Karnataka Weather Update: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ ಮೂರು ದಿನ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಜುಲೈ 21ರವರೆಗೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ತೀವ್ರತೆ ಹೆಚ್ಚಾಗಲಿದೆ.
ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಇನ್ನೂ 3 ದಿನಗಳ ಕಾಲ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಜುಲೈ 21ರವರೆಗೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ತೀವ್ರತೆ ಹೆಚ್ಚಾಗಲಿದೆ. ಜು.18 ಮತ್ತು 21ರವರೆಗೆ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಜುಲೈ 18ರಿಂದ 19ರವರೆಗೆ ಆರೆಂಜ್ ಅಲರ್ಟ್ ಹಾಗೂ ಜುಲೈ 20 ಮತ್ತು 21ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಮೈಸೂರು ಜಿಲ್ಲೆಗಳಿಗೆ ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಹೇಳಿಕೆ ನೀಡಿದದಾರೆ.
ಬೆಂಗಳೂರಿನಲ್ಲಿ ಇಂದು (ಜುಲೈ 18) ಮುಂಜಾನೆಯಿಂದಲೂ ತುಂತುರು ಮಳೆ ಸುರಿಯುತ್ತಿದೆ.
ಕರ್ನಾಟಕದ ವಿವಿಧೆಡೆ ಮಳೆ ಪುನರ್ವಸು ಮಳೆ ಆರ್ಭಟ: ಉಕ್ಕಿ ಹರಿಯುತ್ತಿವೆ ನದಿಗಳು ರಾಜ್ಯದ ಮಲೆನಾಡು, ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದಲ್ಲಿ ಮಳೆ ಚುರುಕಾಗಿದೆ. ಪುನರ್ವಸು ಮಳೆ ಬಿರುಸಾಗಿರುವುದು ರೈತರಲ್ಲಿ ಸಂತಸ ತಂದಿದೆ. ಕುಮಾರಧಾರಾ, ಕಪಿಲ, ಕಾವೇರಿ ಸೇರಿದಂತೆ ಹಲವು ಪ್ರಮುಖ ನದಿಗಳಲ್ಲಿ ಹರಿವು ಸುಧಾರಿಸಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಸಕಲೇಶಪುರ ತಾಲೂಕಿನ ದೋಣಿಗಾಲ್ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಬದಿ ಸುರಿದಿದ್ದ ಮಣ್ಣು ಕೊಚ್ಚಿ ಹೋಗಿದ್ದು, ರೈತರ ಜಮೀನಿಗೆ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಮಣ್ಣು ತೆಗೆಯಲಾಗಿತ್ತು. ತಡೆಗೋಡೆ ನಿರ್ಮಿಸದ ಕಾರಣ ನೂರಾರು ಲೋಡ್ ಮಣ್ಣು ಜಮೀನುಗಳಿಗೆ ನುಗ್ಗಿ ಬಂದಿದೆ. ಇದರಿಂದಾಗಿ 40 ಎಕರೆಗೂ ಹೆಚ್ಚು ಪ್ರದೇಶದಲ್ಲಿದ್ದ ಭತ್ತ, ಅಡಿಕೆ, ಮೆಣಸು ಬೆಳೆ ಹಾಳಾಗಿದೆ. ಗುತ್ತಿಗೆದಾರರ ವಿರುದ್ಧ ದೋಣಿಗಾಲ್ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಿಂದ ಬೃಹತ್ ಮರಗಳು ರಸ್ತೆಗೆ ಉರುಳಿವೆ. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದ ಸಮೀಪ ರಸ್ತೆ ಪಕ್ಕದಲ್ಲೇ ಭೂ ಕುಸಿತ ಸಂಭವಿಸಿದ್ದು ಗುಡ್ಡದ ಮಣ್ಣು ರಸ್ತೆಗೆ ಬಂದಿದೆ. ಇದರಿಂದಾಗಿ ಮಲ್ಲಂದೂರು-ಶಿರವಾಸೆ ನಡುವಿನ ರಸ್ತೆಯ ಸಂಪರ್ಕ ಕಡಿಗೊಂಡಿತು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಚುರುಕಾಗಿದ್ದು ಹಲವು ನದಿಗಳು ತುಂಬಿ ಹರಿಯುತ್ತಿವೆ. ಕುಮಾರಧಾರ ನದಿಯು ಮಳೆಯಿಂದ ತುಂಬಿ ಹರಿಯುತ್ತಿರುವ ಕಾರಣ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಸ್ನಾನಕ್ಕಾಗಿ ನದಿಗೆ ಇಳಿಯದಂತೆ ಭಕ್ತರಿಗೆ ಸೂಚನೆ ನೀಡಲಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ನದಿ ಬಳಿ ರಬ್ಬರ್ ಬೋಟ್ ಒಂದನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆ ಶಿವಮೊಗ್ಗ ಜಿಲ್ಲೆಯ ನಾನಾ ಭಾಗದಲ್ಲಿ ಪುನರ್ವಸು ಮಳೆ ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿದೆ. ಜನಜೀವನ ಹಾಗೂ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ನದಿ, ಕೆರೆ, ಕೊಳ್ಳಗಳು ತುಂಬಿವೆ. ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ಭಾಗದಲ್ಲಿ ಮಳೆ ಹೆಚ್ಚಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ಮಳೆ ಬೀಳುವ ಹೊಸನಗರ ತಾಲೂಕಿನಲ್ಲಿ ಮಳೆಯ ಹೊಡೆತ ಹೆಚ್ಚಾಗಿದೆ.
ಜಿಲ್ಲೆಯ ಪ್ರಮುಖ ನದಿಗಳಾದ ತುಂಗಾ, ಶರಾವತಿ, ಭದ್ರಾ ತುಂಬಿ ಹರಿಯುತ್ತಿದ್ದು, ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ವಿವಿಧ ಭಾಗಗಳಲ್ಲಿ ಹೊಲ, ಗದ್ದೆಗಳು ಜಲಾವೃತಗೊಂಡಿವೆ.
ಶಿವಮೊಗ್ಗ ನಗರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಲ್ಯಾಸ್ ನಗರದ ರಸ್ತೆಗಳು ಕೆಸರುಗದ್ದೆಯಂತಾಗಿವೆ. ರಸ್ತೆಯ ಮೇಲೆ ಓಡಾಡಲು ಆಗದೆ ಜನರು ಪರದಾಡುವಂತಾಗಿದೆ. ಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆಯ ಮೇಲೆ ಓಡಾಡಲು ಆಗದೇ ಜನರ ಪರದಾಡುವಂತಾಗಿದೆ.
(Karnataka Weather Update Heavy Rain Expected in Many Districts Orange and Yellow Alert for various parts)
ಇದನ್ನೂ ಓದಿ: ಬತ್ತಿ ಹೋಗಿದ್ದ ನದಿ-ನಾಲೆಗಳಲ್ಲಿ ನೀರಿನ ವೈಭವ; ಧಾರಾಕಾರ ಮಳೆಯಿಂದ ಒಂದೆಡೆ ಸಂತಸ ಮತ್ತೊಂದೆಡೆ ಸಂಕಷ್ಟ!
ಇದನ್ನೂ ಓದಿ: Heavy Rain: ಭಾರೀ ಮಳೆಗೆ ನದಿಯಂತಾದ ವಾಣಿಜ್ಯ ನಗರಿ ರಸ್ತೆಗಳು; ತೇಲಿಹೋದ ಐಷಾರಾಮಿ ಕಾರುಗಳು