ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋ ವೈರಲ್; ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ

ಶಿವಮೊಗ್ಗದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಳಿನ್ ಕುಮಾರ್‌ರದ್ದು ಎನ್ನಲಾದ ವೈರಲ್ ಆದ ಆಡಿಯೋದಲ್ಲಿ ಈಶ್ವರಪ್ಪ ಹೆಸರು ಉಲ್ಲೇಖವಾಗಿತ್ತು.

ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋ ವೈರಲ್; ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ
ಸಚಿವ ಈಶ್ವರಪ್ಪ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋ ಕ್ಲಿಪ್ ಒಂದು ಜುಲೈ 18ರ ರಾತ್ರಿ ಬಹಿರಂಗಗೊಂಡು ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ ನಳಿನ್ ಕುಮಾರ್ ಕಟೀಲ್ ಧ್ವನಿ ತಮ್ಮದಲ್ಲ ಎಂದು ತಳ್ಳಿ ಹಾಕಿದ್ದು, ತನಿಖೆ ನಡೆಸಲು ಸಿಎಂಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆ ಕ್ಲೈಮ್ಯಾಕ್ಸ್ ಹಂತದಲ್ಲಿದೆ ಎನ್ನುತ್ತಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದು ಎನ್ನಲಾದ ಆಡಿಯೋ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ. ತುಳು ಭಾಷೆಯಲ್ಲಿ ಮಾತನಾಡಿರುವ 47 ಸೆಕೆಂಡ್ಗಳ ಆಡಿಯೋ ನಾಯಕತ್ವ ಬದಲಾವಣೆ ಕುರಿತ ಚರ್ಚೆಯನ್ನು ಮತ್ತಷ್ಟು ಪುಷ್ಠೀಕರಿಸಿದೆ.

ಆಡಿಯೋದಲ್ಲಿ ಇರುವುದೇನು?
ಯಾರಿಗೂ ಹೇಳಲು ಹೋಗಬೇಡಿ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಆ ಟೀಮ್ ಅನ್ನೇ ತೆಗೆಯುವುದು, ಪೂರ್ತಿ ಹೊಸ ಟೀಮ್ ಮಾಡುತ್ತಿದ್ದೇವೆ, ಈಗ ಸದ್ಯಕ್ಕೆ ಇನ್ನು ಯಾರಿಗೂ ಕೊಡಬೇಡಿ ಅಂದಿದ್ದಾರೆ, ಏನೂ ತೊಂದರೆ ಇಲ್ಲ, ಹೆದರಬೇಡಿ‌, ಇದ್ದೇವೆ, ಏನೂ ಹೆದರಬೇಡಿ, ಯಾರಾದರೂ‌ ಕೂಡಾ ನಮ್ ಕೈಯಲ್ಲೇ ಇನ್ನು ಇರುತ್ತದೆ, ಮೂರು ಹೆಸರು‌ ಇದೆ, ಯಾವುದು ಬೇಕಾದರೂ‌ ಆಗಲು ಚಾನ್ಸ್ ಇದೆ, ಇಲ್ಲಿನವರನ್ನು ಯಾರನ್ನೂ ಮಾಡುವುದಿಲ್ಲ, ದೆಹಲಿಯಿಂದಲೇ ಹಾಕುತ್ತಾರೆ‌‌

ಆದರೆ ಆಡಿಯೋ ಬಹಿರಂಗವಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆ ಧ್ವನಿ ತಮ್ಮದಲ್ಲ ಎಂದು ತಳ್ಳಿ ಹಾಕಿದ್ದು ಈ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಆಡಿಯೋ ಮೂಲಕ ನನಗೆ ಕಳಂಕ ತರುವ ಕೆಲಸ ಮಾಡಿದ್ದಾರೆ. ನನ್ನ ಧ್ವನಿಯನ್ನು ಅನುಕರಿಸಿ ಪಕ್ಷಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಿಡಿಗೇಡಿಗಳು ನಕಲಿ ಆಡಿಯೋ ವಾಟ್ಸಾಪ್ನಲ್ಲಿ ಹರಿಬಿಟ್ಟಿದ್ದಾರೆ. ಈ ಆಡಿಯೋದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ B.S.ಯಡಿಯೂರಪ್ಪಗೆ ಮನವಿ ಮಾಡುತ್ತೇನೆ. ಪಕ್ಷ, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇದನ್ನು ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬರುತ್ತದೆ. ಇದರ ಹಿಂದಿರುವ ಕಿಡಿಗೇಡಿಗಳ ಪತ್ತೆಗೆ ತನಿಖೆಗೆ ಒತ್ತಾಯಿಸುತ್ತೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ನಳಿನ್ ಕುಮಾರ್ ಒತ್ತಾಯಿಸಿದ್ದಾರೆ.

ಇತ್ತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ರಾಜ್ಯ ಬಿಜೆಪಿ ಆಡಿಯೋ ಕ್ಲಿಪ್ ನಕಲಿ ಎಂದು ಸ್ಪಷ್ಟೀಕರಣ ನೀಡಿದೆ. ಆದರೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಕೊನೆಯ ಹಂತದ ಬೆಳವಣಿಗೆಗಳು ನಡೆಯುತ್ತಿವೆ ಎಂಬ ಚರ್ಚೆಯ ಮಧ್ಯೆ ಬಹಿರಂಗಗೊಂಡಿರುವ ಕಟೀಲ್ ಹೆಸರಿನ ಆಡಿಯೋ ನಾಯಕತ್ವ ಕುರಿತ ಚರ್ಚೆಗಳು ನಿಜ ಎನ್ನುವಂತಾಗಿಸುವ ರೀತಿಯ‌ ವಾತಾವರಣ ಸೃಷ್ಟಿ ಮಾಡಿದೆ. ಇದು ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದೆ.

ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ
ಇನ್ನು ಶಿವಮೊಗ್ಗದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಳಿನ್ ಕುಮಾರ್‌ರದ್ದು ಎನ್ನಲಾದ ವೈರಲ್ ಆದ ಆಡಿಯೋದಲ್ಲಿ ಈಶ್ವರಪ್ಪ ಹೆಸರು ಉಲ್ಲೇಖವಾಗಿತ್ತು. ಸಚಿವ ಈಶ್ವರಪ್ಪರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಹೇಳಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಸುದ್ದಿಗೋಷ್ಠಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್: ಅದು ನನ್ನ ದನಿಯಲ್ಲ ಎಂದ ಕಟೀಲ್