ಬೆಂಗಳೂರು: ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಅಧಿಕ ಪ್ರಮಾಣದ ಮಳೆ (Heavy Rain) ಸುರಿಯಲಿದೆ ಎಂದು ಹವಾಮಾನ ಇಲಾಖೆ ಕೆಲ ದಿನಗಳ ಹಿಂದೆಯೇ ಸೂಚನೆ (Weather Forecast) ನೀಡಿತ್ತು. ಸದ್ಯದ ಮಾಹಿತಿ ಪ್ರಕಾರ ಜುಲೈ 21ರ ತನಕ ಮಳೆಯ ವಾತಾವರಣ (Karnataka Weather) ಏರಿಳಿತದೊಂದಿಗೆ ಮುಂದುವರೆಯಲಿದ್ದು, ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ (Karnataka Rain) ಆರ್ಭಟ ಸದ್ಯಕ್ಕೆ ನಿಲ್ಲುವುದು ಅನುಮಾನ ಎನ್ನಲಾಗಿದೆ.
ಕರ್ನಾಟಕದಲ್ಲಿ ಮಲೆನಾಡು, ಕರಾವಳಿ ಸೇರಿದಂತೆ ಹಲವೆಡೆ ಕಳೆದ ಹತ್ತು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಬಿಡುವು ನೀಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ಮೈದುಂಬಿಕೊಂಡಿವೆ. ಇಂದು (ಜುಲೈ 19) ಸಹ ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಭಾಗ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ 3 ದಿನ ಭಾರೀ ಮಳೆಯಾಗಲಿದೆ ಎಂದು ಹೇಳಿರುವ ಹವಾಮಾನ ಇಲಾಖೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (ಇಂದು) ಘೋಷಿಸಿದೆ.
ಜುಲೈ 18ರಿಂದ ಜುಲೈ 23ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ತಿಳಿಸಿದ್ದು, ಇಂದು ಮುಂಜಾನೆಯಿಂದಲೇ ಮಳೆ ಸುರಿಯುತ್ತಿದೆ. ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದ ಮಳೆಯಿಂದ ಅಲ್ಲಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಲೇ ಇದ್ದು, ಇಂದು ಕೂಡಾ ಮುಂಜಾನೆಯಿಂದಲೇ ಜಿಟಿಜಿಟಿ ಮಳೆ ಶುರುವಾಗಿದೆ. ಕೇರಳದಿಂದ ಮಹಾರಾಷ್ಟ್ರದ ಕಡೆಗೆ ವೇಗವಾದ ಮೇಲ್ಮೈ ಸುಳಿಗಾಳಿ ಬೀಸುತ್ತಿದ್ದು, ಅದರ ಪ್ರಭಾವದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಇಂದು ಧಾರಾಕಾರ ಮಳೆಯಾಗಲಿದೆ. ಜತೆಗೆ ದಕ್ಷಿಣ ಒಳನಾಡಿನಲ್ಲೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಒಂದು ವಾರದ ತನಕ ಇದೇ ರೀತಿ ಮಳೆಯ ವಾತಾವರಣ ಮುಂದುವರೆಯಲಿದ್ದು ನಂತರ ಕಡಿಮೆಯಾಗುವ ನಿರೀಕ್ಷೆ ಇದೆ.
ಈಗಾಗಲೇ ಕೆಲ ದಿನಗಳಿಂದ ಮಲೆನಾಡು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಆಯಾ ಪ್ರದೇಶಗಳಿಗೆ ಅನುಗುಣವಾಗಿ ಸೂಕ್ತ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ. ಸದ್ಯದ ಮಾಹಿತಿ ಪ್ರಕಾರ ಇಂದು ಮತ್ತು ನಾಳೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ಉತ್ತಮ ಮಳೆಯ ನಿರೀಕ್ಷೆಯಿದೆ.
ಇದನ್ನೂ ಓದಿ:
Karnataka Weather Update: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ ಮೂರು ದಿನ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
Vijayapura Rain: ವಿಜಯಪುರ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಸುರಿದ ಮಳೆ