ಶೇಕಡಾ ಒಂದರಷ್ಟು ಜನರು ಮಾತ್ರ ಪೃಕೃತಿ ರಕ್ಷಣೆ ಮಾಡುತ್ತಿದ್ದಾರೆ: ಕೃಷಿ, ಅರಣ್ಯ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ

| Updated By: preethi shettigar

Updated on: Jul 19, 2021 | 8:36 AM

ಕೋಟಿ ವೃಕ್ಷ ಅಭಿಯಾನದ ಮೂಲಕ ನಗರದ ಹೊರ ಭಾಗದ ಭೂತನಾಳ ಕೆರೆಯ ಸುತ್ತಮುತ್ತ ಸಾವಿರಾರು ಸಸಿಗಳನ್ನು ನೆಟ್ಟು, ಅವು ಗಿಡಗಳಾಗುವಂತೆ ಮಾಡಿದ್ದು ಸಾಧನೆ. ಅಲ್ಲಿನ ಗಿಡಗಳು ಮುಂದೆ ದೊಡ್ಡ ಹೆಮ್ಮರಗಳಾಗಿ ಬೆಳೆಯಲಿ ಎಂದು ಡಾ. ಚಂದ್ರಶೇಖರ್ ಆಶಿಸಿದರು.

ಶೇಕಡಾ ಒಂದರಷ್ಟು ಜನರು ಮಾತ್ರ ಪೃಕೃತಿ ರಕ್ಷಣೆ ಮಾಡುತ್ತಿದ್ದಾರೆ: ಕೃಷಿ, ಅರಣ್ಯ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ
ಪರಿಸರ ಆಸಕ್ತರ ಉಪಹಾರ ಕೂಟ ಕಾರ್ಯಕ್ರಮ
Follow us on

ವಿಜಯಪುರ: ಪ್ರಕೃತಿ ಉಳಿವಿಗಾಗಿ ಶೇಕಡಾ 1ರಷ್ಟು ಜನರು ಮಾತ್ರ ಪ್ರಯತ್ನಗಳನ್ನು ಮಾಡುತ್ತಾರೆ. ಇತರೆ ಶೇಕಡಾ 99 ಜನರು ಪ್ರಕೃತಿಯ ವಿನಾಶದ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಪ್ರಕೃತಿ ರಕ್ಷಿಸಲು ಪ್ರಯತ್ನಿಸುತ್ತಿರುವ ಶೇಕಡಾ 1ರಷ್ಟು ಸಂಖ್ಯೆಯನ್ನು ಪ್ರತಿಶತ 10ಕ್ಕೆ ಏರಿಸಿದರೆ ಜಗತ್ತಿನಲ್ಲಿ ಸಾಕಷ್ಟು ಆರೋಗ್ಯಕರ ಬದಲಾವಣೆಗಳಾಗುತ್ತವೆ. ಆ ಬದಲಾವಣೆಯಿಂದ ಪ್ರಾಕೃತಿಕ ವಿಕೋಪಗಳು ತಪ್ಪುತ್ತವೆ ಎಂದು ಕೃಷಿ, ಅರಣ್ಯ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಹೇಳಿದರು.

ಮಾಜಿ ಸಚಿವ ಎಂ. ಬಿ. ಪಾಟೀಲ್ ನಿವಾಸದಲ್ಲಿ ನಿನ್ನೆ(ಜುಲೈ 18) ಪರಿಸರ ಆಸಕ್ತರ ಉಪಹಾರ ಕೂಟ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಉಪಹಾರ ಕೂಟದಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಕೃಷಿ, ಅರಣ್ಯ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಕೃಷಿ, ಅರಣ್ಯ ಹಾಗು ಪರಿಸರ ಕಾಳಜಿಯಲ್ಲಿ ಜನ ಸಾಮಾನ್ಯರ ಪಾತ್ರದ ಬಗ್ಗೆ ಎಚ್ಚರಿಕೆ ನೀಡಿದರು.

ಈಜಿಪ್ಟ್​ ಸೇರಿ ಇತರೆ ದೇಶಗಳಲ್ಲಿ ಕೃಷಿ, ಅರಣ್ಯ ಮತ್ತು ಹವಾಮಾನ ಕ್ಷೇತ್ರದಲ್ಲಿ ಕೆಲಸ
ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದವರಾದ ಕೃಷಿ, ಅರಣ್ಯ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಸದ್ಯ ಈಜಿಪಟ್​ನಲ್ಲಿ ನೆಲೆಸಿದ್ದಾರೆ. ಈಜಿಪ್ಟ್​ ಸೇರಿದಂತೆ ಇತರೆ ಹಲವು ರಾಷ್ಟ್ರಗಳಲ್ಲಿ ಕೃಷಿ, ಅರಣ್ಯ ಮತ್ತು ಹವಾಮಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಸ್ವದೇಶಕ್ಕೆ ಆಗಮಿಸಿದ ಡಾ. ಚಂದ್ರಶೇಖರ್ ನಿನ್ನೆ ವಿಜಯಪುರದಲ್ಲಿ ಪರಿಸರ ಆಸಕ್ತರ ಉಪಹಾರ ಕೂಟ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪ್ರಕೃತಿ ನಾಶ ಮಾಡುತ್ತಿರುವುದರಿಂದ ಮಣ್ಣು, ನೀರು, ಹವಾಮಾನಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿ, ವಿಷಮಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಮೊದಲು ನಾವು ತಿನ್ನುವ ಆಹಾರವೇ ವಿಷವಾಗಿದೆ. ಇದನ್ನು ಬದಲಾಯಿಸಬೇಕು. ಯುವಕರಿಂದ ಮಾತ್ರ ಈ ಬದಲಾವಣೆ ಸಾಧ್ಯ ಎಂದು ಇಂದಿನ ಯುವ ಜನತೆಗೆ ಪರಿಸರ ಉಳಿಸಲು ಮುಂದಾಗಬೇಕೆಂದು ಕರೆ ಕೊಟ್ಟರು.

50 ರಾಷ್ಟ್ರಗಳಲ್ಲಿ ಬದಲಾವಣೆ ಮಾಡಿ ಯಶಸ್ಸು ಕಂಡಿರುವ ವಿಜ್ಞಾನಿ
ಕೃಷಿ, ಅರಣ್ಯ ಮತ್ತು ಹವಾಮಾನ ಕ್ಷೇತ್ರದಲ್ಲಿ ಸುಮಾರು 50 ಕ್ಕೂ ಆಧಿಕ ದೇಶಗಳಲ್ಲಿ ಡಾ. ಚಂದ್ರಶೇಖರ್ ಕೆಲಸ ಮಾಡಿದ್ದಾರೆ. ಮುಖ್ಯವಾಗಿ ಪರಿಸರ ರಕ್ಷಣೆ ಮಾಡಬೇಕೆಂಬ ನಿಟ್ಟಿನಲ್ಲಿ ಅವರು ಕೆಲಸ ಮಾಡಿದ್ದಾರೆ. ಪರಿಸರ ಉಳಿದರೆ ನಾವು ಉಳಿಯುತ್ತೇವೆ ಎಂಬ ಸತ್ಯವನ್ನು ಇತರರಿಗೆ ತಿಳಿಸುವ ಕೆಲಸ ಮಾಡಿದ್ದಾರೆ. ನಂತರ ನೆಲ, ಜಲ, ಹವಾಮಾನ ಕಲುಷಿತವಾಗದಂತೆ ನಾವು ಬದುಕಬೇಕೆಂದು ತಿಳಿದ್ದಾರೆ. ಈ ನಿಟ್ಟಿನಲ್ಲಿ ಆಯಾ ದೇಶಗಳಲ್ಲಿ ಯುವ ಸಮುದಾಯವನ್ನು ಜಾಗೃತಗೊಳಿಸಿ ತಿಳುವಳಿಕೆ ನೀಡಿದ್ದಾರೆ. ಅದರ ಫಲವಾಗಿ 50 ಕ್ಕೂ ಆಧಿಕ ದೇಶಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ.

ವಿಜಯಪುರದಲ್ಲಿನ ಕೋಟಿ ವೃಕ್ಷ ಅಭಿಯಾನಕ್ಕೆ ಮೆಚ್ಚುಗೆ
ಸದಾ ಕಾಲ ಬರದನಾಡು, ಬಿಸಿಲೂರು ಎಂದು ಕರೆಯಿಸಿಕೊಳ್ಳುತ್ತಿದ್ದ ವಿಜಯಪುರ ಜಿಲ್ಲೆಯಲ್ಲಿ ಸದ್ಯ ಬದಲಾವಣೆಯ ದೃಶ್ಯ ಕಂಡು ಬರುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಬದಲಾವಣೆ ತರುವ ಕಾರ್ಯವನ್ನು ಮಾಜಿ ಸಚಿವ ಎಂ. ಬಿ. ಪಾಟೀಲ್ ನೇತೃತ್ವದಲ್ಲಿ ಕೋಟಿ ವೃಕ್ಷ ಅಭಿಯಾನ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಮರಗಿಡಗಳನ್ನು ಬೆಳೆಸಲು ಪ್ರೇರೇಪಣೆ ನೀಡಲಾಗಿದೆ. ಕೋಟಿ ವೃಕ್ಷ ಅಭಿಯಾನದ ಮೂಲಕ ನಗರದ ಹೊರ ಭಾಗದ ಭೂತನಾಳ ಕೆರೆಯ ಸುತ್ತಮುತ್ತ ಸಾವಿರಾರು ಸಸಿಗಳನ್ನು ನೆಟ್ಟು, ಅವು ಗಿಡಗಳಾಗುವಂತೆ ಮಾಡಿದ್ದು ಸಾಧನೆ. ಅಲ್ಲಿನ ಗಿಡಗಳು ಮುಂದೆ ದೊಡ್ಡ ಹೆಮ್ಮರಗಳಾಗಿ ಬೆಳೆಯಲಿ ಎಂದು ಡಾ. ಚಂದ್ರಶೇಖರ್ ಆಶಿಸಿದರು.

ವಿಜ್ಞಾನಿ ಚಂದ್ರಶೇಖರ ಸಲಹೆ ಸೂಚನೆ ಪಾಲನೆಗೆ ಸಿದ್ದ: ಎಂ ಬಿ ಪಾಟೀಲ್
ನಮ್ಮ ರಾಜ್ಯದವರಾದ ಅದರಲ್ಲೂ ನಮ್ಮದೇ ಸ್ವಂತ ಜಿಲ್ಲೆಯವರಾದ ವಿಜ್ಞಾನಿ ಡಾ. ಚಂದ್ರಶೇಖರ ಅವರ ಸಲಹೆ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗುತ್ತದೆ. ಪರಿಸರ ಉಳಿಸಲು ನೆಲ, ಜಲ, ಹವಾಮಾನ ವಿಚಾರದಲ್ಲಿ ನಾವು ವಿಜ್ಞಾನಿ ಡಾ. ಚಂದ್ರಶೇಖರ ಬಿರಾದಾರ ಅವರ ಮಾರ್ಗದರ್ಶನ ಬಯಸುತ್ತೇವೆ. ರಾಜ್ಯದ ಪರಿಸರ ಪೂರಕವಾಗಿ ನೀಡಿರುವ ಸಲಹೆಗಳನ್ನು ಕ್ರೋಢಿಕರಿಸಿ, ಆದ್ಯತೆಯ ಮೆರೆಗೆ ಅವುಗಳನ್ನು ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರ ಗಮನ ಸೆಳೆಯಲಾಗುವುದು ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.

ಜಗತ್ತಿನ ಹಲವು ರಾಷ್ಟ್ರಗಳ ಪ್ರಯೋಗಕ್ಕೂ ಭಾರತಕ್ಕೂ ತೀವ್ರ ವ್ಯತ್ಯಾಸವಿದೆ. 130 ಕೋಟಿ ಜನಸಂಖ್ಯೆಯ ಇಲ್ಲಿನ ಪರಿಸ್ಥಿತಿಗಳಲ್ಲಿ ನಾವು ಪರಿಸರ ಅಳಿವು-ಉಳಿವು ಕುರಿತು ಮಾತನಾಡುವುದೇ ದುಸ್ಥರವಾಗಿದೆ. ಅಧಿಕಾರ ನಡೆಸುವ ನಾಯಕರು, ಇಲಾಖೆ ಮುಖ್ಯಸ್ಥರು ಹೇಗೆ ಕ್ರೀಯಾಶೀಲರಾಗಿ ಕಾರ್ಯ ಮಾಡುತ್ತಾರೆಯೋ ಹಾಗೆಯೇ, ಆ ಇಲಾಖೆ, ಅಧಿಕಾರಿಗಳು ಅದನ್ನು ಅನುಸರಿಸುತ್ತಾರೆ. ಆದರೆ ಇಲ್ಲಿನ ಸ್ಥಿತಿಗತಿಗಳು ಸರಿ ಇಲ್ಲ ಎಂದು ನಾವು ಭಾವಿಸದೇ ಆಶಾವಾದದಿಂದ ಪ್ರಯತ್ನಕ್ಕೆ ಮುಂದಾಗಬೇಕು. ಆಗ ಯಶಸ್ಸು ಖಂಡಿತ ಸಾಧ್ಯ. ಕೋಟಿವೃಕ್ಷ ಅಭಿಯಾನವೇ ಇದಕ್ಕೆ ಉತ್ತಮ ಉದಾಹರಣೆ ಎಂದು ಮಾಜಿ ಶಾಸಕ ಎಂ. ಬಿ. ಪಾಟೀಲ್ ಹೇಳಿದರು.

5 ವರ್ಷಗಳ ಹಿಂದೆ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಬೆಳೆದ ಸಸಿಗಳನ್ನು ತೆಗೆದುಕೊಂಡು ಹೋಗುವವರು ಇರುತ್ತಿರಲಿಲ್ಲ. ಇತ್ತೀಚಿಗೆ ಕೋಟಿ ವೃಕ್ಷ ಅಭಿಯಾನದ ಮೂಲಕ ಸಸಿಗಳನ್ನು ಹಂಚಲು ಆರಂಭಿಸಿದ ನಂತರ ಜನರಲ್ಲಿ ಸಸಿ ನೆಡುವ ಜಾಗೃತಿ ಮೂಡಿದೆ. ಈಗ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಹತ್ತಾರು ಲಕ್ಷ ಸಸಿಗಳು ಖಾಲಿಯಾಗುತ್ತಿವೆ. ಇದರಿಂದ ಜಿಲ್ಲೆಯ ಪರಿಸರದಲ್ಲಿ ಉತ್ತಮ ಬದಲಾವಣೆ ಬಂದಿದೆ ಎಂದು ಮಾಜಿ ಶಾಸಕ ಎಂ. ಬಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಜಾಗತೀಕ ತಾಪಮಾನ ಹಾಗೂ ಇತರೆ ಪ್ರಾಕೃತಿಕ ಸಮಸ್ಯೆಗಳಿಗೆ ಅಮೇರಿಕಾದ ಯೂಟರ್ನ್ ನೀತಿ ಸರಿಯಲ್ಲಾ: ಡಾ ಕುಶಾಲದಾಸ

ಪ್ರಕೃತಿಯ ರಕ್ಷಣೆಯ ಸಂಶೋಧನೆಗಳಲ್ಲಿ ಅಮೇರಿಕಾ, ಯೂರೋಪಿಯನ್ ರಾಷ್ಟ್ರಗಳು ಮುಂದಿದ್ದರೂ, ಆ ರಕ್ಷಣೆಯ ಕಾರ್ಯದಲ್ಲಿ ಅವರು ಮುಂದಾಗಿರುವುದು ಕಡಿಮೆ. ಏಷ್ಯಾದ, ಆಫ್ರಿಕಾದ ಕಾಡಿನ ಜನರೇ ಈ ಪ್ರಕೃತಿಯ ರಕ್ಷಕರು. ಏಕೆಂದರೆ ಅವರ ಹೃದಯದಲ್ಲಿಯೇ ಪ್ರಕೃತಿ ತುಂಬಿಕೊಂಡಿರುತ್ತದೆ. ಜಾಗತೀಕ ತಾಪಮಾನ ಸೇರಿದಂತೆ ಜಗತ್ತಿನ ಹಲವು ಗಂಭೀರ ಪ್ರಾಕೃತಿಕ ಸಮಸ್ಯೆಗಳಿಗೆ ಅಮೇರಿಕಾ ಅಧ್ಯಕ್ಷರೇ ಯೂಟರ್ನ್ ತೆಗೆದುಕೊಂಡಿರುವುದು ಅವರ ದ್ವಂಧ್ವ ನೀತಿಯನ್ನು ತೋರುತ್ತದೆ ಎಂದು ಯುನಿಸ್ಕೋ ಜೀವವಿಜ್ಞಾನ ಪೀಠದ ಮುಖ್ಯಸ್ಥರಾದ ಡಾ.ಕುಶಾಲ ದಾಸ ಹೇಳಿದರು.

ಅರಣ್ಯ ಇಲಾಖೆ ಅಧಿಕಾರಿಗಳಾದ ಪಿ. ಕೆ. ಪೈ, ಎನ್.ಕೆ. ಬಾಗಾಯತ, ಮಹೇಶ ಪಾಟೀಲ, ಪ್ರಭುಲಿಂಗ, ಎನ್. ಡಿ ಪಾಟೀಲ್ ಡೋಮನಾಳ, ಶರತ್ ರೂಡಗಿ, ಡಾ.ಮಹಾಂತೇಶ ಬಿರಾದಾರ, ಡಾ.ಮುರುಗೇಶ ಪಟ್ಟಣಶೆಟ್ಟಿ, ಬಸವರಾಜ ಬಿರಾದಾರ, ಪರುಗೌಡ ಪಾಟೀಲ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ: ಅಶೋಕ ಯಡಳ್ಳಿ

ಇದನ್ನೂ ಓದಿ:
ಬೀದರ್: ಅರಣ್ಯ ಇಲಾಖೆಯಿಂದ ನೂತನ ಪ್ರಯೋಗ; ಹಸಿರೀಕರಣಕ್ಕಾಗಿ 45 ಸಾವಿರಕ್ಕೂ ಹೆಚ್ಚು ಇಂಗು ಗುಂಡಿ ನಿರ್ಮಾಣ

ಚಿಕ್ಕಮಗಳೂರು: ಹಣ್ಣಿನ ಅರಣ್ಯಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆ ಅವರಿಂದ ಚಾಲನೆ