
ಬೆಂಗಳೂರು, ಜೂನ್ 6: ಕರ್ನಾಟಕದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಿವೆ. 2025-2026ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಿದೆ. ಚಿಣ್ಣರು ಕಳೆದ ಒಂದು ವಾರದಿಂದ ಶಾಲೆಗೆ ತೆರಳುತ್ತಿದ್ದಾರೆ. ಆದರೆ, ಶಾಲೆಗಳು ಆರಂಭವಾಗಿ ವಾರ ಕಳೆದರೂ ಇನ್ನೂ ಪಠ್ಯ ಪುಸ್ತಕಗಳು (Textbooks) ವಿದ್ಯಾರ್ಥಿಗಳ ಕೈ ಸೇರಿಲ್ಲ. ಆಂಗ್ಲ ಮಾಧ್ಯಮದ 1 ರಿಂದ 5 ನೇ ತರಗತಿ ವರೆಗಿನ ಮಕ್ಕಳಿಗೆ ನೀಡಬೇಕಾದ ಪಠ್ಯಪುಸ್ತಕ ಶಾಲೆಗಳಿಗೆ ಬಂದಿಲ್ಲ. ಕನ್ನಡ ಮಾಧ್ಯಮದ ಶೇ 20 ವಿದ್ಯಾರ್ಥಿಗಳಿಗೂ ಪಠ್ಯಪುಸ್ತಕ ಇನ್ನಷ್ಟೇ ಪೂರೈಕೆಯಾಗಬೇಕಿದೆ. ಬೆಂಗಳೂರಿನ ಶಾಲೆಗಳ (Bangalore Schools) ಸ್ಥಿತಿಗತಿಯೇ ಹೀಗಾದರೆ, ಬೇರೆ ಜಿಲ್ಲೆಗಳ ಶಾಲೆಗಳ ಕಥೆ ಏನು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆ ಆರಂಭದ ದಿನವೇ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಕೊಡುತ್ತೇವೆ. ಈ ವರ್ಷ ಪಠ್ಯಪುಸ್ತಕ ತಡ ಮಾಡುವುದಿಲ್ಲ ಎಂದಿದ್ದ ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ್ಯವಹಿಸಿದೆ. ಪಠ್ಯ ಪುಸ್ತಕಗಳು ಇಲ್ಲದೆ ತರಗತಿ ನಡೆಸಲು ಸಾಧ್ಯವಾಗದ ಶಿಕ್ಷಕರು ಸೇತುಬಂಧ ಕಾರ್ಯಕ್ರಮ ಮುಂದುವರೆಸಿದ್ದಾರೆ.
ಇನ್ನು ಶಿಕ್ಷಣ ಇಲಾಖೆಯ ನಡೆಯ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟವೂ ಆಕ್ರೋಶ ವ್ಯಕ್ತಪಡಿಸಿವೆ. ಪಠ್ಯಪುಸ್ತಕಕ್ಕೆ ಸರ್ಕಾರಕ್ಕೆ ಕಳೆದ 6 ತಿಂಗಳ ಹಿಂದೆಯೇ ಹಣ ನೀಡಿದ್ದೇವೆ. ಆದರೆ ಶಾಲೆ ಶುರುವಾಗಿ ಇಷ್ಟು ದಿನವಾದರೂ ಪಠ್ಯಪುಸ್ತಕ ಪೂರೈಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: SSLCಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಜಿಲ್ಲೆಗಳ DDPIಗಳಿಗೆ ಸಿಎಂ ಶಾಕ್
ಏತನ್ಮಧ್ಯೆ, ಈಗಾಗಲೇ ಶೇ 83 ರಷ್ಟು ಪಠ್ಯಪುಸ್ತಕ ಪೂರೈಕೆ ಮಾಡಲಾಗಿದೆ. ಉಳಿದವುಗಳನ್ನು ಇನ್ನೊಂದು ವಾರದಲ್ಲಿ ನೀಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಡಾ. ತ್ರಿಲೋಕಚಂದ್ರ ತಿಳಿಸಿದ್ದಾರೆ.
ಒಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರತಿ ಬಾರಿಯಂತೆ ಈ ಬಾರಿಯೂ ಪಠ್ಯಪುಸ್ತಕ ವಿತರಣೆ ತಡ ಮಾಡಿದೆ. ಮಕ್ಕಳಿಗೆ ಅತ್ಯಗತ್ಯವಾಗಿ ಬೇಕಿರುವ ಪಠ್ಯಪುಸ್ತಕವನ್ನು ಇನ್ನಾದರೂ ಆದಷ್ಟು ಬೇಗ ಪೂರೈಕೆ ಮಾಡಬೇಕಿದೆ.