ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಮತ್ತೆ ಬಾಂಬ್ ಬೆದರಿಕೆ: ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ದೌಡು
ಬೆಂಗಳೂರು ನಗರ ಜಿಲ್ಲೆಯ ಖಾಸಗಿ ಶಾಲೆಗೆ ಮತ್ತೆ ಬಾಂಬ್ ಬೆದರಿಕೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿ ಶಾಲೆಯೊಂದಕ್ಕೆ ಮತ್ತೊಮ್ಮೆ ಬಾಂಬ್ ಇರುವ ಬೆದರಿಕೆ ಬಂದಿದೆ. ಎಬಿನೈಜರ್ ಶಾಲೆಯಲ್ಲಿ ಬಾಂಬ್ ಇರುವುದಾಗಿ ಇ-ಮೇಲ್ ಮೂಲಕ ಸಂದೇಶ ಬಂದಿದೆ. ಬಾಂಬ್ ಇರುವ ಬಗ್ಗೆ ಎಬಿನೈಜರ್ ಶಾಲೆಯ ಇ-ಮೇಲ್ ವಿಳಾಸಕ್ಕೆ ಸಂದೇಶ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ ಆಡಳಿತ ಮಂಡಳಿ, ಶಾಲಾ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಳಿಸಿದೆ. ಇನ್ನು ಹೆಬ್ಬಗೋಡಿ ಪೊಲೀಸರು ಸ್ಥಳಕ್ಕಾಗಮಿಸಿ ಶಾಲಾ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಪರಿಶೀಲನೆ ನಡೆಸಿದ್ದು, ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿದೆ. ಕೆಲತಿಂಗಳ ಹಿಂದೆಯೂ ಇದೇ ಶಾಲೆಗೆ ಇದೇ ರೀತಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಇದೀಗ ಮತ್ತೆ ಇದೇ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ.
ಶಾಲೆಗೆ ಬಂದಿರುವ ಇಮೇಲ್ ನಲ್ಲಿ ಏನಿದೆ?
ಈ ದಿನಕ್ಕಾಗಿ ನಾವು ಕಾಯುತ್ತಿದ್ದೇವೆ. ಪ್ರಪಂಚದಾದ್ಯಂತ ಶಾಲೆಗಳ ಮೇಲೆ ಅನೇಕ ದಾಳಿಗಳು ನಡೆಯುತ್ತಿವೆ. ಮನುಷ್ಯನ ಅಸ್ತಿತ್ವವೇ ದುಷ್ಟ ಪರಿಣಾಮವೇ ಪರಿಪೂರ್ಣ ಗುಲಾಮಗಿರಿಗೆ ತರಬೇತಿ ನೀಡುವುದು ಶಾಲೆ. ಮಕ್ಕಳನ್ನು ನಿಮ್ಮಂತೆಯೇ ನಿಷ್ಪ್ರಯೋಜಕರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೀರಿ. 13 ವರ್ಷದಿಂದ ಸಹಿಸಿಕೊಂಡ ದ್ವೇಷವನ್ನು ಇನ್ನು ತಡೆಯಲು ಸಾಧ್ಯವಿಲ್ಲ. ನೀವು ಸಾಯುವ ಮೊದಲು ಅನುಭವಿಸುವ ಚಿತ್ರ ಹಿಂಸೆಗಳು ನಿಮ್ಮ ದೇಹವನ್ನು ಚುಚ್ಚಬೇಕು. ಬೀಸದ ಬುಲೆಟ್ ಗಳು, ಬುಂಡೆಟಿನ ಧ್ವನಿನಿಂದ ನಿಮ್ಮ ನೋವಿನ ಅಂತ್ಯವಾಗಬೇಕು.
ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ ಇದೇ ಮೊದಲು ಅಲ್ಲ. ಈ ಹಿಂದೆ ಸಹ ಬೆಂಗಳೂರಿನ ಹಲವು ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಹಿಂದೆ ರಾಜಾಜಿನಗರ, ಬಸವೇಶ್ವರ ನಗರದ ಎನ್ಪಿಎಸ್ ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ಗಳು ಬಂದಿದ್ದವು. ಆದ್ರೆ, ಪೊಲೀಸ್ ತನಿಖೆಯಲ್ಲಿ ಹುಸಿ ಬಾಂಬ್ ಬೆದರಿಕೆ ಎನ್ನುವುದು ಗೊತ್ತಾಗಿತ್ತು.
Published On - 11:43 am, Tue, 9 May 23