ಅಸಮಾಧಾನಿತ ನಾಯಕರ ಜೊತೆ ಬಿಜೆಪಿ ಹೈಕಮಾಂಡ್ ಮಾತುಕತೆ: ಆರ್.ಅಶೋಕ್

ರಾಜ್ಯದಲ್ಲಿ ನಾನು ಮತ್ತು ಬಿವೈ ವಿಜಯೇಂದ್ರ ಅವರು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದ ವಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ಮೇಲೆ ಮುನಿಸುಗೊಂಡಿರುವ ವಿ.ಸೋಮಣ್ಣ ಸೇರಿದಂತೆ ಕೆಲವು ನಾಯಕರೊಂದಿಗೆ ಹೈಕಮಾಂಡ್ ನಾಯಕರು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಅಸಮಾಧಾನಿತ ನಾಯಕರ ಜೊತೆ ಬಿಜೆಪಿ ಹೈಕಮಾಂಡ್ ಮಾತುಕತೆ: ಆರ್.ಅಶೋಕ್
ವಿಪಕ್ಷ ನಾಯಕ ಆರ್.ಅಶೋಕ್
Edited By:

Updated on: Nov 25, 2023 | 10:23 PM

ತುಮಕೂರು, ನ.25: ರಾಜ್ಯ ಬಿಜೆಪಿ ಅಸಮಾಧಾನಿತ ನಾಯಕರೊಂದಿಗೆ ಹೈಕಮಾಂಡ್ ನಾಯಕರು ಮಾತುಕತೆ ನಡೆಸಲಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ 100ಕ್ಕೆ ಶೇ.98 ರಷ್ಟು ಮಂದಿ ಅಸಮಾಧಾನಗೊಂಡಿಲ್ಲ ಎಂದರು.

ಭಾರತೀಯ ಜನತಾ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದ ವಿಚಾರವಾಗಿ ಮಾತನಾಡಿದ ಅವರು, ಇಬ್ಬರು ಅಥವಾ ಮೂವರು ಅಸಮಾಧಾನಗೊಂಡಿರಬಹುದು ಅಷ್ಟೇ. 10 ದಿನದೊಳಗೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಮಾತನಾಡುತ್ತಾರೆ. ಅಸಮಾಧಾನಗೊಂಡವರ ಜತೆ ಮಾತುಕತೆಗೆ ನಾನೂ ಪ್ರಯತ್ನಿಸುತ್ತಿದ್ದೇನೆ ಎಂದರು.

ಸಿ.ಟಿ.ರವಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿ ವಿಜಯೇಂದ್ರ ಅವರು ಮಾತುಕತೆ ನಡೆಸಿದ್ದಾರೆ. ವಿ.ಸೋಮಣ್ಣ ಅವರನ್ನು ಸಂಪರ್ಕ ಮಾಡಲು ನಾನು ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ರಾಜ್ಯದಲ್ಲಿ ನಾನು ಮತ್ತು ಬಿ.ವೈ.ವಿಜಯೇಂದ್ರ ಅವರು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ನಮಗೆ ಕೊಟ್ಟಿರುವ ಕೆಲಸವನ್ನು ಸಫಲ ಮಾಡುವಂತಹ ಕೆಲಸ ಮಾಡುತ್ತೇವೆ ಎಂದರು.

ಇದನ್ನೂ ಓದಿ: ವಿ.ಸೋಮಣ್ಣ, ಯತ್ನಾಳ್​ ಅವರಲ್ಲಿನ ಶೇ.98ರಷ್ಟು ಅಸಮಾಧಾನ ಸರಿಪಡಿಸಲಾಗಿದೆ: ಆರ್​.ಅಶೋಕ್

ಬಿ.ವೈ.ವಿಜಯೇಂದ್ರ, ನಾನು ಈಗಾಗಲೇ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಬೀದರ್, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ ಜಿಲ್ಲಾ ಪ್ರವಾಸ ಮುಗಿಸಿದ್ದೇವೆ. ವಿಜಯೇಂದ್ರ ಕೂಡಾ ಎಲ್ಲಾ ಕಡೆ ಪ್ರವಾಸ ಮಾಡುತ್ತಿದ್ದಾರೆ. ಚಳಿಗಾಲ ಅಧಿವೇಶನದಲ್ಲಿ ಹೋರಾಟ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಂಕಿ-ಅಂಶ ಇಟ್ಟುಕೊಂಡು ಸರ್ಕಾರ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡುತ್ತೇವೆ. ಬರಗಾಲದಲ್ಲಿ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದರು.

ಸಚಿವ ಜಮೀರ್ ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಗ್ಯಾರಂಟಿ ಯೋಜನೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಡಿ.ಕೆ.ಶಿವಕುಮಾರ್ ಕೇಸ್ ವಾಪಸ್ ತೆಗೆದಿರುವುದನ್ನು ನೋಡಿದರೆ ಇಡೀ ಸಂಪುಟವೇ ಡಿಕೆ ಶಿವಕುಮಾರ್ ಪಾದದಡಿ ಬಿದಿದ್ದೆ ಅಂದರೆ ತಪ್ಪಾಗಲಾರದು. ಆ ರೀತಿಯಾಗಿ ನಡವಳಿಕೆ ನಡೆಯುತ್ತಿದೆ. ನಾವು ಹಾಗೂ ಜೆಡಿಎಸ್ ಸೇರಿ ಒಟ್ಟು 85 ಜನ ಸರ್ಕಾರಕ್ಕೆ ಚಳಿ ಜ್ವರ ಬಿಡಿಸುವಂತಹ ಕೆಲಸ ಮಾಡುತ್ತೇವೆ ಎಂದರು.

ಕೇಂದ್ರದಿಂದ ಬರ ಹಣ ಬಿಡುಗಡೆ ವಿಚಾರವಾಗಿ ಮಾತನಾಡಿದ ಅಶೋಕ್, ಅವರ ತಲೆಯಲ್ಲಿ ಬುದ್ದಿ ಇರಬೇಕು. ಇವರ ಸರ್ಕಾರದಲ್ಲಿ ದುಡ್ಡು ಇದಿದ್ದರೆ, ಇವರು ಪಾಪರ್ ಗಿರಾಕಿ ಅಲ್ಲ ಅಂದಿದ್ದರೆ, ಈ ಸರ್ಕಾರ ಪಾಪರ್ ಸರ್ಕಾರ ಅಲ್ಲ ಅಂತೇಳಿಯಾದರೆ ದುಡ್ಡು ಬಿಡುಗಡೆ ಮಾಡುತ್ತಿದ್ದರು. ಸರ್ಕಾರದ ಬಳಿ ಹಣ ಇಲ್ಲ. ಹೀಗಾಗಿ ದುಡ್ಡು ಬಿಡುಗಡೆ ಮಾಡುತ್ತಿಲ್ಲ. ಇವರು ಪಾಪರ್ ಆಗಿರುವುದಕ್ಕೆ ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಇಳಿಸಲು ಒಂದು ಗ್ಯಾಂಗ್ ರೆಡಿ

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ. ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಇಳಿಸಲು ಒಂದು ಗ್ಯಾಂಗ್ ರೆಡಿ ಆಗಿದೆ. ಅದು ಡಿಸಿಎಂ ಡಿ.ಕೆ.ಶಿವಕುಮಾರ್ ಗ್ಯಾಂಗ್ ಎಂದು ಅಶೋಕ್ ಹೇಳಿದರು. ಇನ್ನೊಂದು ಕಡೆ ಡಿಕೆರನ್ನು ಸಿಕ್ಕಿ ಹಾಕಿಸಲು ಸಿದ್ದರಾಮಯ್ಯ ಅವರು ಪರಮೇಶ್ವರ್ ಮನೆಯಲ್ಲಿ ಮೀಟಿಂಗ್ ಮಾಡಿದ್ದಾರೆ ಎಂದರು.

ಚಳಿಗಾಲದ ಅಧಿವೇಶನದಲ್ಲಿ ಬರಗಾಲದ ವಿಚಾರವನ್ನೇ ಮೊದಲಿಗೆ ಎತ್ತಿಕೊಳ್ಳಲಿದ್ದೇವೆ. ರೈತರಿಗೆ ಮತ್ತು ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸುತ್ತೇವೆ. ರೈತರು ಟಿಸಿ ಅಳವಡಿಕೆ ವೇಳೆ ಗ್ರೌಂಡಿಂಗ್ ಉಪ್ಪನ್ನೂ ಕೂಡ ರೈತರೆ ಕೊಡಬೇಕಾದ ಪರಿಸ್ಥಿತಿ ಇದೆ. ಇವರ ಯೋಗ್ಯತೆಗೆ ಕನಿಷ್ಠ ಉಪ್ಪು ಕೂಡ ಕೊಡೋಕಾಗುತ್ತಿಲ್ಲ ಅಂದರೆ ಈ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂದರು.

ಮೈತ್ರಿ ಸರ್ಕಾರವನ್ನ ಬಿಳಿಸಲು ಬೆಳಗಾವಿಯಲ್ಲಿಯೇ ಪ್ಲಾನ್ ಆಗಿತ್ತು. ಈಗಲೂ ಅಲ್ಲಿಂದಲೇ ತಯಾರಿ ನಡೀತಾ ಇದೆ ಎಂದ ಅಶೋಕ್, ಲೋಕಸಭಾ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ ಯಾರಿಗೆ ಎಷ್ಟು ಸೀಟು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ರಾಷ್ಟ್ರೀಯ ನಾಯಕರು, ಜೆಡಿಎಸ್ ವರಿಷ್ಠ ದೇವೇಗೌಡರು ಸೇರಿ ತೀರ್ಮಾನ ಮಾಡುತ್ತಾರೆ. ಮೊದಲೆಲ್ಲ 24, 25 ಕಡೆ ಸ್ಪರ್ಧೆ ಮಾಡುತ್ತಿದ್ದೆವು. ಈ ಬಾರಿ 28 ಕ್ಷೇತ್ರಗಳಲ್ಲಿಯೂ ಟಫ್ ಫೈಟ್ ಕೊಡುತ್ತೇವೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಇಲ್ಲಿ ಕ್ಲಿಕ್ ಮಾಡಿ

Published On - 10:17 pm, Sat, 25 November 23