ಬೆಂಗಳೂರು, (ಡಿಸೆಂಬರ್ 21): ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (Pradhana Mantri Awas Yojana) ಟೆಂಡರ್ ಆಹ್ವಾನಿಸಿ ಅನುಷ್ಠಾನಗೊಳಿಸುತ್ತಿರುವ ಮನೆಗಳ ಪೈಕಿ ಮುಕ್ತಾಯ ಹಂತದಲ್ಲಿರುವ 48,796 ಮನೆಗಳ ಪ್ರತಿ ಫಲಾನುಭವಿಗಳಿಂದ 1 ಲಕ್ಷ ರೂ. ಮಾತ್ರ ಸಂಗ್ರಹಿಸಿ ಉಳಿದ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸಲು ಸಂಪುಟ ತೀರ್ಮಾನಿಸಿದೆ.
ಇಂದು (ಡಿಸೆಂಬರ್ 21) ನಡೆದ ಮಹತ್ವದ ಸಂಪುಟ ಸಭೆ (Cabinet Meeting) ಬಳಿಕ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಎಚ್.ಕೆ. ಪಾಟೀಲ್ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಖಾನ್ (Zameer Ahmad Khan), ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಮನೆ ಹಂಚುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಪಾವತಿಸಿ ಮನೆಯನ್ನು ಪಡೆಯಬಹುದು. ಇದು ಕಾಂಗ್ರೆಸ್ ಚುನಾವಣೆಗೆ ಮುನ್ನ ಘೋಷಿಸದೇ ಇರುವ ಆರನೇ ಗ್ಯಾರಂಟಿ ಎಂದು ಪರಿಗಣಿಸಬಹುದು ಎಂದು ಹೇಳಿದರು.
ಇದನ್ನೂ ಓದಿ: ಬುಡಕಟ್ಟು ಪಂಗಡಗಳ ಜನರಿಗೆ ಉಚಿತ ಪೌಷ್ಟಿಕ ಆಹಾರ, ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಇಲ್ಲಿವೆ
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2015ರಲ್ಲಿ 1,80,253 ಮನೆಗಳು ಮಂಜೂರಾಗಿದ್ದವು. ಆದರೆ, 2015ರಿಂದ 2023ರ ವರೆಗೂ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಒಂದೇ ಒಂದು ಮನೆಯನ್ನು ಕೊಡಲು ಸಾಧ್ಯವಾಗಿಲ್ಲ. 2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತಿ ವರ್ಷವೂ ಒಂದಷ್ಟು ಮನೆಗಳಿಗೆ ಮಂಜೂರಾತಿ ನೀಡಲಾಗಿತ್ತು. 2018ರಿಂದ ಒಂದೇ ಒಂದು ಮನೆಯನ್ನು ಮಂಜೂರಾತಿ ನೀಡಲಾಗಿಲ್ಲ.
ಆವಾಸ್ ಯೋಜನೆಯ ಪ್ರಕಾರ ಫಲಾನುಭವಿಗಳು 4.5 ಲಕ್ಷ ರೂ. ಪಾವತಿಸಬೇಕು. ಕೇಂದ್ರ ಸರಕಾರ 1.5 ಲಕ್ಷ ರೂ. ನೀಡುತ್ತದೆ, ರಾಜ್ಯ ಸರಕಾರ ಒಂದು ಲಕ್ಷ ರೂ. ನೀಡಬೇಕು. ಆದರೆ, ರಾಜ್ಯ ಸರ್ಕಾರ ಇದುವರೆಗೂ ತನ್ನ ಪಾಲಿನ ಹಣ ಬಿಡುಗಡೆ ಮಾಡಿಲ್ಲ. ಜತೆಗೆ ಹಲವಾರು ಫಲಾನುಭವಿಗಳು 4.5 ಲಕ್ಷ ರೂ. ಕಟ್ಟಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.
ಹೊಸ ಯೋಜನೆಯ ಪ್ರಕಾರ ರಾಜ್ಯ ಸರ್ಕಾರ 500 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಹಣ ಬಿಡುಗಡೆಗೆ ಒಪ್ಪಿದ್ದಾರೆ. ಈಗ ಮನೆ ಪಡೆಯುವ ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಕಟ್ಟಿದರೆ ಸಾಕು. ಕೇಂದ್ರ ಸರ್ಕಾರ ಒಂದುವರೆ ಲಕ್ಷವನ್ನು ಕೊಡುತ್ತದೆಯಾದರೂ ಈ ಮೊತ್ತವನ್ನು ಅದು ಜಿಎಸ್ಟಿ ಮೂಲಕ ಮರಳಿ ಪಡೆಯುತ್ತದೆ ಎಂದು ಜಮೀರ್ ಅಹಮ್ಮದ್ ಖಾನ್ ಹೇಳಿದರು.
ರಾಜ್ಯದಲ್ಲಿ 1.8 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿವೆ. ಇದೀಗ ಇವುಗಳನ್ನು ಪೂರ್ಣಗೊಳಿಸಲು 6,170 ಕೋಟಿ ರೂ ಬೇಕಾಗಿದೆ. ಇದರ ಪೈಕಿ 5,403 ಕೋಟಿ ಫಲಾನುಭವಿಗಳ ಮೂಲಕ ಬರಬೇಕಿದೆ.
Published On - 9:33 pm, Thu, 21 December 23