Toll Free 155245: ಹಲೋ ಕಂದಾಯ ಸಚಿವರೇ ಸಹಾಯವಾಣಿ ಲೋಕಾರ್ಪಣೆ, ಅಲೆದಾಟವಿಲ್ಲದೆ ಮನೆ ಬಾಗಿಲಿಗೆ ಪಿಂಚಣಿ ಸೇವೆ! ಏನಿದು ಸಹಾಯವಾಣಿ?
ಸಹಾಯವಾಣಿಯಿಂದ ಪಿಂಚಣಿ ಪಡೆಯುವವರಿಗೆ ಅನುಕೂಲವಾಗಲಿದೆ. ವೃದ್ಧರು, ವೃದ್ಧರು, ವಿಧವೆಯರು, ಌಸಿಡ್ ಸಂತ್ರಸ್ತರ ಖಾತೆಗೆ ಪಿಂಚಣಿ ಜಮೆಯಾಗಲಿದೆ. ಇದಕ್ಕಾಗಿ 10,000 ಕೋಟಿ ಹಣ ಮೀಸಲು ಇಡಲಾಗಿದೆ ಎಂದ ಕಂದಾಯ ಸಚಿವ ಆರ್.ಅಶೋಕ

ದೇಶದಲ್ಲೇ ಪ್ರಥಮ ಬಾರಿಗೆ ಕಂದಾಯ ಇಲಾಖೆಯ(Revenue Department) ಸೇವೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿದ ಹಲೋ ಕಂದಾಯ ಸಚಿವರೇ ಸಹಾಯವಾಣಿ (Toll Free) ಸಂಖ್ಯೆ 155245 ಇಂದು ಲೋಕಾರ್ಪಣೆಗೊಂಡಿತು. ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ನಲ್ಲಿ ನಡೆದ ಸಮಾರಂಭ ಕಾರ್ಯಕ್ರಮದಲ್ಲಿ ಸಹಾಯವಾಣಿ(HelpLine)ಯನ್ನು ಸಿಎಂ ಬಸವರಾಜ ಬೊಮ್ಮಾಯಿ(Basavaraja Bommai) ಮತ್ತು ಕಂದಾಯ ಸಚಿವ ಆರ್.ಅಶೋಕ (R.Ashoka) ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ, ಈ ಸಹಾಯವಾಣಿಯಿಂದ ಪಿಂಚಣಿ ಪಡೆಯುವವರಿಗೆ ಅನುಕೂಲವಾಗಲಿದೆ. ವೃದ್ಧರು, ವಿಧವೆಯರು, ಌಸಿಡ್ ಸಂತ್ರಸ್ತರ ಖಾತೆಗೆ ಪಿಂಚಣಿ ಜಮೆಯಾಗಲಿದೆ. ಇದಕ್ಕಾಗಿ 10,000 ಕೋಟಿ ಹಣ ಮೀಸಲು ಇಡಲಾಗಿದೆ. 4 ಲಕ್ಷ ಬೋಗಸ್ ಪಿಂಚಣಿ ಪ್ರಮಾಣ ಪತ್ರ ರದ್ದು ಮಾಡಿದ್ದೇವೆ
ಹಲೋ ಅಂದರೆ ಹೇಗೆ ಪಿಂಚಣಿ ಸಿಗುತ್ತೆ ಅನ್ನೋ ಕುತೂಹಲ ಇತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು, ಅರ್ಜಿದಾರರ ಆಧಾರ್, ಬ್ಯಾಂಕ್ ಖಾತೆ ನಂಬರ್ ಎಂಟ್ರಿ ಮಾಡಿದರೆ ಹಣ ಅವರ ಖಾತೆಗೆ ನೇರವಾಗಿ ಹೋಗುತ್ತೆ ಎಂದರು.
ಪಿಂಚಣಿ ಅರ್ಹರ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ. ಅಷ್ಟಿದ್ದರೂ ಅವರಿಗೆ ಮತ್ತೆ ದಾಖಲೆ ಕೊಡುವ ಪರಿಸ್ಥಿತಿ ಇತ್ತು. ಈಗ ನೂರು ರೂಪಾಯಿ ಕೊಟ್ಟರೆ ನೂರು ರೂಪಾಯಿ ಫಲಾನುಭವಿಗಳ ಖಾತೆಗೆ ಹೋಗುತ್ತದೆ. ಹಣ ಅವರ ಖಾತೆಗೆ ನೇರವಾಗಿ ಹೋಗುತ್ತದೆ. ಅಧಿಕಾರಿಗಳು ಮನೆ ಬಾಗಿಲಿಗೆ ಹೋಗುವಂತಹ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
ಹಲೋ ಕಂದಾಯ ಸಚಿವರೇ ಸಹಾಯವಾಣಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದ್ದು, ಈ ಬಗ್ಗೆ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮುಖ್ಯಮಂತ್ರಿ @BSBommai ಅವರು ಇಂದು ಹಲೋ ಕಂದಾಯ ಸಚಿವರೆ (72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ) ಸಹಾಯ ವಾಣಿಯನ್ನು ಲೋಕಾರ್ಪಣೆ ಮಾಡಿದರು. ಆಸಿಡ್ ದಾಳಿಗೆ ಒಳಗಾಗಿರುವ ಮಹಿಳೆಯರಿಗೆ ನೀಡಲಾಗುತ್ತಿದ್ದ 3 ಸಾವಿರ ಮಾಸಾಶನವನ್ನು 10 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದ್ದು, ಸಂತ್ರಸ್ತ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿದರು.1/2 pic.twitter.com/UuktBJOflt
— CM of Karnataka (@CMofKarnataka) May 13, 2022
ಏನಿದು ಹಲೋ ಕಂದಾಯ ಸಚಿವರೇ ಸಹಾಯವಾಣಿ?
ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರು, ವಿಧವೆಯರು, ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯರು, ತೃತೀಯ ಲಿಂಗಿಗಳು ಸೇರಿದಂತೆ ವಿವಿಧ ಸಂತ್ರಸ್ತರಿಗೆ ನೀಡುವ ಪಿಂಚಣಿಗಳನ್ನು ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ ಮಂಜೂರು ಆದೇಶ ತಲುಪುವಂತೆ ಮಾಡುವ ಸಹಾಯವಾಣಿಯಾಗಿದೆ. ನಾಗರಿಕರು ದೂರವಾಣಿ ಕರೆ ಮೂಲಕ ತಮ್ಮ ಆಧಾರ್ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದು. ಈ ಮಾಹಿತಿ ಆಧರಿಸಿ ಗ್ರಾಮಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಅಲ್ಲದೆ, ನವೋದಯ ಮೊಬೈಲ್ ಆಪ್ ಮೂಲಕ ಮಾಹಿತಿಯನ್ನು ನಮೂದಿಸಲಿದ್ದಾರೆ. ನಂತರ ಪ್ರಕ್ರಿಯೆಗಳು ಆರಂಭಗೊಂಡು 72 ಗಂಟೆಗಳಲ್ಲಿ ಪಿಂಚಣಿ ಮಂಜೂರು ಆದೇಶ ಮನೆ ಬಾಗಿಲಿಗೆ ತಲುಪಲಿದೆ. ಇದರಿಂದಾಗಿ ಫಲಾನುಭವಿಗಳು ಅಥವಾ ನಾಗರಿಕರಿಗೆ ಕಚೇರಿಗಳಿಗೆ ಅಲೆದಾಡುವ, ಇಂದು ನಾಳೆ ಎಂದು ಸುತ್ತಾಡುವ ಮತ್ತು ಮಧ್ಯವರ್ತಿಗಳ ಹಾವಳಿಯೂ ಇಲ್ಲದೆ ಪಿಂಚಣಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.
Published On - 5:53 pm, Fri, 13 May 22