ವಿ.ಸೋಮಣ್ಣ, ಯತ್ನಾಳ್ ಅವರಲ್ಲಿನ ಶೇ.98ರಷ್ಟು ಅಸಮಾಧಾನ ಸರಿಪಡಿಸಲಾಗಿದೆ: ಆರ್.ಅಶೋಕ್
ವಿ ಸೋಮಣ್ಣ, ಬಸನಗೌಡಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಸಿಟಿ ರವಿ ಅವರು ಬಿಜೆಪಿ ಪಕ್ಷದ ಮೇಲೆ ಅಸಮಾಧಾನಗೊಂಡಿದ್ದಾರೆ. ಇವರ ಅಸಮಾಧಾನ ಶಮನಗೊಳಿಸುವ ಯತ್ನ ಮುಂದುವರಿದಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಯತ್ನಾಳ್ ಮತ್ತು ಸೋಮಣ್ಣ ಅವರಲ್ಲಿನ ಬಹುಪಾಲು ಅಸಮಾಧಾನವನ್ನು ಸರಿಪಡಿಸಲಾಗಿದೆ ಎಂದರು.
ಚಿತ್ರದುರ್ಗ, ನ.25: ವಿ.ಸೋಮಣ್ಣ (V.Somanna), ಬಸನಗೌಡಪಾಟೀಲ್ ಯತ್ನಾಳ್ (Basangouda Patil Yatnal) ಅವರಲ್ಲಿನ ಶೇ.98ರಷ್ಟು ಅಸಮಾಧಾನ ಸರಿಪಡಿಸಲಾಗಿದೆ, ಶೇ.2ರಷ್ಟು ಬಾಕಿಯಿದೆ. ಇದನ್ನು ಕೂಡ ಸರಿಪಡಿಸಲಾಗುವುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದರು.
ಸಿದ್ಧಗಂಗಾಶ್ರೀ ಭೇಟಿ ವೇಳೆ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದ ವಿಚಾರವಾಗಿ ಮಾತನಾಡಿದ ಅಶೋಕ್, ಕಳೆದ ಚುನಾವಣೆಯಲ್ಲಿ ನಾನು ಕೂಡ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೆ. ವಿ.ಸೋಮಣ್ಣ ಜೊತೆ ನಮ್ಮ ಪಕ್ಷದ ಮುಖಂಡರು ಮಾತನಾಡುತ್ತಿದ್ದಾರೆ. ವಿ.ಸೋಮಣ್ಣ ಜೊತೆ ಮಾತನಾಡಿ ಎಲ್ಲವನ್ನೂ ಸರಿಪಡಿಸುತ್ತೇವೆ. ಸಿ.ಟಿ.ರವಿ, ರಮೇಶ್ ಜಾರಕಿಹೊಳಿ ಅಸಮಾಧಾನ ಸರಿಪಡಿಸಲಾಗಿದೆ ಎಂದರು.
135 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಸಿದ್ದರಾಮಯ್ಯ ಅವರು ನಾಲ್ಕು ದಿನ ದೆಹಲಿಯಲ್ಲಿದ್ದರು. ನನ್ನನ್ನ ಮುಖ್ಯಮಂತ್ರಿ ಮಾಡದಿದ್ದರೆ ಹೊರ ಹೋಗುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಪ್ರಶ್ನೆಗಳು ಸಹಜ ಎಂದರು.
ಸಂಪುಟದ ತೀರ್ಮಾನ ಅಕ್ರಮ, ಅನ್ಯಾಯ
ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಲು ಸಂಪಟ ಅನುಮೋದನೆ ನೀಡಿರುವ ವಿಚಾರವಾಗಿ ಮಾತನಾಡಿದ ಅಶೋಕ್, ರಾಜ್ಯ ಸಚಿವ ಸಂಪುಟದ ತೀರ್ಮಾನ ಅಕ್ರಮ, ಅನ್ಯಾಯ. ಮುಖ್ಯಮಂತ್ರಿ ಸಿದ್ಧರಾಮಯ್ಯ ವಕೀಲರಾಗಿದ್ದವರು. ಈ ರೀತಿಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲಾ ಒತ್ತಡದಿಂದಾಗಿ ಒಪ್ಪಿದ್ದಾರೆ ಎಂದರು.
ಸಿದ್ಧರಾಮಯ್ಯ ಸರ್ಕಾರಕ್ಕೆ ಈ ತೀರ್ಮಾನ ಕಪ್ಪು ಚುಕ್ಕೆಯಾಗಿದೆ. ಡಿಕೆ ಶಿವಕುಮಾರ್ ರಕ್ಷಣೆಗಾಗಿಯೇ ವಿಶೇಷ ಸಂಪುಟ ಸಭೆ ನಡೆದಿದೆ. ಎಲ್ಲವನ್ನೂ ರಹಸ್ಯವಾಗಿ ಸಿದ್ಧಪಡಿಸಿಕೊಂಡು ಏಕಾಏಕಿ ಘೋಷಣೆ ಮಾಡಿದ್ದಾರೆ. ನ್ಯಾಯಾಂಗಕ್ಕೆ ಮಣ್ಣೆರಚುವ ಕೆಲಸ ಸಿದ್ಧರಾಮಯ್ಯ ಸರ್ಕಾರ ಮಾಡಿದೆ. ಸಿಬಿಐ ಶೇ.70 ರಷ್ಟು ತನಿಖೆ ಮುಗಿಸಿದ ವೇಳೆ ತನಿಖೆಗೆ ನೀಡಿದ್ದ ಅನುಮತಿ ವಾಪಸ್ಗೆ ನಿರ್ಧಾರ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಹತಾಶರಾಗಿರುವ ವಿ ಸೋಮಣ್ಣ ಕುಟುಂಬದೊಂದಿಗೆ ಸಿದ್ದಗಂಗಾ ಮಠಕ್ಕೆ ಭೇಟಿ, ಶ್ರೀಗಳಿಂದ ಸಾಂತ್ವನ
ಡಿಕೆ ಶಿವಕುಮಾರ್ ಸದಸ್ಯರಾಗಿರುವ ಸಂಪುಟದಲ್ಲಿ ಅವರ ಪರ ತೀರ್ಮಾನ ಮಾಡಲಾಗಿದೆ. ಸಂಪುಟ ಸಭೆಯಲ್ಲಿ ಅವರು ಇರಲಿಲ್ಲ ಎಂಬುದು ಲೆಕ್ಕ ಅಲ್ಲ. ಈ ರೀತಿಯ ಪ್ರಕರಣಗಳಲ್ಲಿ ಹಿಂದೆ ಕೋರ್ಟ್ ಛೀಮಾರಿ ಹಾಕಿದ್ದೂ ಇದೆ ಎಂದರು.
ಬಿಜೆಪಿ ಆಡಳಿತದಲ್ಲಿ ಡಿಕೆ ಶಿವಕುಮಾರ್ ಪ್ರಕರಣವನ್ನು ಸಿಬಿಐಗೆ ಅಕ್ರಮವಾಗಿ ನೀಡಿದ ಆರೋಪ ವಿಚಾರವಾಗಿ ಮಾತನಾಡಿದ ಅಶೋಕ್, ಕಾಂಗ್ರೆಸ್ ಅವರಿಗೆ ಸಾಮಾನ್ಯ ಜ್ಞಾನ ಇರಲಿಲ್ಲವೇ? ಮುಖ್ಯಮಂತ್ರಿ ಮೌಖಿಕ ಆದೇಶವಿದ್ದರೂ ಸಹ ಊರ್ಜಿತ ಆಗುತ್ತದೆ. ಸರ್ಕಾರ, ಸಚಿವ ಸಂಪುಟ ನಗೆಪಾಟಲಿಗೀಡಾಗಿದೆ. ಈ ಬಗ್ಗೆ ಬಿಜೆಪಿ ಸದನದ ಒಳಗೆ, ಹೊರಗೆ ಹೋರಾಟ ನಡೆಸಲಿದೆ ಎಂದರು.
ಬಿಎಸ್ ಯಡಿಯೂರಪ್ಪ ಅವರಿಗೆ ಆದ ಸ್ಥಿತಿ ಬಿವೈ ವಿಜಯೇಂದ್ರಗೂ ಬರಲಿದೆ ಎಂಬ ಸಚಿವ ಆರ್ಬಿ ತಿಮ್ಮಾಪುರ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್, ತಿಮ್ಮಾಪುರ ಮೊದಲು ಬೆಳಗಾವಿ ಕಡೆ ನೋಡಲಿ. ದುಬೈಗೆ ಹೋಗಿ ಅವರನ್ನು ಕರೆದುಕೊಂಡು ಬರಲಿ. ಆಮೇಲೆ ನಮ್ಮ ಪಕ್ಷದ ಬಗ್ಗೆ ತಿಮ್ಮಪುರ ಮಾತಾಡಲಿ ಎಂದರು.
ಪಾಪರ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ
ಮಂಡ್ಯ, ದಾವಣಗೆರೆಯಲ್ಲಿ ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದು ಹೇಳುತ್ತಿದ್ದಾರೆ. ಅವರ ಕಾಂಗ್ರೆಸ್ ಪಕ್ಷದಲ್ಲೇ ನೂರು ತೂತುಗಳಿವೆ. ಅಳೆದು ತೂಗಿ ನಮ್ಮ ಹೈಕಮಾಂಡ್ ವಿಜಯೇಂದ್ರ ಆಯ್ಕೆ ಮಾಡಿದೆ. ನಾವು ಒಟ್ಟಾಗಿ ಹೋಗುತ್ತೇವೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ನೀಡಿ ಪಾಪರ್ ಆಗಿದೆ. ಪಾಪರ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಸಚಿವ ಜಮೀರ್ ಅಹ್ಮದ್ ಖಾನ್ ತೆಲಂಗಾಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ, ಹಿಂದುಗಳು ಮತ್ತು ಬಿಜೆಪಿಯವರು ಮುಸ್ಲಿಂ ಸ್ಪೀಕರ್ ಎದುರು ತಲೆಬಾಗಬೇಕಿಂದಿದ್ದರು. ಸಚಿವ ಜಮೀರ್ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಸದನದಲ್ಲಿ ಪ್ರಶ್ನಿಸುತ್ತೇವೆ, ಸರಿಯಾದ ಶಿಕ್ಷೆಗೆ ಆಗ್ರಹಿಸುತ್ತೇವೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ