ಬೆಂಗಳೂರು: ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಕೇವಲ ಇಬ್ಬರ ಮಾತು ಕೇಳಬಾರದು. ಬಸನಗೌಡ ಪಾಟೀಲ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ ಮಾತು ಮಾತ್ರ ಕೇಳಬಾರದು ಎಂದು ಬಸವ ಜಯಮೃತ್ಯುಂಜಯ ಶ್ರೀಗಳಿಗೆ ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿದರು. ವರದಿಯನ್ನು ಇಷ್ಟೇ ದಿನದಲ್ಲಿ ಕೊಡಿ ಎಂದು ಕೇಳಲು ಆಗಲ್ಲ. ಮೀಸಲಾತಿಗಾಗಿ ನಾವು 70 ವರ್ಷದಿಂದ ಕಾದಿದ್ದೇವೆ. ಇನ್ನು ಕೆಲವು ದಿನಗಳ ಕಾಲ ಕಾಯುವುದರಲ್ಲಿ ತಪ್ಪಿಲ್ಲ. ಈಗಲೇ ಮೀಸಲಾತಿ ಬೇಕೆನ್ನುವುದು ರಾಜಕೀಯ ಒತ್ತಡವಾಗುತ್ತೆ ಎಂದು ತಿಳಿಸಿದರು.
ಪಂಚಮಸಾಲಿ ಸಮುದಾಯದ 2A ಮೀಸಲಾತಿ ವಿಚಾರವಾಗಿ ಬಿಜೆಪಿ ನಾಯಕರು ಹಾಗೂ ರಾಜ್ಯ ಸಚಿವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಾಸಕರು, ಮಾಜಿ ಶಾಸಕರು ಭಾಗಿಯಾಗಿದ್ದರು.
2008ರಲ್ಲೇ 2A ಮೀಸಲಾತಿ ಬಗ್ಗೆ ಚರ್ಚೆಗೆ ಬಂತು. ಆಗ ಕಾನೂನು ಸಮಸ್ಯೆ ಬಂದು ಮೀಸಲಾತಿ ನೀಡಲಾಗಿಲ್ಲ. ನಮ್ಮ ಸಮುದಾಯದಲ್ಲಿ ಹಲವು ಪಂಗಡಗಳು ಇವೆ. ಹಲವರಿಗೆ ವಿಧಾನಸೌಧಕ್ಕೆ ಬರುವಷ್ಟೂ ಶಕ್ತಿ ಇಲ್ಲ. ಸ್ವಾಮೀಜಿಗಳು ರಾಜಕೀಯ ಮೀಸಲಾತಿಯನ್ನು ಕೇಳುತ್ತಿಲ್ಲ. ಈಗ ಶಿಕ್ಷಣ, ಉದ್ಯೋಗಕ್ಕೆ ಮೀಸಲಾತಿ ಕೇಳುತ್ತಿದ್ದಾರೆ. ಈ ಮೀಸಲಾತಿ ಕೇಳಿರುವುದು ಸಮಂಜಸವಾಗಿದೆ. ಆದರೆ ಒತ್ತಡ ಹಾಕುವುದು ಸಲ್ಲ ಎಂದು ನಿರಾಣಿ ಅಭಿಪ್ರಾಯಪಟ್ಟರು.
ನಿಮ್ಮ ತಂದೆ ಸಂಘದ ಸದಸ್ಯರಾಗಿದ್ದಾಗ ಏನು ಮಾಡಿದ್ದೀರಿ? ಆಗ ಎಲ್ಲಿ ಹೋಗಿತ್ತು ನಿನ್ನ ಬಾರುಕೋಲು?
ಯತ್ನಾಳ್ ಹಾಗೂ ಕಾಶಪ್ಪನವರ್ ವಿರುದ್ಧ ನಿರಾಣಿ ಹರಿಹಾಯ್ದರು. ಏಕವಚನದಲ್ಲಿ ‘ನೀನು’ ಎಂದು ಸಂಬೋಧಿಸಿ ಮಾತನಾಡಿದರು. ಯತ್ನಾಳ್ 25 ವರ್ಷಗಳಿಂದ ವಾಗ್ದಾಳಿ ಮಾಡುತ್ತಿದ್ದಾರೆ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸೋಮಣ್ಣ ಹಾಗೂ ನನ್ನ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯತ್ನಾಳ್ ಕಾಂಗ್ರೆಸ್‌ನ ಬಿ ಟೀಂನಂತೆ ಕೆಲಸ ಮಾಡ್ತಿದ್ದಾರೆ. ಸಚಿವರು ರಾಜೀನಾಮೆ ನೀಡುವಂತೆ ಯತ್ನಾಳ್ ಹೇಳಿದರು. ರಾಜೀನಾಮೆ ನೀಡುವಂತೆ ಹೇಳುವುದಕ್ಕೆ ಇವಱರು? ಅಷ್ಟಲ್ಲದೆ ಯತ್ನಾಳ್ ಬಿಎಸ್‌ವೈ ಬಗ್ಗೆಯೂ ಹಗುರವಾಗಿ ಮಾತಾಡ್ತಾರೆ. ರಾಜ್ಯದಲ್ಲಿ ಯಡಿಯೂರಪ್ಪನವರ ಕೊಡುಗೆ ಬಹಳಷ್ಟು ಇದೆ ಎಂದು ಗುಡುಗಿದರು.
ನೀನು ನಮ್ಮ ಪಕ್ಷದ ಆಶೀರ್ವಾದದಿಂದ ಶಾಸಕನಾಗಿದ್ದೀಯ. ಮೊದಲು ನೀನು ರಾಜೀನಾಮೆ ನೀಡು. ರಾಜೀನಾಮೆ ನೀಡಿ ಆಚೆ ಬಂದು ಮಾತಾಡು. ಯತ್ನಾಳ್ ಮಾಡಿರುವ ತಪ್ಪುಗಳ ಪಟ್ಟಿ ಬಹಳಷ್ಟು ಇದೆ. ಇದರ ಬಗ್ಗೆ ಅವರ ಮನಸಾಕ್ಷಿಯನ್ನೇ ಕೇಳಿಕೊಳ್ಳಲಿ ಎಂದು ನಿರಾಣಿ ಸವಾಲು ಹಾಕಿದರು.
ಸಮುದಾಯಕ್ಕೆ ಸೀಮಿತರಾಗಿರುವವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು
ನಿಮ್ಮ ತಂದೆ ಸಂಘದ ಸದಸ್ಯರಾಗಿದ್ದಾಗ ಏನು ಮಾಡಿದ್ದೀರಿ? ಆಗ ಎಲ್ಲಿ ಹೋಗಿತ್ತು ನಿನ್ನ ಬಾರುಕೋಲು, ಪಾದಯಾತ್ರೆ ಎಂದು ವಿಜಯಾನಂದ ಕಾಶಪ್ಪನವರ್ನ್ನು ಸಚಿವ ನಿರಾಣಿ ಪ್ರಶ್ನಿಸಿದರು. ನಿನ್ನೆ ನಡೆದಿದ್ದು ಕಾಶಪ್ಪನವರ ಕುಟುಂಬ ಸಮಾವೇಶದಂತಿತ್ತು. ಸಮುದಾಯದ ಸಮಾವೇಶ ಎಂದರೆ ಅಲ್ಲಿ ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ಪರಿಗಣಿಸಬೇಕು ಎಂದು ಹೇಳಿದರು. ಕಾಶಪ್ಪನವರ್ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರಾದ್ರು. ಯಾರನ್ನು ಕೇಳಿ ಅಧ್ಯಕ್ಷರಾಗಿ ಅವರನ್ನು ಘೋಷಿಸಿದ್ದರು? ಯಾರನ್ನೂ ಕೇಳದೆ ಸ್ವಯಂಪ್ರೇರಿತವಾಗಿ ಘೋಷಿಸಿಕೊಂಡಿದ್ದಾರೆ. ಕಾಶಪ್ಪನವರ್ ಪೊಲೀಸರ ಮೇಲೆ ಕೈ ಮಾಡಿದ್ದಾನೆ ಎಂದು ವಿರೋಧ ವ್ಯಕ್ತಪಡಿಸಿದರು.
ಸಮುದಾಯದ ಅಧ್ಯಕ್ಷರು, ಉಪಾಧ್ಯಕ್ಷರು ಯಾವ ಪಕ್ಷಕ್ಕೂ ಸೇರದವರು ಇರಬೇಕು. ಸಮುದಾಯಕ್ಕೆ ಸೀಮಿತರಾಗಿರುವವರನ್ನು ಆ ಸ್ಥಾನಕ್ಕೆ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಕ್ಕೆ 500 ಕೋಟಿ ರೂಪಾಯಿ ನೀಡಿದ್ದಾರೆ. ಇದು ಸಾಮಾನ್ಯವಾದ ವಿಷಯವಲ್ಲ. ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಸಮುದಾಯವನ್ನು ಒಡೆಯುವ ಕೆಲಸ ಮಾಡಬಾರದು. ಸಮುದಾಯಕ್ಕೆ 2A ಮೀಸಲಾತಿ ಸೀಗಲೇಬೇಕು ಅನ್ನೋದಾದ್ರೆ, ಬೇರೆಯವರ ಮಾತು ಕೇಳದೆ ಸ್ವಂತ ನಿರ್ಧಾರ ತೆಗೆದುಕೊಳ್ಳಿ ಎಂದು ಸಚಿವ ನಿರಾಣಿ ಜಯಮೃತ್ಯುಂಜಯಶ್ರೀಗಳಿಗೆ ಮನವಿ ಮಾಡಿದರು.
ಇದನ್ನೂ ಓದಿ: ಪಂಚಮಸಾಲಿ ಹೋರಾಟವನ್ನು ಕೆಲವರು ಸ್ವಾರ್ಥಕ್ಕಾಗಿ ಬಳಸಿದ್ದು ಖಂಡನೀಯ, ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿ.ಸಿ. ಪಾಟೀಲ್
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಪಡೆಯದೆ ಬೆಂಗಳೂರನ್ನು ಬಿಟ್ಟು ತೆರಳುವುದಿಲ್ಲ – ಜಯಮೃತ್ಯುಂಜಯ ಸ್ವಾಮೀಜಿ
Published On - 3:05 pm, Mon, 22 February 21