Onion Price: ಟೊಮೆಟೋ ಬಳಿಕ ಇದೀಗ ಕರ್ನಾಟಕದ ಜನರಿಗೆ ಈರುಳ್ಳಿ ಬೆಲೆ ಏರಿಕೆ ಶಾಕ್‌!

|

Updated on: Oct 12, 2023 | 11:18 AM

onion price rise In Karnataka: ತರಕಾರಿಗಳ ಬೆಲೆಗಳು ದೇಶಾದ್ಯಂತ ಏರುತ್ತಿವೆ. ಟೊಮೆಟೋ ದರ ಇಳಿಕೆ ಆಗುತ್ತಿದ್ದರೆ, ಈರುಳ್ಳಿ ದರ ಏರಿಕೆಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಈರುಳ್ಳಿ ದರ ಹಂತ ಹಂತವಾಗಿ ಏರಿಕೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಹಾಗಾದ್ರೆ, ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು? ಎನ್ನುವ ವಿವರ ಇಲ್ಲಿದೆ.

Onion Price: ಟೊಮೆಟೋ ಬಳಿಕ ಇದೀಗ ಕರ್ನಾಟಕದ ಜನರಿಗೆ ಈರುಳ್ಳಿ ಬೆಲೆ ಏರಿಕೆ ಶಾಕ್‌!
ಈರುಳ್ಳಿ
Follow us on

ಬೆಂಗಳೂರು, (ಅಕ್ಟೋಬರ್ 12): ಈರುಳ್ಳಿಯೂ(Onion) ದಿನನಿತ್ಯದ ಅಗತ್ಯ ಆಹಾರ ವಸ್ತು. ಇದೀಗ ಗ್ರಾಹಕರಿಗೆ ಈರುಳ್ಳಿ ದರ ಏರಿಕೆ ಬಿಸಿ (Onion Price rise)ತಟ್ಟಲಾರಂಬಿಸಿದೆ.  ಹೌದು.. ಕಳೆದ ವಾರ 15 ರಿಂದ 20 ರುಪಾಯಿಗೆ ಸಿಗುತ್ತಿದ್ದ ಈರುಳ್ಳಿ, ಇದೀಗ ಕೆಜಿಗೆ ಏಕಾಏಕಿ 40 ರಿಂದ 45 ರೂ. ಗೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಈರುಳ್ಳಿ ಬೆಳೆಯುವ ಜಿಲ್ಲೆಗಳಿಂದ ಪೂರೈಕೆ ಬಹುತೇಕ ಕುಸಿದಿದೆ. ಅಲ್ಲದೇ ನಾಸಿಕ್ ಹಾಗೂ ಪುಣೆಯಿಂದ ಪೂರೈಕೆಯಾಗುತ್ತಿರುವುದು ಸ್ಥಗಿತವಾಗಿದೆ. ಇದರಿಂದ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಮೊದಲು ಚಿತ್ರದುರ್ಗ, ಚಳ್ಳಕೆರೆ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣದ ರಾಜ್ಯಗಳಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ. ನವೆಂಬರ್‌ ಬಳಿಕ ಗದಗ, ವಿಜಯಪುರದಿಂದ ಪೂರೈಕೆಯಾಗುತ್ತದೆ. ಆದರೆ, ಈ ವರ್ಷ ಬಿತ್ತನೆ ಕಡಿಮೆಯಾಗಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ಈ ವೇಳೆಗೆ 1.20 ಲಕ್ಷ ಚೀಲ ಈರುಳ್ಳಿ ಬರಬೇಕಿತ್ತು. ಆದರೆ, ಶೇ. 35ರಷ್ಟು ಕಡಿಮೆ ಅಂದರೆ ನಿತ್ಯ ಸರಾಸರಿ 60 ಸಾವಿರದಿಂದ 70 ಸಾವಿರ ಚೀಲಗಳು ಮಾತ್ರ ಬರುತ್ತಿದ್ದು,  ಮುಂದಿನ ದಿನಗಳಲ್ಲಿ ಮತ್ತಷ್ಡು ಕೊರತೆಯಾಗುವ ಸಾಧ್ಯತೆಗಳಿವೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಗುಲಾಬಿ ಈರುಳ್ಳಿ ರಫ್ತಿಗೆ ನಿರ್ಬಂಧ ರದ್ದು; ಸೆ. 29ರಿಂದಲೇ ಅನುಮತಿ; ಆದರೆ ಷರತ್ತುಗಳಿವೆ

ನಾಸಿಕ್ ಹಾಗೂ ಪುಣೆಯಿಂದ ಪೂರೈಕೆ ಸ್ಥಗಿತವಾಗಿದ್ದರಿಂದ ಈರುಳ್ಳಿ ಸ್ಟಾಕ್ ಇಲ್ಲ. ಇತ್ತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇನ್ನು ಕೆಲ ಕಡೆ ಈರುಳ್ಳಿ ಬೆಳೆಯಲಾಗಿದೆ ಆದರೂ ಕಟಾವಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಸ್ಟಾಕ್ ಇಲ್ಲದಂತಾಗಿದೆ. ಇದರ ಮಧ್ಯೆ ಈರುಳ್ಳಿಗೆ ಬೇಡಿಕೆ ಹೆಚ್ಚಳವಾಗಿದ್ದರಿಂದ ದರ ಏರಿಕೆ ಕಂಡಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ

ರಾಜ್ಯದಲ್ಲಿ ಹೊಸ ಈರುಳ್ಳಿ ಬೆಳೆಯ ಒಟ್ಟು ಇಳುವರಿ ಕೇವಲ ಶೇ 40ರಷ್ಟಿದ್ದು, ಈಗಾಗಲೇ ಶೇ 25ರಷ್ಟು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಬೆಳೆಯುವ ಈರುಳ್ಳಿ ಬೆಳೆ ಹೊರತುಪಡಿಸಿ, ಇಡೀ ಈರುಳ್ಳಿ ಮಾರುಕಟ್ಟೆ ನಾಸಿಕ್ ಮತ್ತು ಮಹಾರಾಷ್ಟ್ರದ ಇತರ ಈರುಳ್ಳಿ ಬೆಳೆಯುವ ಪ್ರದೇಶಗಳನ್ನು ಅವಲಂಬಿಸಿದೆ. ಕಳೆದ 15 ದಿನಗಳಿಂದ ಶಿವಮೊಗ್ಗ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ ಸುಮಾರು 25 ರಿಂದ 30 ರೂ. ಗಳಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 30 ರಿಂದ 35 ರೂ.ಗೆ ಮಾರಾಟವಾಗುತ್ತಿತ್ತು. ಸದ್ಯ ಶಿವಮೊಗ್ಗದ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ 32 ರಿಂದ 35 ರೂ.ಗೆ ಏರಿಕೆಯಾಗಿದೆ.

ಇನ್ನು ಈ ಬಗ್ಗೆ ಈರುಳ್ಳಿ ವ್ಯಾಪಾರಿ ರಾಮು ಎನ್ನುವರು ಮಾತನಾಡಿದ್ದು, ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಶೇ 40ರಷ್ಟು ತೆರಿಗೆ ವಿಧಿಸಿದೆ. ಈ ಕ್ರಮವು ಮಹಾರಾಷ್ಟ್ರದ ಪ್ರಮುಖ ಮಾರಾಟಗಾರರ ಈರುಳ್ಳಿ ರಫ್ತಿನ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.

ಈರುಳ್ಳಿ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ

ಕಡಿಮೆ ಬೆಳೆಯಿಂದಾಗಿ ಬೆಲೆ ಮತ್ತಷ್ಟು ಗಗನಕ್ಕೇರುವುದನ್ನು ತಡೆಯಲು ಹಾಗೂ ಕೃತಕ ಅಭಾವ ಸೃಷ್ಟಿಗೆ ಅವಕಾಶ ನೀಡದಂತೆ ಕೇಂದ್ರದ ನಾಫೆಡ್‌ ಹಾಗೂ ನ್ಯಾಷನಲ್ ಕೋ-ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಸಿಸಿಎಫ್‌) ಮೂಲಕ ಏಪ್ರಿಲ್, ಮೇ ತಿಂಗಳಲ್ಲಿ ಮಹಾರಾಷ್ಟ್ರದ ಈರುಳ್ಳಿಯನ್ನು ಖರೀದಿಸಿತ್ತು. ಅದನ್ನೀಗ ಕಳೆದ ವಾರದಿಂದ ಬೆಂಗಳೂರು ಮಾರುಕಟ್ಟೆಗೆ ಪೂರೈಸುತ್ತಿದೆ. ಈ ಈರುಳ್ಳಿಯು ನವೆಂಬರ್‌ ಎರಡನೇ ವಾರದವರೆಗೆ ಪೂರೈಕೆಯಾಗಬಹುದು ಎನ್ನಲಾಗುತ್ತಿದೆ.

ಅಷ್ಟೊತ್ತಿಗಾಗಲೇ ಉತ್ತರ ಕರ್ನಾಟಕ, ಮಹಾರಾಷ್ಟ್ರದ ಈರುಳ್ಳಿ ಇದೇ ಪ್ರಮಾಣದಲ್ಲಿ ಬಂದರೆ ಬೆಲೆ ನಿಯಂತ್ರದಲ್ಲಿ ಇರುತ್ತದೆ. ಒಂದು ವೇಳೆ ಪೂರೈಕೆ ಕಡಿಮೆಯಾದರೆ ಈರುಳ್ಳಿ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿಂದೆ  ಈರಳ್ಳಿ ಒಂದು ಕೆಜಿಗೆ 200 ರೂಪಾಯಿ ವರೆಗೂ ಏರಿಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:01 am, Thu, 12 October 23