ಸತೀಶ್ ಜಾರಕಿಹೊಳಿ ದುಬೈ ಪ್ರವಾಸ: ಬೆಳಗಾವಿ ಬೆಂಕಿ ಜ್ವಾಲೆಯಾಗಿ ದುಬೈವರೆಗೆ ಹೋಗಿದೆ ಎಂದ ಆರ್.ಅಶೋಕ್

| Updated By: Rakesh Nayak Manchi

Updated on: Nov 20, 2023 | 2:55 PM

ಪಕ್ಷದ ನಾಯಕರ ಮೇಲೆ ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಮುನಿಸುಗೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ತನ್ನ ಬೆಂಬಲಿಗ ಶಾಸಕರ ಸಹಿತ ದುಬೈಗೆ ತೆರಳಲು ಯೋಜನೆ ರೂಪಿಸಿದ್ದರು. ಈ ವಿಚಾರ ತಿಳಿದ ಕಾಂಗ್ರೆಸ್ ಹೈಕಮಾಂಡ್, ಅದಕ್ಕೆ ಬ್ರೇಕ್ ಹಾಕಿತ್ತು. ಇದೀಗ ಕೆಲವು ಆಪ್ತರೊಂದಿಗೆ ಸತೀಶ್ ದುಬೈ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದೇನು? ಇಲ್ಲಿದೆ ನೋಡಿ.

ಸತೀಶ್ ಜಾರಕಿಹೊಳಿ ದುಬೈ ಪ್ರವಾಸ: ಬೆಳಗಾವಿ ಬೆಂಕಿ ಜ್ವಾಲೆಯಾಗಿ ದುಬೈವರೆಗೆ ಹೋಗಿದೆ ಎಂದ ಆರ್.ಅಶೋಕ್
ಆರ್.ಅಶೋಕ್ ಮತ್ತು ಸತೀಶ್ ಜಾರಕಿಹೊಳಿ
Follow us on

ಬೆಂಗಳೂರು, ನ.20: ಪಕ್ಷದ ನಾಯಕರ ಮೇಲೆ ಅದರಲ್ಲೂ ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ವಿರುದ್ಧ ಮುನಿಸುಗೊಂಡಿರುವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ತನ್ನ ಬೆಂಬಲಿಗ ಶಾಸಕರ ಸಹಿತ ದುಬೈಗೆ ತೆರಳಲು ಯೋಜನೆ ರೂಪಿಸಿದ್ದರು. ಈ ವಿಚಾರ ತಿಳಿದ ಕಾಂಗ್ರೆಸ್ ಹೈಕಮಾಂಡ್, ಅದಕ್ಕೆ ಬ್ರೇಕ್ ಹಾಕಿತ್ತು. ಇದೀಗ ಕೆಲವು ಆಪ್ತರೊಂದಿಗೆ ಸತೀಶ್ ದುಬೈ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ (R.Ashok), ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್​ ಸರ್ಕಾರ ಇರುವುದಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರ ಬೆಳಗಾವಿಯಿಂದಲೇ ಬಿದ್ದು ಹೋಗಿತ್ತು. ಇದೀಗ ಮತ್ತೆ ಬೆಳಗಾವಿ ಬೆಂಕಿ ಜ್ವಾಲೆಯಾಗಿ ದುಬೈವರೆಗೆ ಹೋಗಿದೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್​ ಸರ್ಕಾರ ಇರುವುದಿಲ್ಲ. ರಾಜ್ಯದಲ್ಲಿ ಒಬ್ಬರಲ್ಲ, ಮೂವರು ಮುಖ್ಯಮಂತ್ರಿಗಳಿದ್ದಾರೆಂದು ವ್ಯಂಗ್ಯವಾಡಿದ ಆರ್ ಆಶೋಕ್, ಕಾಂಗ್ರೆಸ್​​ನ ಅವನತಿಗೆ ಇದೆಲ್ಲವೂ ಕಾರಣವಾಗಲಿದೆ. ಮುಂದೆ ಅವರು ಯಾವ್ಯಾವ ದಿಕ್ಕಿನಲ್ಲಿ ಹೋಗುತ್ತಾರೋ ನೋಡೋಣ ಎಂದರು.

ಕಾಡುಗೋಡಿ ವಿದ್ಯುತ್ ಅವಘಡ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್.ಅಶೋಕ್, ತಾಯಿ ಮಗು ಸಾವಿಗೆ ಸರ್ಕಾರವೇ ಕಾರಣ ಎಂದರು. ಅಲ್ಲದೆ, ಇಂಧನ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕೆಲಸ ಮಾಡಲಿ. ಮೃತರಿಗೆ ತಲಾ 25 ಲಕ್ಷ ರೂ. ಪರಿಹಾರವನ್ನು ಸರ್ಕಾರ ಕೊಡಲಿ ಎಂದು ಆಗ್ರಹಿಸಿದರು.

ಸರ್ಕಾರದ ಆರು ತಿಂಗಳ ಸಾಧನೆಗಳ ಬಗ್ಗೆ ಸರ್ಕಾರಿ ಜಾಹೀರಾತು ವಿಚಾರವಾಗಿ ಮಾತನಾಡಿದ ಅಶೋಕ್, ಈ ಸರ್ಕಾರ ಅರೆಬರೆ ಗ್ಯಾರಂಟಿ ಕೊಟ್ಟಿದೆ. ಜಾಹೀರಾತು ಕೊಟ್ಟು ಗ್ಯಾರಂಟಿಗಳಿಂದಾಗಿ ಫಲಾನುಭವಿಗಳು ಖುಷಿಯಾಗಿದ್ದಾರೆ ಅಂದಿದ್ದಾರೆ. ಜನ ಖುಷಿಯಾಗಿದ್ದರೆ ಇನ್ನೂ ಯಾಕೆ ಜನ ಕ್ಯೂನಲ್ಲಿ ನಿಂತುಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರಲ್ಲದೆ, ಗ್ಯಾರಂಟಿಗಳು ಜನರಿಗೆ ತಲುಪಿಲ್ಲ. ಸರ್ಕಾರ ಸಮರ್ಪಕ ವಿದ್ಯುತ್ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್​ ಜೊತೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ: ಸತೀಶ್ ಜಾರಕಿಹೊಳಿ

ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ದತ್ತಮಾಲೆ ಧರಿಸುವ ವಿಚಾರವಾಗಿ ಮಾತನಾಡಿದ ಆರ್​.ಅಶೋಕ್, ಬಹಳಷ್ಟು ಜನ ಭಾರತ ಮಾತಾಕೀ ಜೈ ಎನ್ನಲು ಆರಂಭಿಸಿದ್ದಾರೆ. ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ನಮ್ಮ ತಂದೆ, ತಾತ ಎಲ್ಲರೂ ಮಾಲೆ ಧರಿಸಿದ್ದರು. ಶಿವಮಾಲೆ, ದತ್ತಮಾಲೆ, ಶಬರಿ ಮಾಲೆ ಹೀಗೆ ಅನೇಕ ಮಾಲೆ ಧರಿಸುವುದು ಭಾರತದ ಪರಂಪರೆ. ದೇವರ ಮೇಲೆ ಭಕ್ತಿ ತೋರಿಸುವುದಕ್ಕೆ ಭೇದಭಾವ ಬೇಡ. ಆ ತರ ಮಾಡುವುದು ಏನಿದ್ದರೂ ಅದು ಕಾಂಗ್ರೆಸ್ ಮಾತ್ರ ಎಂದರು.

ಹಿಂದೂ ದ್ವೇಷ ಮಾಡುವುದು, ಮುಸ್ಲಿಮರಿಗೆ ಸೆಲ್ಯೂಟ್ ಹೊಡೆದು ನಿಲ್ಲಬೇಕು ಎಂಬ ದುರಹಂಕಾರದ ಹೇಳಿಕೆಗೆ ನಮ್ಮಲ್ಲಿ ಅವಕಾಶ ಇಲ್ಲ ಎಂದು ಹೇಳಿದ ಅಶೋಕ್, ಸದನದಲ್ಲಿ ಸಚಿವ ಜಮೀರ್ ಹೇಳಿಕೆ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಜನರ ಸಮಸ್ಯೆ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸುತ್ತೇವೆ. ಉತ್ತರ ಕರ್ನಾಟಕ ವಿಚಾರಕ್ಕೆ ಹೆಚ್ಚು ಒತ್ತು ನೀಡುತ್ತೇವೆ. ಒಟ್ಟಾರೆಯಾಗಿ ಸಮರ್ಥ‌ ವಿಪಕ್ಷ ನಾಯಕನಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದರು.

ನಾಳೆಯಿಂದ ಕಲ್ಯಾಣ ಕರ್ನಾಟಕದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿರುವ ಬಗ್ಗೆ ಮಾತನಾಡಿದ ವಿಪಕ್ಷ ನಾಯಕರು, ನಮ್ಮ ಶಾಸಕರಿಗೆ ಕ್ಷೇತ್ರಗಳ ಬರದ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ರಾಜ್ಯ ಸರ್ಕಾರ ಎಚ್ಚರವಾಗದಿದ್ದರೆ ಬೇರೆ ಮದ್ದು ಹುಡುಕುತ್ತೇವೆ. ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ನಮಗೆ ಜೆಡಿಎಸ್​ ಕೂಡ ಬೆಂಬಲ ನೀಡಲಿದೆ ಎಂದರು.

ಅಸಮಾಧಾನಗೊಂಡ ಪಕ್ಷದ ನಾಯಕರ ಜೊತೆ ಮಾತನಾಡುವೆ. ವಿ.ಸೋಮಣ್ಣ ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡುತ್ತೇನೆ. ನಾನು, ಸೋಮಣ್ಣ ಸಹೋದರರ ರೀತಿ ಇದ್ದೇವೆ ಎಂದು ಹೇಳಿದ ಅಶೋಕ್, ಆದಿಚುಂಚನಗಿರಿ ಶ್ರೀಗಳು ಸಮರ್ಥ ವಿರೋಧಪಕ್ಷದ ನಾಯಕನಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ. ನಿನ್ನೆ ಸುತ್ತೂರು ಶ್ರೀಗಳಿಗೆ ಕರೆ ಮಾಡಿದ್ದೆ. ಎಲ್ಲಾ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ