ರೈಲ್ವೆ ಹಳಿಯ ಟ್ರ್ಯಾಕ್ ಚೇಂಜ್ ಓವರ್ ಮಧ್ಯೆ ಕಾಲು ಸಿಕ್ಕಿ ವೃದ್ಧನ ಕಾಲು ಕಟ್; ಪ್ರಾಣಾಪಾಯದಿಂದ ಸ್ವಲ್ಪದರಲ್ಲಿ ಪಾರು
ಅಚ್ಚರಿಯ ಸಂಗತಿ ಅಂದರೆ ಬಾಪುಸಾಬ ಅವರು ನಿವೃತ್ತ ರೈಲ್ವೆ ನೌಕರ. ತಕ್ಷಣವೇ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಎಲ್ಲ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ಬಳಿಕ ರೈಲ್ವೆ ಇಲಾಖೆ ಸಿಬ್ಬಂದಿ ಮತ್ತು ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಪುಸಾಬ ಅವರನ್ನು ರಕ್ಷಿಸಿದ್ದಾರೆ.
ಧಾರವಾಡ: ರೈಲ್ವೆ ಹಳಿಯ ಟ್ರ್ಯಾಕ್ ಚೇಂಜ್ ಓವರ್ ಮಧ್ಯೆ ಕಾಲು ಸಿಕ್ಕಿ ಹಾಕಿಕೊಂಡು ವೃದ್ಧರೋರ್ವರ ಕಾಲು ಕತ್ತರಿಸಿ ಹೋಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ತೇಜಸ್ವಿನಗರ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ವೃದ್ಧನ ಜೀವಕ್ಕೆ ಅಪಾಯವಾಗಿಲ್ಲ. ನಗರದ ಬಾಪುಸಾಬ್ ಬಾಗೇವಾಡಿ ಎಂಬ 71 ವರ್ಷ ವಯಸ್ಸಿನ ವ್ಯಕ್ತಿ ರೈಲ್ವೆ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಬಾಪುಸಾಬ ಟ್ರ್ಯಾಕ್ ಚೇಂಜ್ ಓವರ್ (ಹಳಿ ಬದಲಿಸುವ ಸ್ಥಳ) ಮಧ್ಯೆ ಕಾಲನ್ನು ಇಟ್ಟ ವೇಳೆಯೇ ರೈಲು ಟ್ರ್ಯಾಕ್ ಬದಲಿಸುವ ಲೀವರ್ ಒತ್ತಲಾಗಿದೆ. ಈ ಕಾರಣ ಬಾಪುಸಾಬ ಅವರ ಕಾಲುಗಳು ಟ್ರ್ಯಾಕ್ ಚೇಂಜ್ ಓವರ್ ಮಧ್ಯೆ ಸಿಕ್ಕಿಹಾಕಿಕೊಂಡು, ಕತ್ತರಿಸಿಹೋಗಿವೆ. ಈ ವೇಳೆ ನೋವಿನಿಂದ ವೃದ್ಧ ಕೂಗಿಕೊಂಡಿದ್ದಲ್ಲದೇ ಕೆಲವರಿಗೆ ಫೋನ್ ಮಾಡಿದ್ದಾರೆ.
ಅಚ್ಚರಿಯ ಸಂಗತಿ ಅಂದರೆ ಬಾಪುಸಾಬ ಅವರು ನಿವೃತ್ತ ರೈಲ್ವೆ ನೌಕರ. ತಕ್ಷಣವೇ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಎಲ್ಲ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ಬಳಿಕ ರೈಲ್ವೆ ಇಲಾಖೆ ಸಿಬ್ಬಂದಿ ಮತ್ತು ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಪುಸಾಬ ಅವರನ್ನು ರಕ್ಷಿಸಿದ್ದಾರೆ. ಒಂದು ವೇಳೆ ಬಾಪುಸಾಬ ಅವರ ಬಳಿ ಫೋನ್ ಇರದೇ ಇದ್ದಿದ್ದರೆ ರೈಲು ಹರಿದು ಆತನ ಪ್ರಾಣಪಕ್ಷಿ ಹಾರಿ ಹೋಗುವ ಪರಿಸ್ಥಿತಿ ಉಂಟಾಗಿತ್ತು. ಆದರೆ ಫೋನ್ ಬರುತ್ತಲೇ ರೈಲ್ವೆ ಇಲಾಖೆ ಸಿಬ್ಬಂದಿ ಮತ್ತು ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಪುಸಾಬ ಅವರನ್ನು ಪ್ರಾಣವನ್ನು ಉಳಿಸಿದ್ದಾರೆ. ಇದೀಗ ಬಾಪುಸಾಬ ಅವರನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಮಧ್ಯೆ ಬಾಪುಸಾಬ ಅವರು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿದ್ದರೂ ಟ್ರ್ಯಾಕ್ ಚೇಂಜ್ ಓವರ್ ಬಗ್ಗೆ ಮಾಹಿತಿ ಇರಲಿಲ್ಲವೇ ಅನ್ನುವ ಪ್ರಶ್ನೆ ಎದ್ದಿದೆ. ಏಕೆಂದರೆ ರೈಲು ಹಳಿಯ ಮೂಲಕ ನಡೆದು ಹೋಗುವುದು ರೈಲ್ವೆ ನಿಯಮದ ಪ್ರಕಾರ ಅಪರಾಧ. ಇದು ಅದೇ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತನಾಗಿದ್ದ ಬಾಪುಸಾಬ ಅವರಿಗೆ ಗೊತ್ತಿರದ ವಿಷಯವೇನಲ್ಲ. ಅಂಥದ್ದರಲ್ಲಿ ಟ್ರ್ಯಾಕ್ ಚೇಂಜ್ ಓವರ್ ಬಳಿ ಕಾಲು ಇಟ್ಟು ನಡೆದು ಹೋಗಿದ್ದು ಏಕೆ? ಅನ್ನೋ ಪ್ರಶ್ನೆ ಎದ್ದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿಯೂ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಇನ್ನೇನು ಜವರಾಯ ಎದುರು ಬಂದು ನಿಂತಿದ್ದಾನೆ ಅಂತಾ ಭಾವಿಸಿದ್ದ ಬಾಪುಸಾಬ ಆತನಿಂದ ಪಾರಾಗಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9, ಧಾರವಾಡ
ಇದನ್ನೂ ಓದಿ:
ಧಾರವಾಡ: ಸತಿ ಪತಿಗಳಾದ ಮೂಕ ಹಕ್ಕಿಗಳು; ಸಾರ್ವಜನಿಕ ವಲಯದಲ್ಲಿ ಅಪಾರ ಶ್ಲಾಘನೆ
ಒಂದೂವರೆ ವರ್ಷದಲ್ಲಿ 150ಕ್ಕೂ ಹೆಚ್ಚು ಕೃಷಿ ಹೊಂಡಗಳ ನಿರ್ಮಾಣ; ಧಾರವಾಡ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ
(Old mans foot cut in the middle of a railway track changeover in Dharwad)