ಚನ್ನಪಟ್ಟಣ ಬೈ ಎಲೆಕ್ಷನ್: ಮೈತ್ರಿ ಪಕ್ಷದ ಅಭ್ಯರ್ಥಿ ಆಗದಿದ್ದರೆ ಸ್ವತಂತ್ರ ಸ್ಪರ್ಧೆ ಎಂದ ಯೋಗೇಶ್ವರ್

|

Updated on: Aug 12, 2024 | 3:38 PM

ಒಂದೆಡೆ ಕರ್ನಾಟಕ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದರೆ, ಮತ್ತೊಂದೆಡೆ ಬಿಜೆಪಿ-ಜೆಡಿಎಸ್​ ದೋಸ್ತಿ ಬಳಗದಲ್ಲೂ ಅಸಮಾಧಾನದ ಕಾವು ಶುರುವಾಗಿದೆ. ಚನ್ನಪಟ್ಟಣದ ಮೇಲೆ ಕಣ್ಣಿಟ್ಟಿರುವ ಸಿ.ಪಿ ಯೋಗೇಶ್ವರ್​, ದೆಹಲಿಗೆ ತೆರಳಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಯೋಗೇಶ್ವರ್​, ನಾನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಚಿಂತಿಸಿದ್ದೇನೆ. ಒಂದುವೇಳೆ ಮೈತ್ರಿ ಅಭ್ಯರ್ಥಿ ಆಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಚನ್ನಪಟ್ಟಣ ಬೈ ಎಲೆಕ್ಷನ್: ಮೈತ್ರಿ ಪಕ್ಷದ ಅಭ್ಯರ್ಥಿ ಆಗದಿದ್ದರೆ ಸ್ವತಂತ್ರ ಸ್ಪರ್ಧೆ ಎಂದ ಯೋಗೇಶ್ವರ್
ಸಿಪಿ ಯೋಗೇಶ್ವರ್
Follow us on

ಬೆಂಗಳೂರು, (ಆಗಸ್ಟ್​ 12): ಚನ್ನಪಟ್ಟಣ ಬೈಎಲೆಕ್ಷನ್ ಟಿಕೆಟ್ ಫೈನಲ್ ವಿಚಾರದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಒಂದ್ಕಡೆ ಎನ್​ಡಿಎ ಅಭ್ಯರ್ಥಿಯಾಗಿಯೇ ನಾನು ಕಣಕ್ಕಿಳಿಯುತ್ತೇನೆ ಎಂದು ಬಿಜೆಪಿ ಎಂಎಲ್​ಸಿ ಸಿ.ಪಿ.ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಎನ್​ಡಿಎ ಟಿಕೆಟ್​ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆಯೂ ಯೋಗೇಶ್ವರ್ ಪ್ಲ್ಯಾನ್​ ಮಾಡಿದ್ದಾರೆ. ಈ ಸಂಬಂಧ ಹೈಕಮಾಂಡ್​ ಬುಲಾವ್ ಮೇರೆಗೆ ಇಂದು (ಆಗಸ್ಟ್ 12) ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿ ಯೋಗೇಶ್ವರ್, ನಾನು ಚನ್ನಪಟ್ಟಣ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎನ್ನುವ ಆಸೆ ಇದೆ. ಒಂದು ವೇಳೆ ಅದು ಸಾಧ್ಯ ವಾಗಿಲ್ಲ ಅಂದರೆ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದರು.

ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎನ್ನುವ ಆಸೆ ಇದೆ. ಒಂದುವೇಳೆ ಅದು ಸಾಧ್ಯ ವಾಗಿಲ್ಲ ಅಂದರೆ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಈಗಾಗಲೇ ನಮ್ಮ ಕ್ಷೇತ್ರದ ಜನರು ಹಲವು ಬಾರಿ ಸ್ವತಂತ್ರವಾಗಿ ನಿಂತರೂ ನನ್ನನ್ನು ಗೆಲ್ಲಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಲು ಸಾಧ್ಯವಿಲ್ಲ ಎಂದಾದರೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಹೊರತು ಕಾಂಗ್ರೆಸ್‌ಗೆ ಸೇರಲ್ಲ. ಇದುವರೆಗೆ ನನ್ನನ್ನು ಯಾವುದೇ ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲ ಎಂದು ಯೋಗೇಶ್ವರ್‌ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ರಾಜ್ಯ ಬಿಜೆಪಿ ಪಕ್ಷದಲ್ಲಿ ಆಂತರಿಕ ಕಚ್ಚಾಟ; ಪರ್ಯಾಯ ನಾಯಕರ ಸಭೆಯಲ್ಲಿ ಬಿಎಸ್​ವೈ, ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನ

ನಾನು ಚನ್ನಪಟ್ಟಣ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಅಲ್ಲಿ ಸ್ಪರ್ಧಿಸುವಂತೆ ಜನರು ಕೂಡ ಒತ್ತಡ ಹಾಕುತ್ತಿದ್ದಾರೆ. ನಾವೆಲ್ಲರೂ ಸಮಾನ ಮನಸ್ಕರು ಸಭೆ ಸೇರಿದ್ದೇವೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಬಾರದು. ಆ ಕ್ಷೇತ್ರವನ್ನು ಎನ್‌ಡಿಎ ವಶಕ್ಕೆ ತಗೊಳ್ಳಬೇಕು ಎಂದು ನಿರ್ಣಯಿಸಿದ್ದೇವೆ. ಇದೇ ಕಾರಣಕ್ಕೆ ನಾನು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮನಸ್ಸು ಮಾಡಿದ್ದೇನೆ. ಅದಕ್ಕಾಗಿ ಇಂದು ದಿಲ್ಲಿಗೆ ತೆರಳುತ್ತಿದ್ದೇನೆ. ಅಲ್ಲಿ ವರಿಷ್ಠರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ. ಆಗಸ್ಟ್ 16ರಂದು ಮತ್ತೆ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗುವ ಯೋಜನೆಯೂ ಇದೆ ಎಂದರು.

ಈಗಾಗಲೇ ನಮ್ಮ ರಾಜ್ಯ ನಾಯಕರು ಕೂಡ ನನ್ನ ಸ್ಪರ್ಧೆಯ ಬಗ್ಗೆ ಭರವಸೆ ನೀಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸ್ವಲ್ಪ ಮುಂಗೋಪ ಅಷ್ಟೇ. ಆದರೆ ಅಂತಿಮವಾಗಿ ಅವರ ಜತೆ ವರಿಷ್ಠರು ಮಾತಾಡಿದ ಬಳಿಕ ನನ್ನ ಸ್ಪರ್ಧೆಗೆ ಅವರೂ ಒಪ್ಪಿಗೆ ಸೂಚಿಸುವ ಭರವಸೆ ಇದೆ. ಕಳೆದ ಬಾರಿ ಮೈತ್ರಿ ಮಾಡಿಕೊಳ್ಳುವಂತೆ ಹೇಳಿದವನೇ ನಾನು. ಬಿಜೆಪಿ ಮೈತ್ರಿ ಮಾಡಿಕೊಳ್ಳದಿದ್ದರೆ ನಮ್ಮ ಭಾಗದಲ್ಲಿ ಜೆಡಿಎಸ್ ಕಥೆ ಏನಾಗುತ್ತಿತ್ತು? ಹೀಗಾಗಿ ಎರಡು ಪಕ್ಷಗಳ ಒಮ್ಮತದ ಅಭ್ಯರ್ಥಿ ನಾನೇ ಆಗುವ ವಿಶ್ವಾಸ ಇದೆ ಎಂದು ಹೇಳಿದರು.

ಒಟ್ಟಿನಲ್ಲಿ ಸದ್ಯ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ನೋಡ್ತಿದ್ರೆ ಅಂತರಂಗದ ಸಮರ ಬೂದಿ ಮುಚ್ಚಿದ ಕೆಂಡದಂತೆ ಇರೋದು ಸ್ಪಷ್ಟವಾಗುತ್ತಿದೆ. ಇಂತಹ ಅಸಮಾಧಾನದ ಪಟ್ಟಿಗೆ ಕೇಸರಿಯ ದೋಸ್ತಿಯಲ್ಲಿ ಚನ್ನಪಟ್ಟಣ ಟಿಕೆಟ್ ತಿಕ್ಕಾಟಕ್ಕೆ ವೇದಿಕೆ ರೆಡಿ ಆದರೂ ಅಚ್ಚರಿ ಇಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ