Heavy Rain: ಭಾರೀ ಮಳೆಗೆ ನದಿಯಂತಾದ ವಾಣಿಜ್ಯ ನಗರಿ ರಸ್ತೆಗಳು; ತೇಲಿಹೋದ ಐಷಾರಾಮಿ ಕಾರುಗಳು
Mumbai Rain: ಮುಂಬೈನಲ್ಲಿ ಭಾರೀ ಪ್ರಮಾಣದ ಮಳೆ ಆಗುತ್ತಿದ್ದು, ಇನ್ನೂ ನಾಲ್ಕರಿಂದ ಐದು ದಿನಗಳ ಕಾಲ ಅಧಿಕ ಮಳೆ ಸುರಿಯಲಿದೆ ಎಂದು ಹವಾಮಾನ ವರದಿಗಳು ಮುನ್ಸೂಚನೆ ನೀಡಿವೆ.
ಮುಂಬೈ: ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಅವಾಂತರಗಳಾಗಿವೆ. ಮಹಾರಾಷ್ಟ್ರದ ಮುಂಬೈ (Mumbai) ಸುತ್ತಮುತ್ತ ನಿನ್ನೆ ರಾತ್ರಿಯಿಂದ ಇಂದು ಮುಂಜಾನೆ ತನಕವೂ ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ (Heavy Rain) ರಸ್ತೆ, ತಗ್ಗುಪ್ರದೇಶಗಳೆಲ್ಲಾ ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಬೈನ ವಿಕ್ರೋಲಿ, ಚೆಂಬೂರ್ ಸೇರಿದಂತೆ ಕೆಲವೆಡೆ ಮಳೆಯಿಂದಾಗಿ ಸುಮಾರು 15 ಜನ ಪ್ರಾಣ ಕಳೆದುಕೊಂಡ ದುರಂತ ಘಟನೆಗಳು ವರದಿಯಾಗಿವೆ. ಮುಂಬೈನಲ್ಲಿ ರಸ್ತೆಗಳು ಕೊಚ್ಚಿಹೋಗಿದ್ದಷ್ಟೇ ಅಲ್ಲದೇ ರೈಲ್ವೇ ಹಳಿಗಳ ಮೇಲೂ ನೀರು ನಿಂತ ಕಾರಣ ಸ್ಥಳೀಯ ರೈಲು ಸಂಚಾರವನ್ನು (Mumbai Railways) ನಿರ್ಬಂಧಿಸಲಾಗಿದೆ.
ಮುಂಬೈ ನಗರದಲ್ಲಿ ನಿನ್ನೆ ರಾತ್ರಿ 8 ಗಂಟೆಯಿಂದ ನಸುಕಿನ 2 ಗಂಟೆ ನಡುವಿನಲ್ಲಿ ಸುಮಾರು 156.94 ಮಿಲಿ ಮೀಟರ್ ಮಳೆಯಾಗಿದ್ದು, ಪೂರ್ವ ಭಾಗದಲ್ಲಿ 143.14 ಮಿಲಿ ಮೀಟರ್ ಹಾಗೂ ಪಶ್ಚಿಮ ಭಾಗದಲ್ಲಿ 125.37 ಮಿಲಿ ಮೀಟರ್ ಮಳೆ ದಾಖಲಾಗಿದೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ಮನೆಗಳೆಲ್ಲಾ ಜಲಾವೃತಗೊಂಡು ಜನರು ಪರದಾಡುವಂತಾಗಿದೆ. ಕೆಲವೆಡೆ ರಸ್ತೆ ಪಕ್ಕ ನಿಲ್ಲಿಸಿದ್ದ ವಾಹನಗಳೇ ಕೊಚ್ಚಿಕೊಂಡು ಹೋಗಿದ್ದು ಅವ್ಯವಸ್ಥೆ ಸೃಷ್ಟಿಯಾಗಿದೆ.
#WATCH | Maharashtra: Rainwater entered Mumbai’s Borivali east area following a heavy downpour this morning pic.twitter.com/7295IL0K5K
— ANI (@ANI) July 18, 2021
ಚುನಾಭಟ್ಟಿ, ಸಿಯಾನ್, ದಾದರ್, ಗಾಂಧಿ ಮಾರುಕಟ್ಟೆ, ಚೆಂಬೂರ್ ಮತ್ತು ಕುರ್ಲಾ ಎಲ್ಬಿಎಸ್ ರಸ್ತೆಗಳಲ್ಲಿ ನೀರು ಭಾರೀ ಪ್ರಮಾಣದಲ್ಲಿ ಹರಿದ ಪರಿಣಾಮ ವಾಹನಗಳು ತೇಲಿಕೊಂಡು ಹೋಗಿವೆ. ತಗ್ಗುಪ್ರದೇಶಗಳ ಮನೆಗಳಲ್ಲಂತೂ ಮೊಣಕಾಲಷ್ಟು ಎತ್ತರಕ್ಕೆ ನೀರು ನಿಂತ ಪರಿಣಾಮ ಜನರು ರಾತ್ರೋರಾತ್ರಿ ಮನೆಯಿಂದ ನೀರು ಖಾಲಿ ಮಾಡಲು ಪರದಾಡಿದ್ದಾರೆ. ಭಾರೀ ಮಳೆ ಸೃಷ್ಟಿಸಿರುವ ಅವಾಂತರದ ಕೆಲ ವಿಡಿಯೋಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಮಳೆಯ ತೀವ್ರತೆ ಎಷ್ಟಿತ್ತು ಎನ್ನುವುದನ್ನು ತೋರಿಸಿಕೊಟ್ಟಿವೆ.
#WATCH | Maharashtra: Daily commuters’ movement affected as roads waterlogged, in Gandhi Market area following incessant rainfall. pic.twitter.com/1LpwYNVK0j
— ANI (@ANI) July 17, 2021
ಸದ್ಯ ಮುಂಬೈನಲ್ಲಿ ಭಾರೀ ಪ್ರಮಾಣದ ಮಳೆ ಆಗುತ್ತಿದ್ದು, ಇನ್ನೂ ನಾಲ್ಕರಿಂದ ಐದು ದಿನಗಳ ಕಾಲ ಅಧಿಕ ಮಳೆ ಸುರಿಯಲಿದೆ ಎಂದು ಹವಾಮಾನ ವರದಿಗಳು ಮುನ್ಸೂಚನೆ ನೀಡಿವೆ. ನಿರಂತರ ಮಳೆಯಿಂದಾಗಿ ಹಳ್ಳ ಕೊಳ್ಳ, ನದಿಗಳೆಲ್ಲಾ ಮೈದುಂಬಿ ಹರಿಯುತ್ತಿದ್ದು, ಜಲಾಶಯಗಳಿಗೂ ಅತ್ಯಧಿಕ ಪ್ರಮಾಣದಲ್ಲಿ ನೀರು ಹೋಗುತ್ತಿದೆ. ಮಳೆ ಇದೇ ರೀತಿ ಮುಂದುವರೆದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ ಸ್ವರೂಪ ತಾಳುವ ಸಾಧ್ಯತೆ ಇದ್ದು, ಜನರು ಭಯಭೀತರಾಗಿದ್ದಾರೆ.
ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಜುಲೈ 21 ರ ತನಕ ಭಾರೀ ಮಳೆ ಸಾಧ್ಯತೆ; SSLC ಪರೀಕ್ಷೆಗೆ ತೆರಳುವಾಗ ಎಚ್ಚರದಿಂದಿರಿ ಮಕ್ಕಳೇ
Mumbai Rains: ಮುಂಬೈನಲ್ಲಿ ಭಾರೀ ಮಳೆಯಿಂದ ಕೆರೆಯಾದ ರಸ್ತೆಗಳು; ಬಸ್, ರೈಲು ಸಂಚಾರ ಅಸ್ಯವ್ಯಸ್ತ
Published On - 3:08 pm, Sun, 18 July 21