ಅವಳ ಮನಸ್ಥಿತಿ ಹೇಗಿರಬೇಕು ಅನ್ನೋದು ದೇವರೇ ಬಲ್ಲ.
ವರದಿ: ಪ್ರಶಾಂತ್
ಇದನ್ನೂ ಓದಿ: ಗಂಡು ಎನ್ನುವ ಹಣೆಪಟ್ಟಿ, ಅತ್ಯಾಚಾರ ಆರೋಪ: ಅಥ್ಲೀಟ್ ಪಿಂಕಿ ಕುರಿತು ಬಯೋಪಿಕ್